ಮೈಸೂರು ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗಳು ಪೋಲೀಸ್ ವಶಕ್ಕೆ

ಮೈಸೂರು ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ 85 ಗಂಟೆ ಬಳಿಕ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಶನಿವಾರ ಬೆಳಗ್ಗೆ ತಮಿಳುನಾಡು ಮೂಲದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಓರ್ವ ತಲೆಮರೆಸಿಕೊಂಡಿದ್ದು ಆತನ ಹುಡುಕಾಟ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಅತ್ಯಾಚಾರದ ಬಳಿಕ ಆರೋಪಿಗಳು ತಮಿಳು ನಾಡಿದೆ ಪರಾರಿಯಾಗಿದ್ದರು ಎನ್ನಲಾಗುತ್ತಿದೆ. ಸದ್ಯ ಇವರನ್ನು ಮೈಸೂರಿಗೆ ಕರೆತರಲಾಗಿದೆ. ಅಜ್ಷಾತ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಂತರ ಜಡ್ಜ್ ಮುಂದೆ ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ತಮಗೆ ಸಿಕ್ಕಿದ ತಾಂತ್ರಿಕ ಸಾಕ್ಷ್ಯಾಧಾರಗಳ ಮೇಲೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಪಡೆದ ನಂತರ ಪೊಲೀಸರಿಗೆ ಘಟನೆ ಬಗ್ಗೆ ಇನ್ನಷ್ಟು ಸಾಕ್ಷ್ಯಾಧಾರಗಳು ಸಿಗಲಿದ್ದು ಇನ್ನೂ ಒಂದಿಬ್ಬರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆ ಬಳಿಕ ಪೋಷಕರೊಂದಿಗೆ ಮೈಸೂರಿನಿಂದ ಮುಂಬೈಗೆ ತೆರಳಿದ್ದು, ತಾನು ಯಾರನ್ನೂ ಭೇಟಿ ಮಾಡಲು ಇಚ್ಚಿಸುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ ಎನ್ನಲಾಗುತ್ತಿದೆ.

ನಿನ್ನೆ ಸಂತ್ರಸ್ತೆ ಯುವತಿಯ ಗೆಳೆಯನ ಹೇಳಿಕೆಯನ್ನು ಪೊಲೀಸರು ಪಡೆದಿದ್ದರು. ಅಲ್ಲದೆ ಅತ್ಯಾಚಾರ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ ಅಲ್ಲಿ ಸಿಕ್ಕಿದ ಮದ್ಯದ ಬಾಟಲಿಗಳನ್ನು ಪರಿಶೀಲಿಸಿದ್ದರು. ಆರೋಪಿಗಳ ಮೊಬೈಲ್ ಟವರ್ ಲೊಕೇಶನ್ ಜಾಡನ್ನು ಹಿಡಿದು ಸಾಗಿದ್ದರು. ಪೊಲೀಸರಿಂದ ಅಧಿಕೃತ ಮಾಹಿತಿ ಇನ್ನು ಕೆಲ ಹೊತ್ತಿನಲ್ಲಿ ಹೊರಬೀಳುವ ನಿರೀಕ್ಷೆಯಿದೆ.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿರ್ಜನ ಪ್ರದೇಶಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದ ಕಾಮಾಂಧರ ಗುಂಪು ವಿದ್ಯಾರ್ಥಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿತ್ತು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಸಾಂಸ್ಕೃತಿಕ ನಗರ ಮೈಸೂರಿಗೆ ಒಂದು ಕಪ್ಪು ಚುಕ್ಕೆಯಂತಾಗಿದೆ.

ಮೈಸೂರು ಹಾಗೂ ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಗ್ಯಾಂಗ್ ರೇಪ್ ಆರೋಪಿಗಳ ವಶವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ. ಪ್ರಕರಣದ ಬೆಳವಣಿಗೆ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡುತ್ತಿದ್ದಾರೆ.

ಇತ್ತ ಬೆಂಗಳೂರಿನಿಂದ ಡಿಜಿಪಿ ಪ್ರವೀಣ್ ಸೂದ್ ಅವರು ಮೈಸೂರಿಗೆ ಹೊರಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights