ಯೋಗಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದ ಮಾಜಿ ಐಪಿಎಸ್ ಅಧಿಕಾರಿಯನ್ನು ಬಲವಂತವಾಗಿ ಹೊತ್ತೊಯ್ದ ಪೊಲೀಸರು!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಿರುದ್ಧ ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸವಾಲು ಹಾಕಿರುವ ಮತ್ತು ಹೊಸ ಪಕ್ಷವನ್ನು ಸ್ಥಾಪಿಸಿರುವ ಮಾಜಿ ಹಿರಿಯ ಐಪಿಎಸ್​​ ಅಧಿಕಾರಿ ಅಮಿತಾಭ್‌ ಠಾಕೂರ್‌ ಅವರನ್ನು ಯುಪಿ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ. ಸರ್ಕಾರದ ಈ ನಡೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆ ಕಳಪೆ ಕಾರ್ಯಕ್ಷಮತೆ ಕಾರಣ ನೀಡಿ ಅಮಿತಾಭ್​ ಠಾಕೂರ್​ ಅವರನ್ನು ಕೇಂದ್ರ ಗೃಹ ಸಚಿವಾಲಯ ಬಲವಂತವಾಗಿ ನಿವೃತ್ತಿ ಪಡೆದುಕೊಳ್ಳವಂತೆ ಮಾಡಿತ್ತು. ಶುಕ್ರವಾರ ಅವರನ್ನು ಲಖನೌದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ, ಅಮಿತಾಭ್‌ ಅವರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ, ಅವರನ್ನುಅವರ ಮನೆಯಿಂದ ಸಾರ್ವಜನಿಕರ ಎದುರೇ ಬಲವಂತವಾಗಿ ಪೊಲೀಸರು ಹೊತ್ತೊಯ್ದಿದ್ದಾರೆ.

ನಿನ್ನೆ ನಡೆದ ಇಡೀ ಘಟನೆ ವಿಡಿಯೋ ರೆಕಾರ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೊಲೀಸರ ವರ್ತನೆಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿವೆ. ನನ್ನ ವಿರುದ್ಧದ ದಾಖಲಾಗಿರುವ ಎಫ್​ಐಆರ್​ ತೋರಿಸಿ ಎಂದು ಅಮಿತಾಭ್‌ ಕೇಳಿದರೂ, ಅವರ ಮಾತಿಗೆ ಕಿಮ್ಮತ್ತು ಕೊಡದ ಪೊಲೀಸರು ಅವರನ್ನು ಬಲವಂತದಿಂದ ಹೊತ್ತೊಯ್ದಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ ಠಾಕೂರ್​ ವಿರುದ್ಧ ಸಾಕ್ಷಿಗಳು ಲಭ್ಯವಾಗಿವೆ. ಯುವತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಪತ್ನಿಯ ಇಚ್ಛೆಗೆ ವಿರುದ್ದವಾಗಿ ನಡೆಯುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಛತ್ತೀಸ್‌ಘಡ ಹೈಕೋರ್ಟ್‌

ಆಗಸ್ಟ್​ 16ರಂದು ಸುಪ್ರೀಂಕೋರ್ಟ್​ ಗೇಟ್​ ಮುಂದೆ ಬಾಯ್​ಫ್ರೆಂಡ್​ ಜತೆ ಬೆಂಕಿ ಹಚ್ಚಿಕೊಂಡು ಮೃತಪಟ್ಟ 24 ವರ್ಷದ ಯುವತಿ, ಸಾಯುವುದಕ್ಕೂ ಮುನ್ನ ಬಹಿರಂಗಪಡಿಸಿದ ರಾಜಕಾರಣಿಗಳು ಮತ್ತು ಉನ್ನತ ಪೊಲೀಸ್​ ಅಧಿಕಾರಿಗಳ ಹೆಸರಿನಲ್ಲಿ ಠಾಕೂರ್​ ಅವರ ಹೆಸರೂ ಕೂಡ ಇತ್ತು. ಮೃತ ಯುವತಿ ಬಿಎಸ್​ಪಿ ಸಂಸದ ಅತುಲ್​ ರಾಯ್​ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು 2019ರಲ್ಲಿ ದೂರು ನೀಡಿದ್ದಳು. ಆದರೆ, ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ. ಠಾಕೂರ್​ ಅವರು ಸಂಸದರ ಕುಟುಂಬದ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಫೇಸ್​ಬುಕ್​ ಲೈವ್​ನಲ್ಲಿ ಯುವತಿ ಆರೋಪಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ.

ಆದಿತ್ಯನಾಥ್‌ ವಿರುದ್ದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಮಿತಾಭ್‌ ಘೋಷಿಸಿದ ಕೆಲವೇ ದಿನಗಳ ಬಳಿಕ ಅವರನ್ನು ಬಂಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರಿಗೆ ಬೆದರಿಕೆ ಹಾಕಿದ ಆರೋಪ ಹೊತ್ತಿದ್ದ ಅಮಿತಾಬ್‌ ಠಾಕೂರ್‌ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಮಾರ್ಚ್‌ 23 ರಂದು ಕಡ್ಡಾಯ ನಿವೃತ್ತಿ ನೀಡಿತ್ತು. ಅಲ್ಲದೆ, ಠಾಕೂರ್‌ ಅವರು ಸೇವೆಯಲ್ಲಿ ಮುಂದುವರೆಯಲು ಯೋಗ್ಯವಾಗಿಲ್ಲ. ಅವರಿಗೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಕಾಲಿಕ ನಿವೃತ್ತಿ ನೀಡಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿತ್ತು.

ಅಮಿತಾಬ್‌ ಠಾಕೂರ್‌ ಅವರ ಸೇವಾವಧಿ 2028 ರಲ್ಲಿ ಅಂತ್ಯಗೊಳ್ಳಿತ್ತು. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅಧಿಕಾರಿಯನ್ನು ಜುಲೈ 13, 2015 ರಂದು ಅಮಾನತುಗೊಳಿಸಲಾಗಿತ್ತು. ಆದಾಗ್ಯೂ, ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಲಕ್ನೋ ಪೀಠವು 2016 ರ ಏಪ್ರಿಲ್‌ನಲ್ಲಿ ಅವರ ಅಮಾನತಿಗೆ ತಡೆ ನೀಡಿತು. ಅಲ್ಲದೆ, ಅಕ್ಟೋಬರ್ 11, 2015 ರಿಂದ ಜಾರಿಗೆ ಬರುವಂತೆ ಪೂರ್ಣ ವೇತನದೊಂದಿಗೆ ಅವರನ್ನು ಮತ್ತೆ ಸೇವೆಯಲ್ಲಿ ಮುಂದುವರೆಸುವಂತೆ ಆದೇಶಿಸಿತ್ತು. ಇದೆಲ್ಲದರ ನಡುವೆ ಇದೂಗ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ.

ಇದನ್ನೂ ಓದಿ:ಯೋಗಿಗೆ ಸವಾಲು; ಹೊಸ ಪಕ್ಷ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ; ಯೋಗಿ ವಿರುದ್ದವೇ ಸ್ಪರ್ಧೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights