ಕೊರೊನಾ ಆರ್ಥಿಕ ಬಿಕ್ಕಟ್ಟು : ರೆಪೊ ದರವನ್ನು ಯಥಾಸ್ಥಿತಿಯಲ್ಲಿರಿಸಿದ ಆರ್‌ಬಿಐ!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಹಾಗೆಯೇ ಉಳಿಸಿಕೊಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಬುಧವಾರ ಆರಂಭವಾದ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್, ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ರೆಪೋ ದರ ಅಂದರೆ-
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.
ರೆಪೊ ದರ ತಗ್ಗಿಸಿದರೆ ಬ್ಯಾಂಕುಗಳು ಆರ್‌ಬಿಐನಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದಾಗಿದೆ. ದೇಶದ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದ ಹೃದಯದ ಬಡಿತವು ರೆಪೊ ದರದ ಜೊತೆ ಮಿಡಿಯುತ್ತದೆ.
ಹಣದ ಬಿಕ್ಕಟ್ಟು ಅಂದರೆ ಮಾರುಕಟ್ಟೆಯಲ್ಲಿ ಹಣದ ಕೊರತೆ ಎದುರಾದಾಗ ರಿಸರ್ವ್ ಬ್ಯಾಂಕ್, ರೆಪೋ ದರವನ್ನು ಇಳಿಸುವ ಕ್ರಮ ಕೈಗೊಳ್ಳುತ್ತದೆ. ಆರ್‌ಬಿಐನಿಂದ ಕಡಿಮೆ ಬಡ್ಡಿಗೆ ಹಣ ಸಿಗುವುದರಿಂದ ಅದರ ಲಾಭವನ್ನು ಬ್ಯಾಂಕುಗಳು ತನ್ನ ಗ್ರಾಹಕರಿಗೂ ವರ್ಗಾಯಿಸಬಹುದು. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳು ಲಭ್ಯವಾಗುತ್ತದೆ. ಮಾರುಕಟ್ಟೆಗೆ ಹೆಚ್ಚು ಹಣ ಹರಿಯುತ್ತದೆ. ಇದು ಆರ್ಥಿಕತೆಗೆ ಬಲ ನೀಡುವ ನಿರೀಕ್ಷೆ ಇದೆ. ಜೊತೆಗೆ ಬ್ಯಾಂಕ್‌ಗಳಲ್ಲಿನ ಸಾಲದ ಬಡ್ಡಿ ದರವು ಇಳಿಕೆಯಾಗುತ್ತದೆ.
ಇಂದಿನ ನಿರ್ಧಾರದೊಂದಿಗೆ ಆರ್‌ಬಿಐ ಸತತ ಆರು ಹಣಕಾಸು ನೀತಿ ಸಭೆಗಳಲ್ಲಿ ಪ್ರಮುಖ ದರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ. ಕೊರೋನವೈರಸ್ ನಿಂದಾಗಿ ಮಾರ್ಚ್ 2020 ರಿಂದ ಆರ್ಥಿಕತೆಯನ್ನು ಸುಧಾರಿಸಲು ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ಸಾಲ ದರಗಳನ್ನು ಅಂದರೆ ರೆಪೋ ದರವನ್ನು ಕಡಿತಗೊಳಿಸಿದೆ.