ಟೋಕಿಯೊ ಒಲಿಂಪಿಕ್ ಗ್ರಾಮದಲ್ಲಿ 2 ಕ್ರೀಡಾಪಟುಗಳಿಗೆ ಕೊರೊನಾ ಪಾಸಿಟಿವ್..!
ಟೋಕಿಯೊ ಒಲಿಂಪಿಕ್ ಗ್ರಾಮದಲ್ಲಿ 2 ಕ್ರೀಡಾಪಟುಗಳಿಗೆ ಕೊರೊನಾ ಸೋಂಕು ತಗುಲಿದ್ದು ಆಟಗಾರರು ಆತಂಕಗೊಂಡಿದ್ದಾರೆ.
ನಿನ್ನೆಯಷ್ಟೇ ಪಂದ್ಯ ನಡೆಯುವ ಟೋಕಿಯೊ ಗ್ರಾಮದಲ್ಲಿ ಕೋವಿಡ್-19 ಕೇಸು ಪತ್ತೆಯಾಗಿದ್ದು, ಇಂದು ಗ್ರಾಮದ ಇಬ್ಬರು ಕ್ರೀಡಾಪಟುಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಪ್ರಕರಣಗಳು ಒಲಿಂಪಿಕ್ಸ್ ಬಗ್ಗೆ ಕಳವಳವನ್ನು ಹೆಚ್ಚಿಸಿವೆ.
ಕೋವಿಡ್-19 ನಿರ್ಬಂಧ ಮತ್ತು ಭಯ, ಆತಂಕ ಮಧ್ಯೆ ಟೋಕ್ಯೋ ಒಲಿಂಪಿಕ್ 2020 ಈ ತಿಂಗಳ 23ರಂದು ಆರಂಭವಾಗುತ್ತಿದೆ. ಆದರೆ ಕೊರೊನಾ ಪ್ರಕರಣಗಳು ಹೊಸ ರೂಪಾಂತರಗಳನ್ನು ಹರಡುವ ಭಯ ಮನೆ ಮಾಡಿದೆ. ಅಪಾರ್ಟ್‌ಮೆಂಟ್‌ಗಳು ಮತ್ತು ಊಟದ ಪ್ರದೇಶಗಳ ಸಂಕೀರ್ಣವಾದ ಒಲಿಂಪಿಕ್ ವಿಲೇಜ್ 6,700 ಕ್ರೀಡಾಪಟುಗಳು ಮತ್ತು ಅಧಿಕಾರಿಗಳನ್ನು ಒಳಗೊಂಡಿದೆ. ಹೆಚ್ಚು ಕ್ರೀಡಾಪಟುಗಳು ಸೇರುವುದರಿಂದ ವೈರಸ್ ಹರಡುವ ಸಾಧ್ಯತೆ ಇದೆ.
ಇನ್ನು ಜಪಾನ್ ಮಾಧ್ಯಮ ವರದಿ ಮಾಡಿ ವಿದೇಶಿ ಪ್ರಜೆಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಹೇಳಿದೆ. ಕೋವಿಡ್ ಹೊಸ ಅಲೆ ಸೃಷ್ಟಿಯಾಗಬಹುದು ಎಂದು ಜಪಾನ್ ನ ಸ್ಥಳೀಯರು ಒಲಿಂಪಿಕ್ ಗೇಮ್ ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಕೊರೋನಾ ಸೋಂಕು ಅತಿಯಾಗಿ ಕಂಡುಬಂದರೆ ತಕ್ಷಣವೇ ಕ್ರಮ ಕೈಗೊಳ್ಳಲು ಸಂಘಟಕರು ಮತ್ತು ಆಯೋಜಕರು ಸಿದ್ದರಾಗಿದ್ದಾರೆ ಎಂದು ಟೋಕಿಯೊ 2020ರ ಮುಖ್ಯ ಸಂಘಟಕಿ ಸೈಕೊ ಹಶಿಮೊಟೊ ತಿಳಿಸಿದ್ದಾರೆ.