ತೆರೆಯದ ಶಾಲೆಗಳು: ಬಿಸಿಯೂಟದ ಬದಲು ಆಹಾರ ಧಾನ್ಯ ವಿತರಣೆಗೆ ಸರ್ಕಾರ ನಿರ್ಧಾರ!

ಕೊರೊನಾ ಮತ್ತು ಲಾಕ್‌ಡೌನ್‌ ಕಾರಣದಿಂದಾಗಿ ಮುಚ್ಚಲಾಗಿರುವ ಶಾಲೆಗಳು ಇನ್ನೂ ತೆರೆದಿಲ್ಲ. ಹಾಗಾಗಿ, ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕಳೆದ ಐದು ತಿಂಗಳುಗಳಿಂದ ಮಧ್ಯಾಹ್ನದ ಬಿಸಿಯೂಟವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭದ ಉದ್ದೇಶವೂ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ  ಕೊರೊನಾದಿಂದ ಕಂಗೆಟ್ಟಿರುವ ಆರ್ಥಿಕ ಪರಿಸ್ಥಿತಿಯ ಸಂದರ್ಭದಲ್ಲಿ ಬಿಸಿಯೂಟದ ಯೋಜನೆಯ ಉದ್ದೇಶವನ್ನು ಸಾಕಾರಗೊಳಿಸಲು ಬಿಸಿಯೂಟದ ಬದಲು ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಮಕ್ಕಳಿಗೆ ನಿಗದಿತ ಪ್ರಮಾಣದ ಅಕ್ಕಿ, ಗೋಧಿ, ಮತ್ತು ತೊಗರಿ ಬೇಳೆಗಳನ್ನು ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ನೀಡಬೇಕಿದ್ದ ಬಿಸಿಯೂಟಕ್ಕೆ ಬದಲಾಗಿ ರಜಾ ದಿನಗಳನ್ನು ಹೊರತುಪಡಿಸಿ 108 ದಿನಗಳಿಗೆ ಅನ್ವಯಿಸುವಂತೆ ಆಹಾರ ಧಾನ್ಯಗಳನ್ನು ನೀಡಲು ಸೂಚಿಸಲಾಗಿದೆ.

ಆದರೆ, ದಾಸ್ತಾನು ಸಮಸ್ಯೆ ಉಂಟಾಗುವ ಕಾರಣ ಎರಡು ಹಂತದಲ್ಲಿ ಧಾನ್ಯಗಳನ್ನು ವಿತರಿಸುವಂತೆ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅನಗತ್ಯ ವಿದ್ಯುತ್‌ ಖರೀದಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ 5,000 ಕೋಟಿ ಕೊಡುತ್ತಿದೆ: ಸಿದ್ದರಾಮಯ್ಯ ಆರೋಪ

ಮೊದಲ ಹಂತದಲ್ಲಿ ಜೂನ್ ಮತ್ತು ಜುಲೈ ತಿಂಗಳ 53 ದಿನಗಳಿಗೆ ಅನ್ವಯಿಸುವಂತೆ ಆಹಾರ ಧಾನ್ಯ ಪೂರೈಸಬೇಕು. ಈಗಾಗಲೇ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ಮೊದಲ ಹಂತದ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ ಮುಗಿದಿದ್ದು, ಪ್ರತಿ ಜಿಲ್ಲೆ, ತಾಲೂಕುಗಳಿಗೆ ಸರಬರಾಜು ಆರಂಭಿಸಲಾಗಿದೆ.

1 ರಿಂದ 5ನೇ ತರಗತಿ ವರೆಗಿನ ಮಕ್ಕಳಿದೆ ಪ್ರತಿ ದಿನ ತಲಾ 100 ಗ್ರಾಂ ಅಕ್ಕಿ ಅಥವಾ ಗೋಧಿ ಮತ್ತು ರೂ.4.97. ಅಡುಗೆ ತಯಾರಿಕಾ ವೆಚ್ಚಕ್ಕೆ ಸಮನಾಗಿ 58 ಗ್ರಾಂ. ತೊಗರಿ ಬೇಳೆ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ 6 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತಿನಿತ್ಯ 150 ಗ್ರಾಂ ಅಕ್ಕಿ/ಗೋಧಿ ಮತ್ತು ರೂ.7.45 ಮೊತ್ತಕ್ಕೆ ಸಮನಾಗಿ 87 ಗ್ರಾಂ ತೊಗರಿ ಬೇಳೆ ನೀಡಲು ತೀರ್ಮಾನಿಸಲಾಗಿದೆ. ಈ ಪೈಕಿ 1 ರಿಂದ 8ನೇ ತರಗತಿ ಮಕ್ಕಳಿದೆ ಮೊದಲ ಹಂತದಲ್ಲಿ 53 ದಿನಗಳಲ್ಲಿ 45 ದಿನಗಳಿಗೆ ಅಕ್ಕಿ ಮತ್ತು ಬಾಕಿ 8 ದಿನಗಳಿಗೆ ಗೋಳಿ ಲೆಕ್ಕ ನೀಡಲು ನಿರ್ಧರಿಸಲಾಗಿದೆ.

9 ಮತ್ತು 10ನೇ ತರಗತಿ ಮಕ್ಕಳಿಗೆ ಪೂರ್ತಿ 53 ದಿನಗಳಿಗೂ ಅಕ್ಕಿಯನ್ನೇ ನೀಡಲು ಸೂಚಿಸಲಾಗಿದೆ. ಅದರಂತೆ 1ರಿಂದ 5ನೇ ತರಗತಿಯ ಪ್ರತಿ ಮಕ್ಕಳಿಗೆ ಮೊದಲ ಹಂತದ 53 ದಿನಗಳ ಲೆಕ್ಕದಲ್ಲಿ ತಲಾ 4.50 ಕೆಜಿ ಅಕ್ಕಿ, 800 ಗ್ರಾಂ ಗೋಧಿ ಮತ್ತು 3.74 ಕೆಜಿ ತೊಗರಿಬೇಳೆ, 6 ರಿಂದ 8ನೇ ತರಗತಿ ಮಕ್ಕಳಿಕೆ 6.75 ಕೆಜಿ ಅಕ್ಕಿ, 1.20 ಕೆಜಿ ಗೋಧಿ, 4.61 ಕೆಜಿ ಬೇಳೆ, 9 ಮತ್ತು 10ನೇ ತರಗತಿ ಮಕ್ಕಳಿಗೆ 7.95 ಕೆಜಿ ಅಕ್ಕಿ, 4.61 ಕೆಜಿ ಬೇಳೆ ವಿತರಣೆಗೆ ಆದೇಶಿಸಲಾಗಿದೆ.


ಇದನ್ನೂ ಓದಿ: ಕಾಮಗಾರಿ ಪೂರ್ಣಗೊಳ್ಳದ ಉಕ್ಕಿನ ಸೇತುವೆಯನ್ನು ಪ್ರಾಚೀನ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಎಎಪಿ ಕಿಡಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights