ಜಮ್ಮು ಮತ್ತು ಕಾಶ್ಮೀರದ ಎನ್ಕೌಂಟರ್ ನಲ್ಲಿ ಮೂವರು ಜೈಶ್ ಉಗ್ರರು ಹತ!
ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಅರಣ್ಯದಲ್ಲಿ ಸೇನೆ ಮತ್ತು ಪೊಲೀಸರ ನಡುವಿನ ಜಂಟಿ ಕಾರ್ಯಾಚರಣೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಮೂವರು ಜೈಶ್ ಉಗ್ರರು ಹತರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಜೈಶ್-ಇ-ಮೊಹಮ್ಮದ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಇಬ್ಬರು ಭಯೋತ್ಪಾದಕರನ್ನು ಶ್ರೀನಗರ ಸಮೀಪದ ಖ್ರೆವ್ ನಲ್ಲಿ ಹತ್ಯೆ ಮಾಡಲಾಗಿದೆ. ಒಂದು ದಿನ ಮುಂಚಿತವಾಗಿ ರಾಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸೇನೆಯ ಕಿರಿಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದರು. ಆ ಘಟನೆಯಲ್ಲಿ ಒಬ್ಬ ಭಯೋತ್ಪಾದಕ ಕೂಡ ಸಾವನ್ನಪ್ಪಿದ್ದಾನೆ.
ಕಳೆದ ಕೆಲವು ತಿಂಗಳುಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುರುವಾರವೂ ಭಯೋತ್ಪಾದಕರು ಜೆ & ಕೆ ಅಪ್ನಿ ಪಕ್ಷದ ರಾಜಕೀಯ ಕಾರ್ಯಕರ್ತ ಗುಲಾಂ ಹಾಸನ್ ಲೋನ್ ಅವರ ಮನೆಗೆ ನುಗ್ಗಿ ಅವರನ್ನು ಹೊಡೆದುರುಳಿಸಿದರು.