ಕನ್ನಡಿಗರ ಆಕ್ರೋಶಕ್ಕೆ ಮಣಿದ ಕೇಂದ್ರ: ಸಚಿವಾಲಯದ ಆನ್‌ಲೈನ್‌ ತರಗತಿಗೆ ಕನ್ನಡ ಸೇರ್ಪಡೆ!

ಲೋಕಸಭಾ ಸಚಿವಾಲಯದ ಅಡಿಯಲ್ಲಿ ಬರುವ ‘ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ ಸಂಸ್ಥೆಯ ಆನ್‌ಲೈನ್‌ ತರಗತಿಗೆ ಕನ್ನಡವನ್ನು ಸೇರ್ಪಡೆ ಮಾಡಲಾಗಿದೆ.

ಎರಡು ದಿನಗಳ ಹಿಂದೆ ಸಂಸ್ಥೆಗೆ ಆನ್‌ಲೈನ್‌ ತರಗತಿಗಾಗಿ ಬಿಡುಗಡೆ ಮಾಡಿದ್ದ ಭಾಷೆಗಳ ಪಟ್ಟಿಯಲ್ಲಿ ಕನ್ನಡವನ್ನು ಕೈಬಿಡಲಾಗಿತ್ತು. ಈ ನಡೆಯನ್ನು ಖಂಡಿಸಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡಿಗರ ಆಕ್ರೋಶಕ್ಕೆ ಮಣಿದಿರುವ ಒಕ್ಕೂಟ ಸರ್ಕಾರ ಕನ್ನಡವನ್ನು ಆನ್‌ಲೈನ್‌ ತರಗತಿಯಲ್ಲಿ ಸೇರಿಸಿದೆ.

ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ ಸಂಸ್ಥೆಯು ಇದೇ 22ರಿಂದ ಭಾಷೆಗಳ ಕಲಿಕಾ ಆನ್‌ಲೈನ್‌ ತರಬೇತಿ ಆರಂಭ ಮಾಡುತ್ತಿದ್ದು, ಇದರಲ್ಲಿ ವಿವಿಧ ರಾಜ್ಯಗಳ ಸಂಸದರು, ಶಾಸಕರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಫ್ರೆಂಚ್, ಜರ್ಮನ್, ಜಪಾನೀಸ್, ಪೊರ್ಚುಗೀಸ್, ರಷ್ಯನ್‌, ಸ್ಪ್ಯಾನಿಷ್ ಭಾಷೆಯನ್ನು ಇದರಲ್ಲಿ ಸೇರಿಸಲಾಗಿತ್ತು. ಆದರೆ ಕನ್ನಡವನ್ನು ಕಡೆಗಣಿಸಲಾಗಿತ್ತು.

ಈ ಕುರಿತು ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ಆನ್‌ಲೈನ್‌ ತರಗತಿಗಳಲ್ಲಿ ಕನ್ನಡವನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು. ಇದರಂತೆ ಜುಲೈ 5 ರಿಂದ ಕನ್ನಡವನ್ನು ಪರಿಗಣಿಸುವುದಾಗಿ ವೆಂಕಯ್ಯ ನಾಯ್ಡು ಆದೇಶಿಸಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್‌ ಸ್ಪರ್ಧೆ: ಡಿಕೆ ಶಿವಕುಮಾರ್

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್‌, ’ಕನ್ನಡ ಭಾಷೆಯನ್ನು ಆನ್‌ಲೈನ್ ತರಗತಿಯಲ್ಲಿ ಪರಿಗಣಿಸುವಂತೆ ಮಾಡಿದ್ದ ಮನವಿಯನ್ನು ಪರಿಗಣಿಸಿದ್ದಾರೆ. ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, “ಕನ್ನಡಿಗರ ಎಚ್ಚರಿಕೆಗೆ ಮಣಿದ‘ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್) ಸಂಸ್ಥೆ ಭಾಷೆ ಕಲಿಕೆ ತರಬೇತಿಯಲ್ಲಿ ಕನ್ನಡವನ್ನೂ ಸೇರಿಸಿದೆ. ಭಾಷಾಭಿಮಾನದ ಮೂಲಕ ಎಚ್ಚರಿಕೆ ರವಾನಿಸಿದ ಸ್ವಾಭಿಮಾನಿ ಕನ್ನಡಿಗರನ್ನು ನಾನು ಅಭಿನಂದಿಸುತ್ತೇನೆ. ಕನ್ನಡಕ್ಕಾಗಿ ನಾವೆಲ್ಲರೂ ಹೀಗೆ ಒಗ್ಗಟ್ಟಾಗಿರೋಣ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ತಾಕತ್ತಿದ್ದರೆ ಕನ್ನಡ ವಿಚಾರದಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಲಿ: ಹೆಚ್‌ಡಿಕೆ ಸವಾಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights