ನಾಯಂಡಳ್ಳಿ–ಕೆಂಗೇರಿ ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಸಿಎಂ ಚಾಲನೆ : ಮುಖ್ಯ ವೇದಿಕೆಯಲ್ಲಿ ‘ಕನ್ನಡ’ ಮಾಯ!
ಬೆಂಗಳೂರಿನ ಹೃದಯ ಭಾಗದಿಂದ ನಾಯಂಡಳ್ಳಿವರೆಗೆ ಇದ್ದ ಮೆಟ್ರೋ ಮಾರ್ಗವನ್ನು ಕೆಂಗೇರಿವರೆಗೂ ವಿಸ್ತರಿಸಲಾಗಿದ್ದು ಇಂದು ಈ ಮಾರ್ಗಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಆದರೆ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ‘ಕನ್ನಡ’ ಮಾಯಾವಾಗಿದ್ದು ಕನ್ನಡಿಗರನ್ನು ಕೆರಳಿಸಿದೆ.
ನಾಯಂಡಳ್ಳಿಯಿಂದ ಕೆಂಗೇರಿವರೆಗೂ ಒಟ್ಟು ಏಳುವರೆ ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಇನ್ಮುಂದೆ ಬೈಯ್ಯಪ್ಪನ್ನಳ್ಳಿಯಿಂದ-ನಾಯಂಡಳ್ಳಿ(ಮೈಸೂರು ರಸ್ತೆ) ವರೆಗೆ ಮಾತ್ರವಲ್ಲದೆ ಕೆಂಗೇರಿವರೆಗೂ ಮೆಟ್ರೋ ಸಂಚರಿಸುತ್ತದೆ. ವಿಸ್ತರಿತ ಮಾರ್ಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಭಾಗಿಯಾಗಿದ್ದರು. ಜೊತೆಗೆ ಮೆಟ್ರೋ ರೈಲಿನಲ್ಲಿ ಕುಳಿತು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಹರ್ದೀಪ್ ಪ್ರಯಾಣಿಸಿದರು.
ಉದ್ಘಾಟನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಯಿತಾದರೂ ಮುಖ್ಯ ವೇದಿಕೆ ಮೇಲೆ ಕನ್ನಡ ಪದ ಬಳಕೆ ಮಾಡದೇ ಇಂಗ್ಲೀಷ್ ಬಳಕೆ ಮಾಡಲಾಗಿತ್ತು. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಬಿಎಂಆರ್ ಸಿಎಲ್ ಗೆ ಕನ್ನಡ ಅಂದರೆ ತಾತ್ಸಾರನಾ ಎನ್ನುವ ಪ್ರಶ್ನೆ ಮೂಡಿದೆ. ಮುಖ್ಯ ವೇದಿಕೆಯಲ್ಲಿ ಇಂಗ್ಲೀಷ್ ನಲ್ಲಿ ಮಾತ್ರ ಬರೆಯಲಾಗಿತ್ತು. ಒಂದೇ ಒಂದು ಕನ್ನಡ ಪದ ಬಳಕೆ ಮಾಡದ ಬಿಎಂಆರ್ ಸಿಎಲ್ ವಿರುದ್ದ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.