FACT CHECK | ಎಲೆಕ್ಟ್ರೋಲ್ ಬಾಂಡ್ ಕುರಿತು ಸುಳ್ಳು ಅಂಕಿ ಅಂಶ ನೀಡಿದ ಗೃಹ ಸಚಿವ ಅಮಿತ್ ಶಾ

ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತೀಯ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಸಲ್ಲಿಸಿದೆ. ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆ ವಿವರಗಳನ್ನು ಪ್ರಕಟಿಸಿದೆ. ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ 6,060 ಕೋಟಿ ರೂ.ಗಳ ಫಲಾನುಭವಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇತ್ತೀಚೆಗೆ ಇಂಡಿಯಾ ಟುಡೇ ಕಾರ್ಯಕ್ರಮವೊಂದರಲ್ಲಿ ಚುನಾವಣಾ ಬಾಂಡ್‌ಗಳ ಕುರಿತು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಚುನಾವಣಾ ಬಾಂಡ್‌ಗಳಿಂದ ಬಿಜೆಪಿ ಒಟ್ಟು 6 ಸಾವಿರ ಕೋಟಿ ಪಡೆದುಕೊಂಡಿದೆ. ಆದರೆ, ಒಟ್ಟಾರೆ ಬಾಂಡ್‌ಗಳ (ಎಲ್ಲಾ ಪಕ್ಷಗಳಿಗೆ ನೀಡಿರುವುದು) ಮೊತ್ತ 20 ಸಾವಿರ ಕೋಟಿ ರೂಪಾಯಿ. ಉಳಿದ 14 ಸಾವಿರ ಕೋಟಿ ರೂಪಾಯಿ  ಮೊತ್ತ ಎಲ್ಲಿ ಹೋಯಿತು ಎಂದು ಯಾರೂ ಕೇಳುತ್ತಿಲ್ಲ. ಎಂದು ಅಮಿತ್‌ ಶಾ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಐಟಿ ವಿಭಾಗದ ಅಧ್ಯಕ್ಷ, ಅಮಿತ್ ಮಾಳವೀಯ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಅಮಿತ್ ಶಾ ಭಾಷಣದ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ, “ 303 ಸಂಸದರನ್ನು ಹೊಂದಿರುವ ಬಿಜೆಪಿ, ಇಲೆಕ್ಟೋರಲ್ ಬಾಂಡ್‌ಗಳ ಮೂಲಕ 6,000 ಕೋಟಿ ಪಡೆದರೆ, 242 ಸಂಸದರನ್ನು ಹೊಂದಿರುವ ಪ್ರತಿಪಕ್ಷಗಳು 14,000 ಕೋಟಿ ಗಳಿಸಿವೆ. ಬಿಜೆಪಿಗೆ ಹೆಚ್ಚು ಹಣ ಬಂದಿದೆ ಎಂಬ ಆರೋಪಕ್ಕೆ ಅರ್ಥವಿದೆಯೇ ಎಂದು ಹೇಳಿದ್ದಾರೆ? ಇಲೆಕ್ಟೋರಲ್ ಬಾಂಡ್‌ಗಳ ಮಾಹಿತಿ ಹೊರಬೀಳುತ್ತಿದಂತೆ ವಿರೋಧ ಪಕ್ಷಗಳಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಅಮಿತ್ ಶಾ ಹೇಳಿದಂತೆ ಬಿಜೆಪಿ ಪಕ್ಷಕ್ಕಿಂತಲೂ ವಿರೋಧ ಪಕ್ಷಗಳು ಪಡೆದಿರುವ ಬಾಂಡ್ ಮೊತ್ತ ಹೆಚ್ಚಾಗಿದೆಯೇ. ಎಲೆಕ್ಟ್ರೋಲ್ ಬಾಂಡ್‌  ಒಟ್ಟು ಮೊತ್ತ 20 ಸಾವಿರ ಕೋಟಿ ಎಂದು ಚುನಾವಣಾ ಆಯೋಗ ಘೋಷಿಸಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಚುನಾವಣಾ ಬಾಂಡ್‌ ಮೂಲಕ 20ಸಾವಿರ ಕೋಟಿ ಬಂದಿದೆ ಎಂದು ಅಮಿತ್ ಶಾ ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶ ವಿದೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಈ ಮೊತ್ತದ ದೇಣಿಗೆ ಬಂದಿದೆ ಎಂಬ ಪ್ರಸ್ತಾಪವನ್ನು ದೇಶದ ಯಾವುದೇ ಪ್ರತಿಷ್ಠಿತ ಮಾಧ್ಯಮಗಳು ವರದಿ ಮಾಡಿಲ್ಲ.20,000 ಕೋಟಿ ರೂಪಾಯಿಗಳಿಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದೆ ಎಂಬ ಸುದ್ದಿ ಲಭ್ಯವಾಗಿಲ್ಲ. ಚುನಾವಣಾ ಆಯೋಗದ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಅನ್ನು ಸರ್ಚ್ ಮಾಡಿದಾಗಲೂ, ಅಂತಹ ಯಾವುದೇ ಡೇಟಾ ಕಂಡುಬಂದಿಲ್ಲ.

ಮತ್ತಷ್ಟು ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡಿದಾಗ,  ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದ ಮಾಹಿತಿಯನ್ನು ಒಳಗೊಂಡಿರುವ ‘ಸ್ಕ್ರೋಲ್’ ಲೇಖನ ಲಭ್ಯವಾಗಿದೆ. ಸ್ಕ್ರೋಲ್ ಲೇಖನದ ಪ್ರಕಾರ ಮಾರ್ಚ್ 2018 ರಿಂದ ಫೆಬ್ರವರಿ 2024 ರವರೆಗೆ ಒಟ್ಟು 28,030 ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಇದರ ಮೌಲ್ಯ 16,518 ಕೋಟಿ ರೂ ಎಂದು ಉಲ್ಲೇಖಿಸಲಾಗಿದೆ.

ಆದರೂ, 12.04.2019 ರಿಂದ 15.02.2024 ರವರೆಗೆ ಖರೀದಿಸಿದ ಚುನಾವಣಾ ಬಾಂಡ್‌ಗಳ ವಿವರಗಳು ಮಾತ್ರ ಲಭ್ಯವಿದ್ದು. ಈ ಅವಧಿಯಲ್ಲಿ ಖರೀದಿಸಲಾದ 18,871 ಬಾಂಡ್‌ಗಳ ಮೌಲ್ಯ 12,516 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಮೇಲೆ ಹೇಳಿದ ಅವಧಿಯ ಮೊದಲು ಅಂದರೆ ಮಾರ್ಚ್ 2018 ರಿಂದ ಏಪ್ರಿಲ್ 11, 2019 ರ ನಡುವೆ ಖರೀದಿಸಲಾದ 9,159 ಎಲೆಕ್ಟೋರಲ್ ಬಾಂಡ್‌ಗಳ ವಿವರಗಳನ್ನು ಇನ್ನೂ ಬಹಿರಂಗಪಡಿಸಬೇಕಾಗಿದೆ. ಇದರ ಮೌಲ್ಯ 4,002 ಕೋಟಿ ರೂ. ಬಹಿರಂಗಪಡಿಸಿದ ಮತ್ತು ಬಹಿರಂಗಪಡಿಸದ ಬಾಂಡ್‌ಗಳ ಮೊತ್ತವು 16,518 ಕೋಟಿ ರೂಪಾಯಿಗಳಾಗಿದ್ದರೆ, ಕೇಂದ್ರ ಗೃಹ ಸಚಿವರು ಹೇಳುವಂತೆ ಚುನಾವಣಾ ಬಾಂಡ್‌ಗಳನ್ನು 20,000 ಕೋಟಿ ರೂಪಾಯಿ ಯಾವುದು? ಅಂದರೆ ಚುನಾವಣಾ ಬಾಂಡ್ ಕುರಿತಂತೆ ಭಾರತದ ಗೃಹ ಸಚಿವರು ಸುಳ್ಳು ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಈಗ ಅಧಿಕೃತವಾಗಿ ಬಹಿರಂಗಗೊಂಡ ಚುನಾವಣಾ ಬಾಂಡ್‌ಗಳಲ್ಲಿ ಬಿಜೆಪಿ ಪಡೆದಿರುವ ಹಣ 6060 ಕೋಟಿ ರೂ. ಅಂದರೆ ಒಟ್ಟು ಮೌಲ್ಯದ 47.5%. 9,159 ಬಹಿರಂಗಪಡಿಸದ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಿದರೆ, ಬಿಜೆಪಿ ಪಕ್ಷದ ಪಾಲು ಕೂಡ ಹೆಚ್ಚಾಗುತ್ತದೆ ಎಂದು ಯೂಟರ್ನ್ ವರದಿ ಮಾಡಿದೆ

ಸಂಸದರ ಸಂಖ್ಯೆಗೆ ಅನುಗುಣವಾಗಿ ಚುನಾವಣಾ ಬಾಂಡ್ ಮೊತ್ತವನ್ನು ಲೆಕ್ಕ ಹಾಕುವುದು ಸರಿಯೇ?

ಇನ್ನು ಅಮಿತ್ ಶಾ ಇಂಡಿಯಾ ಟುಡೇ ಗೆ ನೀಡಿರುವ ಹೇಳಿಕೆಯು ದೇಶದ ಜನರನ್ನು ದಿಕ್ಕು ತಪ್ಪಿಸುವಂತಿದೆ. ವಿರೋಧ ಪಕ್ಷಗಳು ಪಡೆದಿರುವ ಮೊತ್ತವು ಲೋಕಸಭೆಯಲ್ಲಿ ಅವರ ಸ್ಥಾನಗಳ ಸಂಖ್ಯೆಗೆ ಅಸಮಾನವಾಗಿದೆ ಎಂದಿದ್ದಾರೆ. ತೃಣಮೂಲ ಕಾಂಗ್ರೆಸ್ 1,600 ಕೋಟಿ ರೂ ಮೌಲ್ಯದ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದ್ದರೆ,, ಕಾಂಗ್ರೆಸ್ 1,400 ಕೋಟಿ ರೂಪಾಯಿ, ಭಾರತ್ ರಾಷ್ಟ್ರ ಸಮಿತಿ 1,200 ಕೋಟಿ ರೂಪಾಯಿ,  ಬಿಜೆಡಿ 775 ಕೋಟಿ ರೂ, ಡಿಎಂಕೆ 649 ಕೋಟಿ ರೂಪಾಯಿ ಬಾಂಡ್‌ ಹಣ ಪಡೆದಿದೆ ಎಂದಿದ್ದಾರೆ.

ಆದರೆ ಬಾಂಡ್‌ ಮೂಲಕ ಪಡೆದಿರುವ ದೇಣಿಗೆಯು ಪಕ್ಷಗಳ ಹಿನ್ನಲೆಯಲ್ಲಿಯೇ ಹೊರತು, ಸಂಸದರ ಸಂಖ್ಯೆಗೆ ಅನುಗುಣವಾಗಿ ಅಲ್ಲಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಕನ್ನಡದ ಟಿವಿ ವಿಕ್ರಮ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿ ಬಿಜೆಪಿಯ ಪ್ರತಿ ಸಂಸದನಿಗೆ 20 ಕೋಟಿ ಬರುತ್ತದೆ, ಆದರೆ ವಿರೋಧ ಪಕ್ಷಗಳ ಪೈಕಿ ಕಾಂಗ್ರೆಸ್‌ ಸಂಸದರಿಗೆ 27 ಕೋಟಿ, ಹಾಗೆಯೇ ಟಿಎಂಸಿ ಸಂಸದರಿಗೆ ಲೆಕ್ಕ ಹಾಕಿದರೆ ಒಬ್ಬರಿಗೆ 77 ಕೋಟಿ ಬರುತ್ತದೆ ಎಂದು ಬಿಜೆಪಿಯನ್ನು ಸಮರ್ಥಿಸುವಂತಹ ವರದಿಯನ್ನು ಪ್ರಕಟಿಸಿದೆ.

ವಾಸ್ತವವಾಗಿ ಅಮಿತ್ ಶಾ ಹೇಳಿಕೊಂಡಂತೆ ವಿರೋಧ ಪಕ್ಷಗಳು 14,000 ಕೋಟಿ ರೂ.ಗಳನ್ನು ಪಡೆದಿವೆ ಎಂಬುದು ಸುಳ್ಳು. ಚುನಾವಣಾ ಬಾಂಡ್‌ಗಳನ್ನು 16,518 ಕೋಟಿ ರೂ.ಗೆ ಮಾರಾಟ ಮಾಡಲಾಗಿದ್ದು, ಇದುವರೆಗೆ ರೂ.12,516 ಕೋಟಿಯ ವಿವರಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಹಾಗಾಗಿ ದೇಶದ ಗೃಹ ಸಚಿವ ಅಮಿತ್ ಶಾ ಇಂಡಿಯಾ ಟುಡೆಗೆ ನೀಡಿರುವ ಹೇಳಿಕೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಾಕ್ ಮೂಲದ ಕಂಪನಿಯಿಂದ ಕಾಂಗ್ರೆಸ್‌ ದೇಣಿಗೆ ಪಡೆದಿದೆ ಎಂದು ಸುಳ್ಳು ವರದಿ ಮಾಡಿದ ಟಿವಿ ವಿಕ್ರಮ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights