ಜಾತಿ ಸಮಸ್ಯೆ ಬಗ್ಗೆ ಮಾತನಾಡಬಾರದೇ? ಎಲ್ಲವೂ ಸರಿ ಇದೆ ಎಂಬ ಭ್ರಮೆಯಲ್ಲಿ ಬದುಕಬೇಕೇ?: ನೀನಾಸಂ ಸತೀಶ್‌

ಇಲ್ಲಿರುವ ಜಾತಿ ಸಮಸ್ಯೆಗಳ ಬಗ್ಗೆ ಮಾತನಾಡಬಾರದೇ..? ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೇ..? ಮನುಷ್ಯ ಮನುಷ್ಯನನ್ನು ಯಾವ ಜಾತಿ, ಊರು ಎಂದು ಪ್ರಶ್ನಿಸದೇ ಮನುಷ್ಯ ಎಂದು ನೋಡಿ ಬದುಕುವುದು ಯಾವಾಗ..? ನಾವು ಮನುಷ್ಯರಾಗಿ ಬದುಕುವುದು ಯಾವಾಗ…? ಎಂದು ಕನ್ನಡದ ನಟ ನೀನಾಸಂ ಸತೀಶ್‌ ಪ್ರಶ್ನಿಸಿದ್ದಾರೆ.

ಖಾಸಗಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರ ಸ್ನೇಹಿತ, ದಿವಂಗತ ನಟ ಸಂಚಾರಿ ವಿಜಯ್ ಬಗ್ಗೆ ಮಾತನಾಡುತ್ತಾ, ಸಮಾಜದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಜಾತಿ ವ್ಯವಸ್ಥೆಯಿಂದ ಮನುಷ್ಯ ಅನುಭವಿಸುವ ನೋವು, ಅವಮಾನಗಳ ಕುರಿತು ಮಾತನಾಡುತ್ತಾ ‘ಇದೇ ಸಮಾಜ ಮಾಡಿದ ಅವಮಾನ, ನೋವಿನಿಂದ ನಟ ಸಂಚಾರಿ ವಿಜಯ್ ಯಾತನೆ ಅನುಭವಿಸಬೇಕಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ಸಮಾಜದಲ್ಲಿ ಶಿಕ್ಷಣ ಪಡೆದರೂ ಮನುಷ್ಯನಲ್ಲಿ ಯಾವ ಬದಲಾವಣೆಯಾಗಿದೆ? ಪ್ರಾಣಿಗಳಲ್ಲಿ ಆಗಿರುವ ಬೆಳವಣಿಗೆ ಮನುಷ್ಯನಲ್ಲಿಲ್ಲ. ಸಮಾಜ ಯಾವಾಗ ಬದಲಾಗುತ್ತದೆ…? ಎಲ್ಲ ಸರಿಯಿದೆ ಎಂದು ಮುಚ್ಚಿಟ್ಟುಕೊಳ್ಳುವುದು ಸರಿಯಲ್ಲ. ಈಗ ವಿಜಿಯನ್ನು ಕರ್ನಾಟಕದ ಹೆಮ್ಮೆ ಎನ್ನುವಾಗ, ಆತನಿಗೆ ನಾವು ಕೊಟ್ಟ ಅವಮಾನಗಳನ್ನು, ನೋವನ್ನು ನೆನಪಿಸಿಕೊಳ್ಳಬೇಕು. ಇವತ್ತು ಅವರಿಲ್ಲ ಎಂದು ಕಣ್ಣೀರಿಡುವಾಗ ಅದಕ್ಕೆ ನಾವು ಕೂಡ ಕಾರಣ ಎಂಬುದನ್ನು ತಿಳಿಯಬೇಕು. ಈ ಸಮಾಜ, ವ್ಯವಸ್ಥೆ ಕಾರಣ ಕೂಡ ಆತನಿಲ್ಲದಕ್ಕೆ ಕಾರಣ’ ಎಂದು ನಟ ಸತೀಶ್ ನಿನಾಸಂ ಹೇಳಿದ್ದಾರೆ.

’ನಾವು ಮನುಷ್ಯರಾಗಿ ಬದುಕುವುದು ಯಾವಾಗ…? ಮನುಷ್ಯ ಮನುಷ್ಯನನ್ನು ಯಾವ ಜಾತಿ, ಊರು ಎಂದು ಪ್ರಶ್ನಿಸದೇ ಮನುಷ್ಯ ಎಂದು ನೋಡಿ ಬದುಕುವುದು ಯಾವಾಗ..? ಎಲ್ಲ ಸರಿ ಇದೆ ಎಂದುಕೊಂಡೆ ಬದುಕುವುದು ಎಷ್ಟು ದಿನ….? ನನ್ನಿಂದ ತಪ್ಪಾಗಿದೆ..ನಿಮ್ಮಿಂದ ತಪ್ಪಾಗಿದೆ. ಸರಿ ಪಡಿಸಿಕೊಳ್ಳೋಣ’ ಎಂದಿದ್ದಾರೆ.

’ಸಮಾಜದಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕಾ…? ಮಾತನಾಡಬಾರದ…? ನಾವು 21ನೇ ಶತಮಾನದಲ್ಲಿ, ಈ ಕಾಲದಲ್ಲಿಯೂ ಎಲ್ಲಾ ರೀತಿಯಲ್ಲಿ ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಮುಂದುವರೆದರೂ ಮನುಷ್ಯತ್ವದ ವಿಚಾರದಲ್ಲಿ ಪ್ರಾಣಿಗಳಿಗಿಂತ ಹಿಂದಿದ್ದೇವೆ. ಮನುಷ್ಯನಲ್ಲಿ ಕೆಟ್ಟ, ಕೊಳಕು, ವಿಷ ತುಂಬಿದ ಮನಸ್ಸು ಇದೆ’ ಎಂದು ಜಾತಿ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಆಕ್ರೋಶಕ್ಕೆ ಮಣಿದ ಕೇಂದ್ರ: ಸಚಿವಾಲಯದ ಆನ್‌ಲೈನ್‌ ತರಗತಿಗೆ ಕನ್ನಡ ಸೇರ್ಪಡೆ!

’ಜಾತಿ ವಿಷಯದಲ್ಲಿ ಸಂಚಾರಿ ವಿಜಯ್ ತುಂಬಾ ನೋವುಗಳನ್ನು ಅನುಭವಿಸಿದ್ದಾರೆ. ಇದರಲ್ಲಿ ಸುಳ್ಳು ಇಲ್ಲ. ಈ ಬಗ್ಗೆ ವೇದಿಕೆ, ಸಮಯ ಸಿಗಲಿ ಎಳೆ ಎಳೆಯಾಗಿ ಆತನಿಗಾದ ನೋವು, ಅವಮಾನಗಳನ್ನು ತಿಳಿಸುತ್ತೇನೆ. ಆತ ಮಾತನಾಡಲು ಹೆದರುತ್ತಿದ್ದ. ಏಕೆಂದರೆ ಸಮಾಜದಲ್ಲಿ ಅಂತಹ ಪರಿಸ್ಥತಿ ಇದೆ. ಆದರೆ, ನಾನು ಮಾತನಾಡುತ್ತೇನೆ. ಏನಾದರೂ ಆಗಲಿ ಎದುರಿಸುತ್ತೇನೆ’ ಎಂದಿದ್ದಾರೆ.

’ನಮ್ಮ ಸಮಸ್ಯೆಳ ಬಗ್ಗೆ, ನಮಗಾಗಿರುವ ನೋವುಗಳ ಬಗ್ಗೆ ಮಾತನಾಡಿದರೆ, ಒಂದು ವರ್ಗಕ್ಕೆ ನಮ್ಮನ್ನು ಸೀಮಿತಗೊಳಿಸುವುದು, ಇದೊಂದು ಬೇರೆ ವರ್ಗ ಅಂತ ಪಕ್ಕಕ್ಕೆ ಇಡುವುದು ಮಾಡ್ತಾರೆ. ಆತನ ಸಿನಿಮಾಗಳನ್ನು ನೋಡಬೇಡಿ, ಅವನು ಸರಿಯಿಲ್ಲ. ಅವನು ಹೀಗೆಯೇ ಎಂದು ಹೇಳುತ್ತಾರೆ. ನನ್ನ ವಿರುದ್ಧ ಮಾತಾಡುವವರನ್ನು ಮತ್ತೊಂದು ಕೆಟಗರಿ ಮಾಡುತ್ತಾರೆ. ಆದರೆ, ಇವರು ಯಾಕೆ ಮಾತನಾಡುತ್ತಿದ್ದಾರೆ ಎಂಬುದನ್ನು ವಿಚಾರ ಮಾಡುವುದಿಲ್ಲ’ ಎಂದು ಸಮಸ್ಯೆಗಳ ಬಗ್ಗೆ ಮಾತನಾಡುವವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಮನಸ್ಥಿತಿ ಕುರಿತು ಟೀಕಿಸಿದ್ದಾರೆ.

’ಮನುಷ್ಯ ತಾನೇ ಶ್ರೇಷ್ಠ ಎಂಬುದನ್ನು ಎಲ್ಲಿಯವರೆಗೆ ಬಿಡುವುದಿಲ್ಲವೂ ಅಲ್ಲಿಯವರೆಗೆ ಮನುಷ್ಯ ಉದ್ದಾರ ಆಗುವುದಿಲ್ಲ. ಮನುಷ್ಯನ ಕೊಳಕು ಮನಸ್ಥಿತಿ ಬದಲಾಗಲ್ಲ. ಭೂಮಿ ನಾಶವಾಗುತ್ತಿರುವುದು ಮನುಷ್ಯನಿಂದಲೇ, ಮನುಷ್ಯ ನಾಶವಾಗುತ್ತಿರುವುದು ಮನುಷ್ಯನಿಂದಲೇ. ಪ್ರಕೃತಿ, ಪ್ರಾಣಿಗಳಿಂದ ಅಲ್ಲ’ ಎಂದು ಒತ್ತಿ ಹೇಳಿದ್ದಾರೆ.

’ಈ ಎಲ್ಲಾ ಸಮಸ್ಯೆಗಳಿಗೂ ವ್ಯವಸ್ಥೆಯೇ ಕಾರಣ. ಒಂದಲ್ಲ ಒಂದು ದಿನ ಜನ ತಿರುಗಿ ಬೀಳ್ತಾರೆ. ಆ ದಿನಕ್ಕೆ ತುಂಬಾ ದೂರವಿಲ್ಲ. ಕೊರೊನಾ ಸಮಯದಲ್ಲಿ ಜನ ಹೆಚ್ಚು ಮಾತಾನಾಡುತ್ತಿದ್ದಾರೆ. ಈಗಾಗಲೇ ಜನ ತಿರುಗಿ ಬಿದ್ದಿದ್ದಾರೆ. ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರೇ ನನ್ನನ್ನು ನಾಳೆ ಸಾಯಿಸಬಹುದು. ನಿಮ್ಮನ್ನು ನಾಡಿದ್ದು, ಆದರೆ ಮಾತನಾಡುವುದನ್ನು ಮಾತನಾಡಬೇಕು’ ಎಂದು ಸತೀಶ್ ನಿನಾಸಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸತೀಶ್ ನಿನಾಸಂ ಅವರ ಹೇಳಿಕೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನಿನಾಸಂ ಅವರ ಅಭಿಪ್ರಾಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ವಿರುದ್ದ ಅಪಪ್ರಚಾರ ಲೇಖನ; ಚಕ್ರಿವರ್ತಿ ಸೂಲಿಬೆಲೆ ವಿರುದ್ದ ದೂರು ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights