100 ರೈತರ ವಿರುದ್ದ ದೇಶದ್ರೋಹ ಪ್ರಕರಣ ದಾಖಲು; ಪ್ರಜಾಪ್ರಭುತ್ವಕ್ಕೆ ಅವಮಾನ ಎಂದ ರಾಜಕೀಯ ಪಕ್ಷಗಳು!

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಕಳೆದ ನವೆಂಬರ್ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ. ಈ ನಡುವೆ ಹರಿಯಾಣದ ರೈತರು ಅಲ್ಲಿನ ಉಪ ಸ್ಪೀಕರ್‌ ರಣಬೀರ್‌ ಗಂಗ್ವಾ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 100 ರೈತರ ವಿರುದ್ದ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ಧಾರೆ. ಇದನ್ನು ವಿವಿಧ ರಾಜಕೀಯ ಪಕ್ಷಗಳು ಖಂಡಿಸಿವೆ.

ಭಾನುವಾರ ಸಿರ್ಸಾದ ಚೌಧರಿ ದೇವಿ ಲಾಲ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗ್ವಾ ಅವರು ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ವಿವಿಯಿಂದ ಹೊರಬಂದ ಗಂಗ್ವಾ ಅವರ ಕಾರನ್ನು ತಡೆದು ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು 5 ರೈತರನ್ನು ಬಂಧಿಸಿದ್ದಾರೆ. ಅಲ್ಲದೆಮ ರೈತರು ಕಾರಿನ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

“ಬಿಜೆಪಿ ನಾಯಕರ ವಾಹನದ ಮೇಲೆ ಹಲ್ಲೆ ನಡೆಸಿದ ಆರೋಪದ ಆಧಾರದಲ್ಲಿ ಹರಿಯಾಣ ಪೊಲೀಸರು 100 ಕ್ಕೂ ಹೆಚ್ಚು ರೈತರ ಮೇಲೆ ದೇಶದ್ರೋಹ ಆರೋಪ ಹೊರಿಸುತ್ತಿರುವುದು ವಿಪರ್ಯಾಸ. ಅಲ್ಲದೆ, ಈ ಹಳತಾದ ಕಾನೂನು ನಮ್ಮಲ್ಲಿ ಏಕೆ ಇದೆ ಎಂದು
ತೃಣಮೂಲ ಕಾಂಗ್ರೆಸ್ ಸಂಸದೆ ಮಾಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹೊತ್ತಿ ಉರಿಯುತ್ತಿದೆ ದಕ್ಷಿಣ ಆಫ್ರಿಕಾ; 70 ಭಾರತೀಯರು ಸೇರಿ 220 ಜನರ ಹತ್ಯೆ!

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಬ್ರಿಟಿಷರು ಬಳಸಿದ್ದ ದೇಶದ್ರೋಹ ಕಾನೂನು ಇಂದಿಗೂ ಅಗತ್ಯವಿದೆಯೇ ಎಂದು ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಹೀಗಿರುವಾಗ ಸ್ಪೀಕರ್‌ ಅವರ ವಾಹನದ ಕಾರಿನ ಗಾಜು ಒಡೆದಿದ್ದಕ್ಕಾಗಿ ರೈತರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ, ರೈತ ಹೋರಾಟದ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.

2020ರ ನವೆಂಬರ್‌ನಲ್ಲಿ ಪ್ರಾರಂಭವಾದ ರೈತರ ಆಂದೋಲನದ ಸಂದರ್ಭದಲ್ಲಿ ರೈತರ ವಿರುದ್ಧ ಹರಿಯಾಣ ಪೊಲೀಸರು ದಾಖಲಿಸಿದ ಮೊದಲ ದೇಶದ್ರೋಹ ಪ್ರಕರಣ ಇದಾಗಿದೆ. ಕೃಷಿ ಮುಖಂಡರಾದ ಹರ್ಚರಣ್ ಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ಜೊತೆಗೆ 100 ಅಪರಿಚಿತ ರೈತರ ವಿರುದ್ಧ ದೇಶದ್ರೋಹ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಸಿರ್ಸಾ ಪೊಲೀಸ್ ಅಧೀಕ್ಷಕರನ್ನು ವರ್ಗಾಯಿಸಿದೆ.

“ಹಿಂಸಾತ್ಮಕ ಆಂದೋಲನವನ್ನು ಪ್ರಜಾಪ್ರಭುತ್ವ ಮತ್ತು ಶಾಂತಿಯುತ ದೇಶದಲ್ಲಿ ಮುಂದುವರಿಸಲು ಅನುಮತಿಸಲಾಗುವುದಿಲ್ಲ” ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ: ಊಹಾಪೋಹ: ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿಯನ್ನು ತೊರೆಯಲಿದ್ದಾರೆ ರಂದೀಪ್ ಸುರ್ಜೇವಾಲಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights