ಗುಂಡು ಹಾರಿಸಿ ಬಟ್ಟೆ ವ್ಯಾಪಾರಿ ಹತ್ಯೆ : ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಶಂಕೆ!
ರಾಜಸ್ಥಾನ ಮೂಲದ ಬಟ್ಟೆ ವ್ಯಾಪಾರಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.
ಮೂಲೆ ಸಿಂಗ್ (30) ಕೊಲೆಯಾದ ವ್ಯಕ್ತಿ. ಈತ ಕಳೆದ ಆರು ವರ್ಷಗಳ ಹಿಂದೆ ಹೊಳಲ್ಕೆರೆ ಪಟ್ಟಣದಲ್ಲಿ ಪ್ರಿಯದರ್ಶಿನಿ ಟೆಕ್ಸ್ ಟೈಲ್ಸ್ ನಲ್ಲಿ ಬಟ್ಟೆ ವ್ಯಾಪಾರಿ ಮಾಡಿಕೊಂಡಿದ್ದರು. ಕಳೆದ ರಾತ್ರಿ (ಆ.17) 9 ಗಂಟೆಗೆ ಅಂಗಡಿ ಬಂದ್ ಮಾಡುತ್ತಿರುವಾಗ ದುಷ್ಕರ್ಮಿಗಳು ಶೂಟ್ ಮಾಡಿ ಎಸ್ಕೇಪ್ ಆಗಿದ್ದಾರೆ. ಮೂಲೆ ಸಿಂಗ್ ಅವರ ಕುತ್ತಿಗೆ ಭಾಗಕ್ಕೆ ಗುಂಡು ತಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಆರು ವರ್ಷಗಳಿಂದ ಹೊಳಲ್ಕೆರೆಯಲ್ಲಿ ವಾಸವಾಗಿರುವ ಮೂಲ್ ಸಿಂಗ್ ರಾಜಸ್ಥಾನದ ಸರ್ದಾರ್ ಪುರ ಗ್ರಾಮದ ನಿವಾಸಿಯಾಗಿದ್ದಾರೆ. ಮಾತ್ರವಲ್ಲದೇ ಈತ 5 ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ ಕಲ್ಯಾಣಸಿಂಗ್ ಎಂಬ ಬಟ್ಟೆ ವ್ಯಾಪಾರಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣದ ಆರೋಪಿಯಾಗಿದ್ದರು.
ಮೃತನ ಸಹೋದರ ಗೋವರ್ಧನ್ ಸಿಂಗ್ ಮಾತ್ರ ನಮ್ಮ ಮೇಲೆ ಯಾವುದೇ ದ್ವೇಷವಿರಲಿಲ್ಲ. ನಾವು ಸಹ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದವು. ಹೀಗಾಗಿ ಈ ಕೃತ್ಯದ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿತ್ರದರ್ಗ ಎಸ್.ಪಿ.ರಾಧಿಕಾ, ಎಸ್ ಪಿ ನಂದಗಾವಿ ಹಾಗೂ ಡಿವೈಎಸ್ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಟ್ಟೆ ಅಂಗಡಿಯಲ್ಲಿ ಸಿಸಿಟಿವಿ ವೀಡಿಯೋ ಕೂಡ ಪರಿಶೀಲನೆ ನಡೆಸಿ ತನಿಖೆ ಚುರುಕುಕೊಳಿಸಿದ್ದು, ಕೃತ್ಯದ ಆರೋಪಿಗಳ ಸೆರೆಗಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.