ಹೋರಾಟದಲ್ಲಿ ಮೃತಪಟ್ಟ ರೈತರ ಬಗ್ಗೆ ದಾಖಲೆಯೇ ಇಲ್ಲ ಎಂದ ಕೇಂದ್ರ; ಅಂಕಿಅಂಶ ಕೊಟ್ಟ ಪಂಜಾಬ್ ಸರ್ಕಾರ!
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ದ ಕಳೆದ 09 ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೂವರೆಗೂ ನೂರಾರು ಪ್ರತಿಭಟನಾನಿರತ ರೈತರು ಸಾವನ್ನಪ್ಪಿದ್ದಾರೆ. ಅದರೆ, ಈ ರೈತ ಹೋರಾಟದಲ್ಲಿ ಮಡಿದ ರೈತರ ಬಗ್ಗೆ ಮಾಹಿತಿಯೇ ಇಲ್ಲ. ಆ ಬಗ್ಗೆ ಯಾವುದೇ ದಾಖಲೆಗಳೂ ನಮ್ಮಲ್ಲಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
2020ರ ನವೆಂಬರ್ ತಿಂಗಳ ಅಂತ್ಯದಲ್ಲಿ ರೈತರ ಪ್ರತಿಭಟನೆ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ 500ಕ್ಕೂ ಹೆಚ್ಚು ರೈತರು ಸಾವನ್ನಪ್ಪಿ, ಹುತಾತ್ಮರಾಗಿದ್ದಾರೆ ಎಂದು ಹಲವು ವರದಿಗಳು ದೊರೆತಿವೆ. ಅಲ್ಲದೆ, ಪಂಜಾಬ್‌ನ 220 ರೈತರು ಮತ್ತು ಕೃಷಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಮೃತಪಟ್ಟ ರೈತ ಕುಟುಂಬಗಳಿಗೆ 10.86 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಪಂಜಾಬ್ ಸರ್ಕಾರ ಘೋಷಿಸಿದೆ.
ಈ ಬಗ್ಗೆ ಪಂಜಾಬ್ ಸರ್ಕಾರದ ಮಾಹಿತಿಯನ್ನು ಕಲೆ ಹಾಕಿರುವ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ, ಜುಲೈ 20 ರವರೆಗೆ 220 ರೈತರು, ಕೃಷಿ ಕಾರ್ಮಿಕರು ಮೃತಪಟ್ಟಿರುವ ವಿವರಗಳು ಕಡತದಲ್ಲಿ ದಾಖಲಾಗಿವೆ ಎಂದು ತಿಳಿಸಿದೆ.
ಈ 220 ಜನರಲ್ಲಿ, 203 (92%) ರೈತರು / ಕೃಷಿ ಕಾರ್ಮಿಕರು ರಾಜ್ಯದ ಮಾಲ್ವಾ ಪ್ರದೇಶದವರಾಗಿದ್ದರೆ, 11 (5%) ಸಾವುಗಳು ಮಜಾ ಪ್ರದೇಶ ಮತ್ತು ಆರು (2.7%) ದೋಬಾ ಪ್ರದೇಶದ ರೈತರಾಗಿದ್ದಾರೆ ಎಂದು ಪಂಜಾಬ್ ಸರ್ಕಾರದ ದಾಖಲೆಗಳು ತಿಳಿಸಿವೆ.
ಇದನ್ನೂ ಓದಿ: ಕೃಷಿ ಕಾಯ್ದೆ ವಿರುದ್ದದ ಪ್ರತಿಭಟನೆಯಲ್ಲಿ 500 ರೈತರ ಸಾವು; ಕುಗ್ಗದ ರೈತರು: ರಾಹುಲ್‌ಗಾಂಧಿ
ಇನ್ನು ದೆಹಲಿ ಹೋರಾಟದ ಪ್ರತಿಭಟನೆ ವೇಳೆ 500 ಕ್ಕೂ ಹೆಚ್ಚು ಪ್ರತಿಭಟನಾ ನಿರತ ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೊಂಡಿದೆ. ಇದಕ್ಕೆ ಹೆಚ್ಚಿನ ರೈತರ ಸಾವುಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಪಂಜಾಬ್ ಸರ್ಕಾರದ ಮೂಲಗಳು ಬಹಿರಂಗಪಡಿಸಿವೆ.
ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, ಸಂಗ್ರೂರ್ ಜಿಲ್ಲೆಯಿಂದ ಗರಿಷ್ಠ ಸಂಖ್ಯೆಯ ರೈತರು/ ಕೃಷಿ ಕಾರ್ಮಿಕರ ಸಾವುಗಳು ವರದಿಯಾಗಿವೆ. ಕಳೆದ ಎಂಟು ತಿಂಗಳಲ್ಲಿ ಇಂತಹ 43 ಸಾವುಗಳು ಸಂಭವಿಸಿವೆ. ಪ್ರತಿ ಪ್ರಕರಣದಲ್ಲೂ ಮೃತ ರೈತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಮಂಜೂರು ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ 2.13 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ.
ಬಟಿಂಡಾ ಜಿಲ್ಲೆಯು ರೈತರ ಸಾವುಗಳಲ್ಲಿ ಎರಡನೇ ಸ್ಥಾನದಲ್ಲಿದ್ದು, ಈವರೆಗೆ 33 ಸಾವುಗಳು ವರದಿಯಾಗಿವೆ. ಮೃತ ರ ಕುಟುಂಬಗಳಿಗೆ ಸರ್ಕಾರವು 1.65 ಕೋಟಿ ರೂ. ನೀಡಿದೆ. ಇದಲ್ಲದೆ, ಮೊಗಾದಲ್ಲಿ 27, ಪಟಿಯಾಲದಲ್ಲಿ 25, ಬರ್ನಾಲಾದಲ್ಲಿ 17, ಮಾನ್ಸಾದಲ್ಲಿ 15, ಮುಕಾತ್ಸರ್ ಸಾಹಿಬ್‌ನಲ್ಲಿ 14, ಲೂಧಿಯಾನದಲ್ಲಿ 13 ಪ್ರಕರಣಗಳು ವರದಿಯಾಗಿವೆ.
ಇನ್ನು, ಮೃತ ರೈತರ ಕುಟುಂಬ ಸದಸ್ಯರಿಗೆ ಸಹಾನುಭೂತಿಯ ನೆಲೆಯಲ್ಲಿ ಪಂಜಾಬ್ ಸರ್ಕಾರವು ಉದ್ಯೋಗಗಳನ್ನು ಒದಗಿಸುತ್ತಿದೆ ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: 100 ರೈತರ ವಿರುದ್ದ ದೇಶದ್ರೋಹ ಪ್ರಕರಣ ದಾಖಲು; ಪ್ರಜಾಪ್ರಭುತ್ವಕ್ಕೆ ಅವಮಾನ ಎಂದ ರಾಜಕೀಯ ಪಕ್ಷಗಳು!