ಪಾಕಿಸ್ತಾನ ಬಸ್‌ನಲ್ಲಿ ಭಾರಿ ಸ್ಫೋಟ : ಚೀನಾ ಎಂಜಿನಿಯರ್‌ಗಳು ಸೇರಿ 8 ಮಂದಿ ಸಾವು!
ಪಾಕಿಸ್ತಾನ ಬಸ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಚೀನಾ ಎಂಜಿನಿಯರ್‌ಗಳು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ.
ಉತ್ತರ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿದೆ. ದಾಳಿಯಲ್ಲಿ ಚೀನಾದ ಎಂಜಿನಿಯರ್‌ಗಳು ಮತ್ತು ಪಾಕಿಸ್ತಾನಿ ಸೈನಿಕರನ್ನು ಕರೆದೊಯ್ಯುವ ಬಸ್ ಅನ್ನು ಗುರಿಯಾಗಿಸಿಕೊಂಡು ಸ್ಪೋಟಗೊಳಿಸಲಾಗಿದೆ. ಘಟನೆಯಲ್ಲಿ ಚೀನಾದ 4 ಎಂಜಿನಿಯರುಗಳನ್ನು ಒಳಗೊಂಡಂತೆ ಇಬ್ಬರು ಅರೆಸೈನಿಕ ಭದ್ರತಾ ಸಿಬ್ಬಂದಿಗಳು ಸೇರಿ ಒಟ್ಟು 8 ಜನ ಸಾವನ್ನಪ್ಪಿದ್ದಾರೆ. ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪಾಕಿಸ್ತಾನದ ವರದಿಗಳು ತಿಳಿಸಿವೆ.
ಬಸ್ಸು ದಾಸು ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿರುವ ಚೀನಾದ ಎಂಜಿನಿಯರ್‌ಗಳನ್ನು ಹೊತ್ತೊಯ್ಯುತ್ತಿತ್ತು. ಬಸ್‌ನಲ್ಲಿ ಕನಿಷ್ಠ 30 ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಹಲವಾರು ಗಾಯಾಳುಗಳು ಗಂಭೀರವಾಗಿದ್ದರಿಂದ ಸಾವನ್ನಪ್ಪುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ.
ಸ್ಫೋಟವನ್ನು ರಸ್ತೆಬದಿಯಲ್ಲಿ ಇಡಲಾಗಿತ್ತೀ ಅಥವಾ ಬಸ್ಸಿನೊಳಗೆ ಇಡಲ್ಪಟ್ಟಿದೆಯೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
“ಸ್ಫೋಟದ ನಂತರ ಬಸ್ ಆಳವಾದ ಕಂದರಕ್ಕೆ ಧುಮುಕಿದೆ. ಇದರಲ್ಲಿ ಒಬ್ಬ ಚೀನಾದ ಎಂಜಿನಿಯರ್ ಮತ್ತು ಓರ್ವ ಸೈನಿಕ ಕಾಣೆಯಾಗಿದ್ದಾನೆ. ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಗಾಯಗೊಂಡವರನ್ನು ಏರ್ ಆಂಬುಲೆನ್ಸ್ ಮೂಲಕ ರಕ್ಷಿಸಲು ಇಡೀ ಸರ್ಕಾರಿ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ” ಎಂದು ಹಜಾರಾ ಪ್ರದೇಶದ ಹಿರಿಯ ಆಡಳಿತಾಧಿಕಾರಿ ತಿಳಿಸಿದರು.