ಮರ್ಯಾದೆ ಗೇಡು ಹತ್ಯೆಗೆ ಯುವತಿ ಬಲಿ; ಆರೋಪಿಗಳ ರಕ್ಷಣೆಗಿಳಿದ ಪೊಲೀಸರ ಅಮಾನತಿಗೆ ಸಂಘಟನೆಗಳ ಆಗ್ರಹ
ಹೆಣ್ಣು ಮಕ್ಕಳ ಮೇಲಿನ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಮರ್ಯಾದೆ ಗೇಡು ಹತ್ಯೆಗಳಿಂದಾಗಿ ಪದೇ ಪದೇ ಸುದ್ದಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಇಂದಿಗೂ ಈ ಶೋಷಣೆಗಳಿಗೆ ಕಡಿವಾಣ ಬಿದ್ದಿಲ್ಲ. ಇತ್ತೀಚಗೆ ಅಂತದ್ದೇ ಮತ್ತೊಂದು ಮರ್ಯಾದಾ ಗೇಡು ಹತ್ಯೆಗೆ ಮಂಡ್ಯ ಸಾಕ್ಷಿಯಾಗಿದೆ. ಮರ್ಯಾದ ಗೇಡು ಹತ್ಯೆಯನ್ನು ಖಂಡಿಸಿ, ಆರೋಪಿಗಳನ್ನು ಬಂಧಿಸುವಂತೆ, ಆರೋಪಿಗಳ ರಕ್ಷಣೆಗಿಳಿದಿರುವ ಪೊಲೀಸರನ್ನು ಅಮಾನತು ಗೊಳಿಸುವಂತೆ ಆಗ್ರಹಿಸಿ ದಸಂಸ ಮತ್ತು ಪ್ರಗತಿಪರ ಸಂಘಟನೆಗಳು ನ.06 ರಂದು ಬೃಹತ್ ಪ್ರತಿಭಟನೆ ನಡೆಸಿವೆ.
ದಲಿತ ಸಂಘರ್ಷ ಸಮಿತಿ ಒಕ್ಕೂಟ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ, ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಪಾಂಡವಪುರ ತಾಲ್ಲೂಕು ತಿರುಮಲಾಪುರ ಗ್ರಾಮದಲ್ಲಿ ನಡೆದಿರುವ ಮರ್ಯಾದೆಗೇಡು ಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹತ್ಯೆಯ ಬಗ್ಗೆ ಹತ್ಯೆಗೀಡಾದ ಯವತಿಯ ಕುಟುಂಬ ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಅಲ್ಲದೆ, ಪೊಲೀಸರು ಹತ್ಯೆಗೀಡಾದ ಯುವತಿಯ ತಾಯಿಯನ್ನೇ ಪ್ರಶ್ನೆ ಮಾಡುತ್ತಿದ್ದು, ಆರೋಪಿಗಳನ್ನು ರಕ್ಷಸುತ್ತಿದ್ದಾರೆ ಆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪತ್ರಿಭಟನಾಕಾರರು ಆಗ್ರಹಿಸಿದ್ದಾರೆ.
ಮಳವಳ್ಳಿ ತಾಲ್ಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮಹಾದೇವಮ್ಮ ಅವರ ಪುತ್ರಿ ಹಾಗೂ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ ಬೆಂಗಳೂರಿನಲ್ಲಿದ್ದಾಗ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಇದು ಮರ್ಯಾದೆಗೇಡು ಹತ್ಯೆಯಾಗಿದ್ದು ಇದಕ್ಕೆ ಸಾಕ್ಷ್ಯಗಳಿದ್ದರೂ ಪೊಲೀಸರು ಅವುಗಳನ್ನು ಪರಿಗಣಿಸಿಲ್ಲ. ಡಿವೈಎಸ್‌ಪಿ ಅವರು ಯುವತಿಯ ತಾಯಿಗೆ ಸಮಾಧಾನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡಿಲ್ಲ. ಮಹಾದೇವಮ್ಮ ಅವರನ್ನೇ ಆರೋಪಿಯಂತೆ ನೋಡುತ್ತಿದ್ದಾರೆ ಎಂದು ದಸಂಸ ರಾಜ್ಯಸಂಚಾಲಕ ಗುರುಪ್ರಸಾದ್ ಕೆರಗೋಡು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿರುವ ಡಿವೈಎಸ್‌ಪಿಯನ್ನು ಬದಲಾವಣೆ ಮಾಡಿ ಸಮರ್ಥ ಪೊಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಣ್ಗಾವಲಿನಲ್ಲೇ ಸೂಕ್ತ ತನಿಖೆ ನಡೆಸಬೇಕು. ಜಾತಿ ಕಾರಣಕ್ಕೆ ಯುವತಿಯನ್ನು ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಮರ್ಯಾದೆಗೇಡು ಹತ್ಯೆಗಳು ಮರುಕಳಿಸುತ್ತಿವೆ. ಇದಕ್ಕೆ ಪೊಲೀಸರು ಸೂಕ್ತ ರೀತಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಕಾರಣವಾಗಿದೆ. ಹಲವು ಪ್ರಕರಣಗಳಲ್ಲಿ ಆರೋಪಿಗಳು ಕೆಲವೇ ದಿನಗಳಲ್ಲಿ ಕಾರಗೃಹದಿಂದ ಹೊರಬಂದಿದ್ದಾರೆ. ಈ ಪ್ರಕರಣ ಕೂಡ ಅದೇ ಹಾದಿ ಹಿಡಿಯುತ್ತಿದೆ. ಮಗಳನ್ನು ಕಳೆದುಕೊಂಡಿರುವ ಮಹಾದೇವಮ್ಮ ಅವರಿಗೆ ಪೊಲೀಸರು ನ್ಯಾಯ ಕೊಡಿಸಬೇಕು. ಮುಗ್ಧ ಯುವತಿಯ ಸಾವಿನ ವಿರುದ್ಧದ ಹೋರಾಟಕ್ಕೆ ಜಿಲ್ಲೆಯ ಜನರು ಕೈಗೂಡಿಸಲಿದ್ದಾರೆ ಎಂದು ಕರ್ನಾಟಕ ಜನಶಕ್ತಿಯ ಜಿಲ್ಲಾ ಸಂಚಾಲಕ ಸಿದ್ದರಾಜು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ, ದಸಂಸ ರಾಜ್ಯ ಘಟಕದ ಸಂಚಾಲಕ ಗುರುಪ್ರಸಾದ್ ಕೆರಗೋಡು, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಮಹಿಳಾ ಮುನ್ನಡೆಯ ಪೂರ್ಣಿಮಾ, ಅಂಜಲಿ, ಕೆಂಪಯ್ಯ ರಮಾನಂದ, ಹುರುಗಲವಾಡಿ ರಾಮಯ್ಯ, ಶೋಭಾ, ಸುಶೀಲಾ, ಮಂಜುಳಾ, ದೇವರಾಜು, ಆರ್.ಕೃಷ್ಣ ಮತ್ತಿತ್ತರರು ಇದ್ದರು.
ಘಟನೆಯ ವಿವರ:
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯುವತಿಯ ತಾಯಿ ಮಹದೇವಮ್ಮ ಮಾತನಾಡಿ, ತಾವು ದಲಿತ ಸಮುದಾಯಕ್ಕೆ ಸೇರಿದ್ದು, ತಮ್ಮ ಮಗಳು ಮೇಘನಾ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಎಂಇಟಿ ಕಾಲೇಜಿನಲ್ಲಿ 2014-15 ರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಸ್ನೇಹಿತರ ಮೂಲಕ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತಿರುಮಲಾಪುರ ಗ್ರಾಮದ ಸವರ್ಣಿಯ ಸಮುದಾಯಕ್ಕೆ ಸೇರಿದ ಟಿ.ಕೆ ಸ್ವಾಮಿ ಎಂಬುವವರ ಪರಿಚಯವಾಗಿತ್ತು. ನಂತರ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಸ್ವಾಮಿಯ ಮನೆಯವರಿಗೆ ತನ್ನ ಜಾತಿಗೊತ್ತಾಗಿದ್ದು, ತನಗೆ ತೊಂದರೆ ಕೊಡುತ್ತಿದ್ದಾರೆ. ಆದರೆ ತಾನು ಮನೆಗೆ ಬರುವುದಿಲ್ಲವೆಂದು ಹೇಳಿದ್ದ ಮೇಘನಾ ನಾಪತ್ತೆಯಾಗಿದ್ದಳು. 5 ವರ್ಷದಿಂದ ಯಾವುದೇ ಸಂಪರ್ಕವಿರಲಿಲ್ಲ.
ಆದರೆ ಇತ್ತೀಚೆಗೆ ಅಕ್ಟೋಬರ್ 14 ರಂದು ಮನೆ ಸ್ವಚ್ಛಗೊಳಿಸುತ್ತಿರುವಾಗ ಹಳೆಯ ಬೀರುವಿನಲ್ಲಿ ಟಿ.ಕೆ ಸ್ವಾಮಿಯ ವೋಟರ್ ಐಡಿ ಪತ್ತೆಯಾಗಿದೆ. ಅದರ ಆಧಾರದಲ್ಲಿ ತಿರುಮಲಾಪುರಕ್ಕೆ ತೆರಳಿ ವಿಚಾರಿಸಿದರೆ, ನಿಮ್ಮ ಮಗಳನ್ನು ಸ್ವಾಮಿ ಮನೆಯವರು 5 ವರ್ಷಗಳ ಹಿಂದೆಯೇ ಹತ್ಯೆ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಭಯಭೀತಗೊಂಡು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಹತ್ಯೆಯಾದ ಯುವತಿಯ ತಾಯಿ ತಿಳಿಸಿದ್ಧಾರೆ.
ಪೊಲೀಸರು ಹಳೆಯ ಅನುಮಾನಾಸ್ಪದ ಸಾವುಗಳು ಮತ್ತು ಪತ್ತೆಯಾಗದ ಶವಗಳ ದಾಖಲೆ ತೆಗೆದು ಪರಿಶೀಲಿಸಿದಾಗ 2015ರಲ್ಲಿ ಕಾಲುವೆಯಲ್ಲಿ ಪತ್ತೆಯಾಗಿದ್ದ ಶವ ತನ್ನ ಮಗಳು ಎಂದು ಮೇಘನಾ ತಾಯಿಯು ಗುರುತಿಸಿದ್ದಾರೆ. 2015 ರಲ್ಲಿ ಚಿನಕುರಳಿ ಪಕ್ಕದ ಬ್ಯಾಟರಾಯನಪುರ ನಾಲೆಯಲ್ಲಿ ಅಪರಿಚಿತ ಹುಡುಗಿಯ ಶವ ಪತ್ತೆಯಾಗಿದೆ. ಅದನ್ನು ಕೊಲೆ ಎಂದು ಪೊಲೀಸರು ಮಹಜರು ಮಾಡಿದ್ದಾರೆ.
ಹುಡುಗಿ ಮತ್ತು ಹುಡುಗ ಅನ್ಯಜಾತಿಗೆ ಸೇರಿದ್ದರಿಂದ ಹುಡುಗನ ಕುಟುಂಬದವರು ಆಕೆಯನ್ನು ಕೊಂದಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸದ್ಯಕ್ಕೆ ಶ್ರೀರಂಗಪಟ್ಟಣ ಡಿವೈಎಸ್‌ಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಮಾಗಡಿ ಯುವತಿಯದ್ದು ಅತ್ಯಾಚಾರ/ಕೊಲೆಯಲ್ಲ; ಮರ್ಯಾದಾ ಹತ್ಯೆ: ತಂದೆ-ಮಗನ ಬಂಧನ