ವಂದನಾ ಕಟಾರಿಯಗೆ ಜಾತಿನಿಂದನೆ: ಜಾತಿಗ್ರಸ್ತ ಮನಸ್ಥಿತಿಯ ಯುವಕರಿಗೊಂದು ಪ್ರಶ್ನೆ..

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಐತಿಹಾಸಿಕ ಸಾಧನೆಗೈದಿದೆ. ಒಟ್ಟು 7 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ. ಅದರಲ್ಲಿಯೂ ಭಾರತದ ಮಹಿಳಾ ಹಾಕಿ ತಂಡ ಮೊದಲ ಬಾರಿಗೆ ಸೆಮಿಫೈನಲ್ಗೆ ಲಗ್ಗೆ ಇಟ್ಟು ಇತಿಹಾಸ ನಿರ್ಮಿಸಿತ್ತು. ಪದಕ ಗೆಲ್ಲುವಲ್ಲಿ ವಿಫಲವಾದರೂ ತಮ್ಮ ಅಮೋಘ ಆಟದ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಇಂತಹ ಐತಿಹಾಸಿಕ ಸಾಧನೆಯ ಸಂದರ್ಭದಲ್ಲಿಯೂ ಕಪ್ಪು ಚುಕ್ಕೆಯೊಂದು ಉಳಿದುಹೋಯ್ತು. ಭಾರತ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲು ಕಂಡಿತು. ಭಾರತ ತಂಡ ಸೋಲುತ್ತಿದ್ದಂತೆ ದಿಟ್ಟ ಆಟಗಾರ್ತಿ ವಂದನಾ ಕಟಾರಿಯಾ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿರುವ ಜಾತಿಗ್ರಸ್ತ ಮನಸ್ಥಿತಿಯ ಯುವಕರ ಗುಂಪು ವಂದನಾ ಅವರ ಕುಟುಂಬದವರಿಗೆ ಜಾತಿ ನಿಂದನೆ ಮಾಡಿದ್ದಾರೆ.

ವಂದನಾ ಅವರ ಹರಿದ್ವಾರದ ಮನೆ ಮುಂದೆ ಪಟಾಕಿ ಸಿಡಿಸಿದ ಯುವಕರು, ‘ತಂಡದಲ್ಲಿ ದಲಿತರು ಹೆಚ್ಚು ಇದ್ದದ್ದು ಸೋಲಿಗೆ ಕಾರಣ’ ಎಂದು ರೋಧಿಸಿದ್ದಾರೆ. ಇದು ಭಾರತದ ಜಾತಿಗ್ರಸ್ತ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಆದರೆ ಪ್ರಜ್ಞಾವಂತರು ಈ ಕುಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ವಂದನಾ ಪರವಾಗಿ ನಿಂತ ನೆಟ್ಟಿಗರು ಜಾತಿಗ್ರಸ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದಕ್ಕೆ ದಲಿತರು ಹೆಚ್ಚು ಇದ್ದಿದ್ದು ಕಾರಣವಲ್ಲವೇ? ಥೂ ನಿಮ್ಮ ಮನಸ್ಥಿತಿಗೆ ಎಂದು ಧಿಕ್ಕಾರ ಕೂಗಿದ್ದಾರೆ.

ವಂದನಾ ಅವರ ಆಟದ ವೈಖರಿಯನ್ನು ಮೆಚ್ಚಿದ ಬಹುತೇಕರು ಅವರ ಪರ ನಿಂತಿದ್ದಾರೆ. ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಕೂಡ ವಂದನಾ ಪರವಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಂದನಾ, ‘ನಾವು ದೇಶಕ್ಕಾಗಿ ಆಡುತ್ತಿದ್ದೇವೆ. ಈ ಘಟನೆಯ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಜಾತಿವಾದಿ ಹೇಳಿಕೆಗಳನ್ನು ಯಾರು ನೀಡಬಾರದು. ನೀವು ಹಾಕಿ ಬಗ್ಗೆ ಯೋಚಿಸಿ, ಅಲ್ಲಿ ಹೆಚ್ಚು ಯುವತಿಯರಿದ್ದಾರೆ. ನಾವು ದೇಶಕ್ಕಾಗಿ ಆಡುತ್ತಿದ್ದೇವೆ, ಆದ್ದರಿಂದ ನಾವು ಪ್ರತಿಯೊಂದು ವಿಷಯದಲ್ಲೂ ಒಂದಾಗಬೇಕು’ ಎಂದಿದ್ದಾರೆ.

ಯಾರಿದು ವಂದನಾ ಕಟಾರಿಯಾ?

2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಮಹಿಳಾ ಹಾಕಿ ತಂಡವನ್ನು ಸೆಮಿ ಫೈನಲ್ ವರೆಗೂ ಕೊಂಡೊಯ್ದದ್ದರಲ್ಲಿ ವಂದನಾ ಅವರ ಪಾತ್ರ ಬಹುಮುಖ್ಯವಾದುದು.

ಒಲಿಂಪಿಕ್ಸ್‌ನ ಪೋಲ್‌ ಎ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ತಂಡದ ಎದುರು ನಡೆದ ಪಂದ್ಯದಲ್ಲಿ ಭಾರತ ತಂಡವು 4 ಗೋಲುಗಳನ್ನು ಗಳಿಸಿತ್ತು. ಈ ಪೈಕಿ ಮೂರು ಗೋಲುಗಳನ್ನು ವಂದನಾ ಒಬ್ಬರೇ ಗಳಿಸಿದ್ದರು. ಟೋಕಿಯೋ ಒಲಿಂಪಿಕ್ಸ್ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಮೊದಲ ಭಾರತೀಯ ಹಾಕಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ವಂದನಾ ಅವರದು.

2018 ರಲ್ಲಿ ನಡೆದ ಏಷ್ಯನ್ ಕಪ್ ಕ್ರೀಡಾಕೂಟದಲ್ಲಿ ಭಾರತದ ತಂಡವು ಬೆಳ್ಳಿ ಪದಕ ಗೆದ್ದಿತ್ತು. ಈ ಟೂರ್ನಿಯಲ್ಲಿ ವಂದನಾ ಅವರು ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದರು.

ಕುಟುಂಬದವರ ಬೆಂಬಲದೊಂದಿಗೆ ತಮ್ಮ 15ನೇ ವಯಸ್ಸಿನಲ್ಲಿ ಹಾಕಿ ತಂಡಕ್ಕೆ ಪಾದಾರ್ಪಣೆ ಮಾಡಿದ ವಂದನಾ, 2013ರಲ್ಲಿ ಭಾರತದ ಹಾಕಿ ಜೂನಿಯರ್ ತಂಡಕ್ಕೆ ಆಯ್ಕೆಯಾದರು. ಅದೇ ವರ್ಷ ನಡೆದ ಮಹಿಳಾ ಹಾಕಿ ಜೂನಿಯರ್ ವಿಶ್ವಕಪ್ನಲ್ಲಿ ಹೆಚ್ಚು ಗೋಲು ಗಳಿಸಿದವರಲ್ಲಿ ಮೊದಲಿಗರಾಗಿದ್ದರು. ಆಗ ಭಾರತ ತಂಡವು ಕಂಚಿನ ಪದಕ ಗೆದ್ದಿತ್ತು.

ಒಲಿಂಪಿಕ್ಸ್ನಲ್ಲಿ ತಮ್ಮ ಮಗಳು ಇರುವ ಭಾರತ ಚಿನ್ನ ಗೆಲ್ಲಬೇಕು ಎಂದು ಬಯಸುತ್ತಿದ್ದ ವಂದನಾ ತಂದೆ ಇತ್ತೀಚೆಗೆ ಸಾವನ್ನಪ್ಪಿದ್ದರು. ಆ ಸಮಯದಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿಯಲ್ಲಿದ್ದ ವಂದನಾ ತಂದೆಯ ಶವಸಂಸ್ಕಾರಕ್ಕೂ ತೆರಳದೇ, ತಂದೆಯ ಕನಸು ನನಸು ಮಾಡಬೇಕೆಂಬ ಛಲದೊಂದಿಗೆ ಅಭ್ಯಾಸದಲ್ಲಿ ನಿರತರಾಗಿದ್ದರು.

ಇಂತಹದೊಂದು ಅದ್ಭುತ ಪ್ರತಿಭೆ ಜಾತಿ ಕಾರಣಕ್ಕಾಗಿ ನಿಂದನೆ ಒಳಗಾಗುತ್ತಿರುವುದು ಭಾರತದಲ್ಲಿರುವ ಕೊಳಕು ಜಾತೀಯತೆಗೆ ಹಿಡಿದ ಕೈಗನ್ನಡಿ.

ಸೋಲೇ ಇರಲಿ, ಗೆಲುವೇ ಇರಲಿ, ಉತ್ತಮವಾದ ಆಟದಿಂದ ಕ್ರೀಡಾ ಪ್ರೇಮಿಗಳ ಮನಗೆದ್ದಿರುವ ಭಾರತದ ಮಹಿಳಾ ತಂಡ ಎಂದಿಗೂ ಚಾಂಪಿಯನ್ಗಳೆ. ಒಲಿಂಪಿಕ್ಸ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಮ್ಮ ತಂಡಕ್ಕೆ ಪ್ರೀತಿಪೂರ್ವಕ ಅಭಿನಂದನೆಗಳು. ವಂದನಾ ಅವರು ಇದೇ ರೀತಿ ಉತ್ತಮವಾದ ಪ್ರದರ್ಶನ ನೀಡಲಿ ಎಂದು ನಾವೆಲ್ಲರೂ ಆಶಿಸುತ್ತೇವೆ. ಅದೇ ರೀತಿ ಜಾತಿವಾದಿಗಳು ಹೀಗಲಾದರೂ ತಮ್ಮ ಕೊಳಕು ಪ್ರವೃತ್ತಿ ಬಿಟ್ಟು ಮನುಷ್ಯರಾಗಿ ಆಲೋಚಿಸುವುದನ್ನು ಕಲಿಯಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights