ಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವು!

ಅಘ್ಘಾನಿಸ್ತಾನದ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ರಾಯಿಟರ್ಸ್ ಮುಖ್ಯ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ಸಾವನ್ನಪ್ಪಿದ್ದಾರೆ ಎಂದು ಟೋಲೋ ನ್ಯೂಸ್ ಶುಕ್ರವಾರ ವರದಿ ಮಾಡಿದೆ.

ಕಂದಹಾರ್‌ನಲ್ಲಿ ನಡೆಯುತ್ತಿರುವ ಘರ್ಷಣೆಯ ಬಗ್ಗೆ ಹಾಗೂ ಅಲ್ಲಿನ ಪರಿಸ್ಥಿತಿಯ ಬಗ್ಗೆ ಭಾರತೀಯ ಪತ್ರಕರ್ತ ಸಿದ್ದಿಕಿ ವರದಿ ಮಾಡುತ್ತಿದ್ದರು.

ಪಾಕಿಸ್ತಾನದೊಂದಿಗೆ ಹೊಂದಿರುವ ಪ್ರಮುಖ ಗಡಿಯನ್ನು ಮರುಪಡೆಯಲು ಅಫ್ಘಾನ್‌ ಕಾರ್ಯಾಚರಣೆ ಆರಂಭಿಸಿದ ನಂತರ ಅಫ್ಘಾನ್ ಪಡೆಗಳು ಸ್ಪಿನ್ ಬೋಲ್ಡಾಕ್‌ನಲ್ಲಿ ತಾಲಿಬಾನ್‌ಗಳೊಂದಿಗೆ ಘರ್ಷಣೆ ನಡೆಸಿದವು ಎಂದು ಎಎಫ್‌ಪಿ ವರದಿ ಮಾಡಿದೆ.

ಜುಲೈ 13 ರಂದು, ಅವರು ಮತ್ತು ಇತರ ವಿಶೇಷ ಪಡೆಗಳು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ಕನಿಷ್ಠ ಮೂರು ಸುತ್ತಿನ ಗುಂಡಿನ ಚಕಮಕಿ ನಡೆದಿದ್ದವು ಎಂದು ಅವರು ವಿಡಿಯೊ ಸಮೇತ ವರದಿ ಮಾಡಿದ್ದರು.

ಪುಲಿಟ್ಜೆರ್ ಪ್ರಶಸ್ತಿ ವಿಜೇತ ಪತ್ರಕರ್ತ

2018 ರಲ್ಲಿ ತನ್ನ ‘ಫೀಚರ್‌ ಫೋಟೋಗ್ರಾಫಿ’ ಸರಣಿಗಾಗಿ ಪ್ರತಿಷ್ಠಿತ ಪುಲಿಟ್ಜೆರ್‌‌ ಪ್ರಶಸ್ತಿಯನ್ನು ಅವರು ಪಡೆದಿದ್ದರು. ಆ ವರ್ಷ ರಾಯ್ಟರ್ಸ್‌ನ ಒಟ್ಟು ಏಳು ಪತ್ರಕರ್ತರಿಗೆ ಪ್ರಶಸ್ತಿ ಬಂದಿದ್ದು, ಅದರಲ್ಲಿನ ಇಬ್ಬರು ಭಾರತೀಯರಲ್ಲಿ ದಾನಿಶ್ ಸಿದ್ದೀಕಿ ಒಬ್ಬರಾಗಿದ್ದಾರೆ. ಅಂದಿನ ಅವರ ಫೋಟೊ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ದಾಖಲಿಸಿತ್ತು.

ಫೋಟೊ ಜರ್ನಲಿಸ್ಟ್ ಆಗಿದ್ದ ಸಮಯದಲ್ಲಿ ದಾನಿಶ್, ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ ಕಾಂಗ್ ಪ್ರತಿಭಟನೆಗಳು, ನೇಪಾಳ ಭೂಕಂಪಗಳು, ಉತ್ತರ ಕೊರಿಯಾದಲ್ಲಿ ನಡೆದ ಕ್ರೀಡಾಕೂಟಗಳ ವರದಿಗಳ ಸಹಿತ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ವರದಿಗಳನ್ನು ಮಾಡಿದ್ದರು.

ಅವರ ಫೋಟೋಗಳು ಹಲವಾರು ನಿಯತಕಾಲಿಕೆಗಳು, ಪತ್ರಿಕೆಗಳು, ಸ್ಲೈಡ್‌ಶೋಗಳು ಮತ್ತು ಗ್ಯಾಲರಿಗಳಲ್ಲಿ ವ್ಯಾಪಕವಾಗಿ ಪ್ರಕಟಗೊಂಡಿವೆ.

 

ದಾನಿಶ್ ಸಿದ್ದೀಕಿ ಅವರ ನಿಧನವನ್ನು ಖಂಡಿಸಿ, ಅಫ್ಘಾನಿಸ್ತಾನದ ಭಾರತದ ರಾಯಭಾರಿ ಟ್ವೀಟ್ ಮಾಡಿದ್ದು, “ನಿನ್ನೆ ರಾತ್ರಿ ಕಂದಹಾರ್‌ನಲ್ಲಿ ಸ್ನೇಹಿತ ದಾನಿಶ್ ಸಿದ್ದೀಕಿ ಹತ್ಯೆಯ ದುಃಖದ ಸುದ್ದಿ ತಿಳಿದು ತೀವ್ರವಾಗಿ ವಿಚಲಿತರಾಗಿದ್ದೇನೆ. ಭಾರತೀಯ ಪತ್ರಕರ್ತ ಮತ್ತು ಪುಲಿಟ್ಜೆರ್ ಪ್ರಶಸ್ತಿ ವಿಜೇತ ಅಫಘಾನ್ ಭದ್ರತಾ ಪಡೆಗಳೊಂದಿಗೆ ಇದ್ದರು. 2 ವಾರಗಳ ಹಿಂದೆ ಅವರು ಕಾಬೂಲ್‌ಗೆ ತೆರಳುವ ಮೊದಲು ನಾನು ಅವರನ್ನು ಭೇಟಿಯಾಗಿದ್ದೆ. ಅವರ ಕುಟುಂಬ ಮತ್ತು ರಾಯಿಟರ್ಸ್‌ಗೆ ಸಂತಾಪ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾಸ್ಕ್ ಹಾಕುವುದು ಮುಖಕ್ಕೋ – ಕಾಲಿಗೋ?; ಬಿಜೆಪಿ ಸಚಿವರ ಫೋಟೋ ವೈರಲ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights