ತವರಿಗೆ ಹೋದ ಪತ್ನಿ ಮರಳಿ ಬರಲು ಪಾಪಿ ಪತಿ ಮಾಡಿದ್ದೇನು ಗೊತ್ತಾ..?

ಪತ್ನಿಯನ್ನು ಹೆದರಿಸಲು ಮಕ್ಕಳನ್ನು ಕೊಲ್ಲಲು ಮುಂದಾದ ಮದ್ಯವ್ಯಸನಿ ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಮಲಾಡ್ ಈಸ್ಟ್ ಉಪನಗರದ ವ್ಯಕ್ತಿಯೊಬ್ಬ ಮದ್ಯವ್ಯಸನಿಯಾಗಿದ್ದು ತನ್ನ ಹೆಂಡತಿಗೆ ಹೆದರಿಸಲು ತನ್ನ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಮಲಾಡ್ ಪೂರ್ವದ ಕುರಾರ್ ಹಳ್ಳಿಯ ನಿವಾಸಿಯಾಗಿದ್ದು ಈತನಿಗೆ ಒಂದು ಎಂಟು ವರ್ಷದ ಗಂಡು ಹಾಗೂ 13 ವರ್ಷದ ಹೆಣ್ಣು ಮಗು ಇದೆ.

ಆರೋಪಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ದೈಹಿಕವಾಗಿ ಹಿಂಸಿಸುತ್ತಿದ್ದನು. ಇದರಿಂದ ಬೇಸತ್ತ ಹೆಂಡತಿ ಎರಡು ವರ್ಷಗಳ ಹಿಂದೆ ತನ್ನ ಎರಡು ಮಕ್ಕಳೊಂದಿಗೆ ಗ್ರಾಮಕ್ಕೆ ಪಲಾಯನ ಮಾಡಿದ್ದಾಳೆ. ಆಕೆಯನ್ನು ಹಿಂಬಾಲಿಸಿದ ಆರೋಪಿ ಪತಿ ಕಳೆದ ತಿಂಗಳು ತನ್ನ ಮಕ್ಕಳನ್ನು ಮರಳಿ ಮನೆಗೆ ಕರೆತಂದಿದ್ದಾನೆ. ಆದರೆ ಹೆಂಡತಿ ಬರಲು ನಿರಾಕರಿಸಿದ್ದಾಳೆ. ಆಕೆ ಮರಳಿ ಬರಲು ಒಪ್ಪದೇ ಇದ್ದಾಗ ಮಕ್ಕಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ತನ್ನ 13 ವರ್ಷದ ಮಗಳಿಗೆ ಸೀಲಿಂಗ್ ಫ್ಯಾನ್‌ಗೆ ಕಟ್ಟಿದ ಹಗ್ಗವನ್ನು ಕುತ್ತಿಗೆಗೆ ಹಾಕಿಕೊಂಡು ಬಕೆಟ್ ಮೇಲೆ ನಿಲ್ಲುವಂತೆ ಒತ್ತಾಯಿಸಿದ್ದಾನೆ. ಮಾತ್ರವಲ್ಲದೇ ಬಕೆಟ್ ನಿಂದ ಜಿಗಿಯಲು ಹೇಳಿದ್ದಾನೆ. ಮಗಳು ಅದನ್ನು ನಿರಾಕರಿಸಿ ಕಿರುಚಾಡಿದಾಗ ಅವನು ಫ್ಯಾನ್ ಆನ್ ಮಾಡಿ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಮಗಳ ಕೂಗಾಟ ನೆರೆಹೊರೆಯವರನ್ನು ಎಚ್ಚರಿಸಿದೆ. ತಕ್ಷಣ ಅವರು ಮಗುವನ್ನು ರಕ್ಷಿಸಲು ಧಾವಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದೆಲ್ಲವೂ ಆಗಸ್ಟ್ 7 ರ ಬೆಳಿಗ್ಗೆ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಹಿರಿಯ ಇನ್ಸ್‌ಪೆಕ್ಟರ್ ಪ್ರಕಾಶ್ ಬೇಲೆ ತಿಳಿಸಿದ್ದಾರೆ. ತಂದೆ ಮೇಲೆ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ.

ವಿಚಾರಣೆ ವೇಳೆ ಆರೋಪಿ ಮಕ್ಕಳ ಸಾವಿನ ಛಾಯಾಚಿತ್ರಗಳನ್ನು ತೆಗೆದುಕೊಂಡು ತನ್ನ ಹೆಂಡತಿಗೆ ಕಳುಹಿಸಲು ಬಯಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ತನ್ನ ಹೆಂಡತಿ ಮಕ್ಕಳ ಸಾವಿನಿಂದ ಹೆದರಿಕೊಂಡು ಮರಳಿ ಬರುತ್ತಾಳೆ ಎಂದು ಭಾವಿಸಿದ್ದೇನೆ ಎಂದು ಆತ ಪೊಲೀಸರಿಗೆ ಹೇಳಿದ್ದಾನೆ.

ಜೊತೆಗೆ ಆತ ತನ್ನ ಎಂಟು ವರ್ಷದ ಮಗನ ದೇಹವನ್ನು ಬಿಳಿ ಬಟ್ಟೆಯಿಂದ ಮುಚ್ಚಿ ಅದರ ಮೇಲೆ ಹೂಮಾಲೆಗಳನ್ನು ಹಾಕಿರುವುದನ್ನು ಒಪ್ಪಿಕೊಂಡಿದ್ದಾನೆ. ಆತ ತನ್ನ ಮಗನ ದೇಹವನ್ನು ದಹನ ಮಾಡಲೂ ಬಯಸಿದ್ದನಂತೆ ಎಂದು ಒಪ್ಪಿಕೊಂಡಿದ್ದಾನೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights