FactCheck: ತಾಯಿ ಕಳೆದುಕೊಂಡ ಚಿರತೆ ಮರಿ; ಅಮ್ಮನ ಪ್ರೀತಿ ನೀಡಿದ ಹಸು?

ಹುಟ್ಟಿದ ಚಿರತೆ ಮರಿಯೊಂದು ತನ್ನ ತಾಯಿಯನ್ನು ಕಳೆದುಕೊಂಡಿದ್ದು, ಆ ಚಿರತೆ ಮರಿಗೆ ಹಸುವೊಂದು ಅಮ್ಮನ ಪ್ರೀತಿ ನೀಡಿದೆ ಎಂಬ ಪೋಟೋಗಳು ಹಾಗೂ ಸುದ್ದಿ ವೈರಲ್‌ ಆಗುತ್ತಿದೆ. ಉದ್ಯಮಿ ಸಿದ್ದಾರ್ಥ್ ಪೈ ಅವರೂ ಕೂಡ ಇದರ ಬಗ್ಗೆ ಟ್ವೀಟ್‌ ಮಾಡಿ, ನಂತರ ಡಿಲೀಟ್ ಮಾಡಿದ್ದಾರೆ.

If only some Humans could learn from this….This took place in Assam. A man bought a cow from the neighboring village…

Posted by Robindro Sharma on Saturday, June 6, 2020

ಚಿತ್ರಗಳೊಂದಿಗೆ ಹಂಚಿಕೊಂಡ ಕಥೆಯಲ್ಲಿ ಹಸು ಚಿರತೆ ಮರಿಯನ್ನು ರಾತ್ರಿವೇಳೆ ಮುದ್ದಾಡುತ್ತದೆ ಎಂದು ಹೇಳಲಾಗುತ್ತಿದೆ. ಸಂಪೂರ್ಣ ಕಥೆ ಹೀಗಿದೆ, “ಇದು ಅಸ್ಸಾಂನಲ್ಲಿ ನಡೆಯಿತು. ಒಬ್ಬ ವ್ಯಕ್ತಿಯು ಪಕ್ಕದ ಹಳ್ಳಿಯಿಂದ ಹಸುವೊಂದನ್ನು ಖರೀದಿಸಿ ಮನೆಗೆ ತಂದನು, ಅದರ ನಂತರ ಆ ಹಳ್ಳಿಯಲ್ಲಿ ಪ್ರತಿ ರಾತ್ರಿ ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದವು. ಆಗ ಅವನು ಕಳ್ಳರು ಲಾಕ್ ಡೌನ್‌ನ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆಂದು ಅನುಮಾನಿಸಿ, ಹಸು ಕಟ್ಟಿರುವಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದನು. ಬೆಳಿಗ್ಗೆ ಎದ್ದು ಆ ವೀಡಿಯೊ ನೋಡಿ ಅವನು ನೋಡಿ ಆಘಾತಕ್ಕೊಳಗಾದನು. ಏಕೆಂದರೆ ಪ್ರತಿದಿನ ರಾತ್ರಿ ಹಸುವಿರುವಲ್ಲಿಗೆ ಚಿರತೆ ಮರಿಯೊಂದು ಬರುತ್ತಿದ್ದು ಹಸು ಅದನ್ನು ಮುದ್ದಾಡುತ್ತಿತ್ತು. ಆಗ ಅವನು ಹಸುವನ್ನು ಖರೀದಿಸಿದ ಹಳ್ಳಿಗೆ ಹಿಂತಿರುಗಿ, ಹಿಂದಿನ ಮಾಲೀಕರ ಬಳಿಗೆ ಹೋಗಿ ಚಿರತೆ ಬಗ್ಗೆ ತಿಳಿಸಿ, ಚಿತ್ರ ಮತ್ತು ವೀಡಿಯೊಗಳನ್ನು ತೋರಿಸಿದರು. ಆಗ ಹಿಂದಿನ ಮಾಲೀಕರು ಆ ಮನುಷ್ಯನಿಗೆ ನಡೆದ ಕಥೆಯನ್ನು ಹೇಳಿದರು. ಚಿರತೆ ಮರಿಗೆ ಕೇವಲ 20 ದಿನವಾಗಿದ್ದಾಗ, ಅದರ ತಾಯಿಯನ್ನು ಕೊಲ್ಲಲ್ಪಟ್ಟಿತು. ನಂತರ ಅವನು ಮರಿಯನ್ನು ನೋಡಿ ಕನಿಕರವಾಗಿ ತನ್ನ ಹಸುವಿನ ಬಳಿಗೆ ತಂದುಬಿಟ್ಟನು. ಹಸು ಅದನ್ನು ಸಾಕಿತು. ಚಿರತೆ ಬೆಳೆದು ದೊಡ್ಡದಾದಾಗ ಅದನ್ನು ಕಾಡಿಗೆ ಬಿಡಲಾಯಿತು. ಆದರೆ ಅದು ಯಾವಾಗಲೂ ಹಸುವಿನೊಂದಿಗೆ ಮುದ್ದಾಡಲು ಮತ್ತು ವಿಶ್ರಾಂತಿ ಪಡೆಯಲು ಮರಳಿ ಬರುತ್ತಿದೆ”.

https://www.facebook.com/john.helios.18/posts/277395513392448

ಈ ಪೋಸ್ಟ್ ಅನ್ನು ಹಲವಾರು ವೈಯಕ್ತಿಕ ಬಳಕೆದಾರರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇತ್ತೀಚೆಗೆ ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಸಾವಿಗೆ ಇದನ್ನು ಲಿಂಕ್ ಮಾಡಿ ಆನೆ ಮರಿಯೂ ಉಳಿಯಲಿಲ್ಲ. ಪಶುಗಳಿಗಿಂತ ಮನುಷ್ಯರೆ ಕೆಟ್ಟವರು ಎಂದು ಹೇಳಲಾಗಿದೆ. ಇನ್ನು ಕೆಲವರು ಕಳೆದ ಮೇ ತಿಂಗಳಿನಲ್ಲಿ ಅಮ್ಮಂದಿರ ದಿನದಂದು ಇದೇ ಕಥೆಯನ್ನು ಫೋಟೊ ಜೊತೆಗೆ ಹಂಚಿಕೊಂಡಿದ್ದರು. ಇದಲ್ಲವೇ ತಾಯಿ ಪ್ರೀತಿ ಎಂದು ಬರೆದಿದ್ದರು. ಆ ಪೋಸ್ಟನ್ನು 9000 ಜನ ಹಂಚಿಕೊಂಡಿದ್ದರು.

ಫ್ಯಾಕ್ಟ್-ಚೆಕ್

ಗೂಗಲ್‌ನಲ್ಲಿ ಹಲವು ಕೀವರ್ಡ್ ಹುಡುಕಾಟ ನಡೆಸಿದಾಗ ಅಸ್ಸಾಂನಲ್ಲಿ ಈ ಘಟನೆ ನಡೆದ ಯಾವುದೇ ಸಾಕ್ಷ್ಯ ಸಿಗಲಿಲಲ್ಲ. ಆದರೆ onforest.com ವೆಬ್‌ಸೈಟ್‌ನಲ್ಲಿನ ಲೇಖನವೊಂದು ಸಿಕ್ಕಿತು. ಅಲ್ಲಿ ಹೆಚ್ಚಿನ ರೆಸಲ್ಯೂಶನ್‌ನ ಅದೇ ಚಿತ್ರಗಳು ಲಭ್ಯವಿದೆ. 2002 ರಲ್ಲಿ ಗುಜರಾತ್‌ನ ವಡೋದರಾ ಜಿಲ್ಲೆಯ ಆಂಟೋಲಿ ಗ್ರಾಮದಲ್ಲಿ ಹಸು ಮತ್ತು ಚಿರತೆ ಜೊತೆಗಿದ್ದ ವಿಚಿತ್ರ ಘಟನೆ ನಡೆದಿದೆ ಎಂದು ಲೇಖನ ಹೇಳುತ್ತದೆ.

ಪತ್ರಕರ್ತ ಶ್ಯಾಮ್ ಪರೇಖ್ ಅವರು 2002 ರಲ್ಲಿ ಟೈಮ್ಸ್ ಆಫ್ ಇಂಡಿಯಾಕ್ಕಾಗಿ ಈ ಚಿತ್ರವನ್ನು ಕಳಿಸಿ ವರದಿ ಮಾಡಿದ್ದಾರೆ. ಆದರೆ ಮೇಲಿನ ಕಥೆ ಹೇಳುವಂತೆ ಚಿರತೆ ಮರಿಯ ತಾಯಿ ಸತ್ತು ಹೋಯಿತು, ಹಸು ಸಾಕಿತು ಎಂಬುದು ಯಾವುದೂ ಇಲ್ಲಿ ಉಲ್ಲೇಖವಾಗಿಲ್ಲ. ಅಲ್ಲಿನ ಕಥೆಗೂ ಇಲ್ಲಿನ ವರದಿಗೂ ಯಾವುದೇ ಸಂಬಂಧವಿಲ್ಲ.

ಆದರೆ ಹಸು ಜೊತೆ ಚಿರತೆ ಮರಿ ಇದ್ದುದು ನಿಜವಾಗಿದ್ದರೆ ಅದು ಹೇಗೆ ಸಾಧ್ಯ ಎಂದು ಟೈಮ್ಸ್ ಆಫ್ ಇಂಡಿಯಾ ವಡೋದರಾದ ಕಾಡು ಸಂರಕ್ಷಣಾಧಿಕಾರಿ ಎಚ್ ಎಸ್ ಸಿಂಗ್ ಅವರನ್ನು ಪ್ರಶ್ನಿಸಿದೆ. ಅವರು “ಕೆಲವೊಮ್ಮೆ ಪ್ರಾಣಿಗಳ ನಡವಳಿಕೆಯನ್ನು ಮಾರ್ಪಡಿಸಬಹುದು. ಈ ಸಂದರ್ಭದಲ್ಲಿ, ಬಹುಶಃ ಚಿರತೆ ಉಪ-ವಯಸ್ಕ ಹಂತವನ್ನು ದಾಟಿದೆ, ಅದು ಕಾಡು ಪರಿಸರದಲ್ಲಿ ಬೆಳೆಯದೇ ಗ್ರಾಮೀಣ ಪ್ರದೇಶದಲ್ಲಿ ಬೆಳೆದುದರಿಂದ ಅದು ಬೇಟೆಯಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿಲ್ಲ” ಎಂದಿದ್ದಾರೆ.

ವರದಿ ಮಾಡಿದ ಶ್ಯಾಮ್ ಪರೇಖ್ “ಇದು 18 ವರ್ಷದ ಹಿಂದೆ ಗುಜರಾತ್‌ನಲ್ಲಿ ನಡೆದಿದೆ. ಆ ಸಮಯದಲ್ಲಿ ಹಸುವಿನೊಂದಿಗೆ ಚಿರತೆ ಮರಿ ಇದ್ದುದ್ದನ್ನು ಹೇಳಿದಾಗ ಹಲವಾರು ಜನರು ನಂಬಲಿಲ್ಲ. ಅದಕ್ಕಾಗಿ ನಾವು ಇದನ್ನು ದೃಢೀಕರಿಸಲು ವನ್ಯಜೀವಿ ಛಾಯಾಗ್ರಾಹಕನನ್ನು ಕರೆಸಿ ಅವುಗಳ ಫೋಟೊ ತೆಗೆಯಲು ಕೇಳಿದೆವು” ಎಂದಿದ್ದಾರೆ.

ತೀರ್ಮಾನ

ಗುಜರಾತ್‌ನಲ್ಲಿ ವರದಿಯಾದ ಸುಮಾರು ಎರಡು ದಶಕಗಳಷ್ಟು ಹಳೆಯದಾದ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಇದು ಅಸ್ಸಾಂನಲ್ಲಿ ಸಂಭವಿಸಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ, ಅದಕ್ಕೆ ಮತ್ತಷ್ಟು  ವಿಸ್ತಾರವಾದ ಕಥೆ ಕಟ್ಟಿ ಪುನರುಜ್ಜೀವನಗೊಳಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights