ಹೆಂಡತಿ ಮಕ್ಕಳನ್ನು ಕೊಂದು ಮನೆಯಲ್ಲೇ ಹೂತಿಟ್ಟ ಪತಿ : ಸಾಕ್ಷ್ಯ ನಾಶ ಮಾಡಲು ಖತರ್ನಾಕ್ ಪ್ಲ್ಯಾನ್!

ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಪತಿ ತನ್ನ ಹೆಂಡತಿ ಮಕ್ಕಳನ್ನು ಕೊಂದು ಮನೆಯಲ್ಲೇ ಹೂತಿಟ್ಟು ಸಾಕ್ಷ್ಯ ನಾಶ ಮಾಡಲು ಮತ್ತೊಂದು ಕೊಲೆ ಮಾಡಿ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪಶ್ಚಿಮ ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯ 34 ವರ್ಷದ ರಾಕೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ. 2018 ರ ಫೆಬ್ರವರಿಯಲ್ಲಿ 18 ತಿಂಗಳು ಮತ್ತು ಮೂರು ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸೇರಿದಂತೆ ತನ್ನ ಹೆಂಡತಿಯನ್ನು ಕೊಂದ ರಾಕೇಶ್ ಶವವನ್ನು ಮನೆಯಲ್ಲಿ ಹೂತುಹಾಕಿದ್ದಾನೆ. ಮಾತ್ರವಲ್ಲದೇ ಸಾಕ್ಷ್ಯ ನಾಶ ಮಾಡಲು ಮತ್ತೊಂದು ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆ.

ಬುಧವಾರ ರಾಕೇಶ್ ಮನೆಯಲ್ಲಿ ಕೆಸರು ಹಾಗೂ ಜಲ್ಲಿಕಲ್ಲು ಹಾಕಿ ಸಿಮೆಂಟ್ ನಿಂದ ಹೂತಿಟ್ಟ ಹೆಂಡತಿ ಮಕ್ಕಳ ಶವಗಳನ್ನು ಪೊಲೀಸರು ಹೊರತೆಗೆದಿದ್ದಾರೆ.

ಮಹಿಳೆಯೊಂದಿಗಿನ ಸಂಬಂಧಕ್ಕೆ ಅಡ್ಡಯಾಗಬಾರದು ಎನ್ನುವ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ನೋಯ್ಡಾದಲ್ಲಿರುವ ಖಾಸಗಿ ಪ್ರಯೋಗಾಲಯದಲ್ಲಿ ರೋಗಶಾಸ್ತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ರಾಕೇಶ್ ನಿಗೆ ಸಾಕ್ಷಿ ನಾಶ ಮಾಡುವ ಕಲೆ ಗೊತ್ತಿತ್ತು. ಹೀಗಾಗಿ ಯಾವುದೇ ಸುಳಿವಿಲ್ಲದಂತೆ ಶವಗಳನ್ನು ಮನೆಯಲ್ಲಿಯೇ ಸಮಾಧಿ ಮಾಡಿದ್ದನು. ಬಳಿಕ ತಾನೂ ಕೂಡ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಮಾತ್ರವಲ್ಲದೇ ಅನುಮಾನ ಬಾರದಂತೆ ತನ್ನ ಹೆಂಡತಿ ತನ್ನ ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರಟುಹೋದನೆಂದು ಮನೆಯವರಿಂದ ಹೇಳಿಸಿದ್ದನು.

ಹೀಗಾಗಿ ಈತನ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕುಟುಂಬ ನಾಪತ್ತೆಯಾದ ಕೆಲವು ತಿಂಗಳುಗಳ ನಂತರ ರಾಕೇಶ್ ಅವರ ಮಾವ ಅಪಹರಣ ಮತ್ತು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ನೋಯ್ಡಾದಲ್ಲಿ ಪೋಲಿಸ್ ಕೇಸ್ ದಾಖಲಿಸಿದ್ದಾರೆ. ನೋಯ್ಡಾ ಪೊಲೀಸರು ನಾಪತ್ತೆಯಾದವರ ಪ್ರಕರಣ ಮತ್ತು ಮಾವ ದಾಖಲಿಸಿದ ಪ್ರಕರಣ ಎರಡನ್ನೂ ತನಿಖೆ ಮಾಡಲಾರಂಭಿಸಿದರು ಆದರೆ ಎರಡೂ ಪ್ರಕರಣಗಳಲ್ಲಿ ಯಾವುದೇ ಪ್ರಮುಖ ಸುಳಿವು ಸಿಕ್ಕಿರಲಿಲ್ಲ.

enu4gltg

ಪ್ರಕರಣ ಬೇದಿಸುತ್ತಿರುವಾಗಲೇ ಆರೋಪಿ ಪೊಲೀಸ್ ದಿಕ್ಕು ತಪ್ಪಿಸಲು ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ. ಹೆಡಂತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ ವರ್ಷವೇ ರಾಕೇಶ್ ತನ್ನ ಗೆಳತಿಯೊಂದಿಗೆ ತನ್ನಂತೆ ಹೋಲುವ ವ್ಯಕ್ತಿಯನ್ನು ಕಸ್‌ಗಂಜ್‌ನಲ್ಲಿ ಕೊಲೆ ಮಾಡಿದ್ದಾನೆ. ವ್ಯಕ್ತಿಯ ಶಿರಚ್ಛೇದ ಮಾಡಿ ಕೈಗಳನ್ನು ಕತ್ತರಿಸಿದ್ದಾನೆ. ನಂತರ ವ್ಯಕ್ತಿ ತಲೆ ಹಾಗೂ ಕೈಗಳನ್ನು ಸುಟ್ಟು ಹಾಕಿದ್ದಾನೆ. ಆ ಶವಕ್ಕೆ ತನ್ನ ಬಟ್ಟೆಯನ್ನು ಹಾಕಿ ಇದು ಅವನ ದೇಹ ಎಂದು ಬಿಂಬಿಸುವಂತೆ ಮಾಡಿದ್ದಾನೆ. ಜೊತೆಗೆ ತನ್ನ ಗುರುತಿನ ಚೀಟಿಯನ್ನು ದೇಹದ ಮೇಲೆ ಬಿಟ್ಟು ಹೋಗಿದ್ದಾನೆ.

ಆರಂಭದಲ್ಲಿ ಈ ದೇಹ ರಾಕೇಶ್ ನದ್ದೇ ಅಂದುಕೊಳ್ಳಲಾಗಿತ್ತಾದರೂ ಒಂದು ತಿಂಗಳ ಹಿಂದೆ ಡಿಎನ್‌ಎ ಪರೀಕ್ಷೆಯಿಂದ ಇದು ರಾಕೇಶ್ ದೇಹ ಅಲ್ಲ ಎನ್ನುವುದು ಸಾಬೀತಾಗಿದೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಸಾಕ್ಷ್ಯದ ಜಾಡು ಹಿಡಿದು ಆತನನ್ನು ಪತ್ತೆ ಮಾಡಿದ್ದಾರೆ.

ಆರೋಪಿ ರಾಕೇಶ್ ಹರಿಯಾಣದಲ್ಲಿ ‘ದಿಲೀಪ್ ಶರ್ಮಾ’ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದನು. ಮಾತ್ರವಲ್ಲದೇ ಅವನು ತನ್ನ ಸ್ನೇಹಿತರಿಗೆ ತಾನು ಪೂರ್ವ ಯುಪಿಯ ಕುಶಿನಗರ ಜಿಲ್ಲೆಯವನು ಎಂದು ಹೇಳಿಕೊಂಡಿದ್ದನು. ಆರೋಪಿ ರಾಕೇಶ್ ರೋಗಶಾಸ್ತ್ರಜ್ಞರಾಗಿದ್ದರಿಂದ ಸಾಕ್ಷ್ಯವನ್ನು ಹೇಗೆ ನಾಶಪಡಿಸುವುದು ಎಂದು ಅವರಿಗೆ ತಿಳಿದಿತ್ತು. ಹೀಗಾಗಿ ಇಷ್ಟು ವರ್ಷಗಳ ಕಾಲ ಆರೋಪಿ ಸುಳಿವಿಲ್ಲದೇ ತಪ್ಪಿಸಿಕೊಂಡಿದ್ದಾನೆ ಎಂದು ಕಸ್ಗಂಜ್ ಪೊಲೀಸ್ ಮುಖ್ಯಸ್ಥ ರೋಹನ್ ಪ್ರಮೋದ್ ಬೋತ್ರೆ ಹೇಳಿದ್ದಾರೆ.

ಸದ್ಯ ಆರೋಪಿ ರಾಕೇಶ್ ಸೇರಿದಂತೆ ಆತನ ಕುಟುಂಬದ ಮೂವರು ಹಾಗೂ ಮಹಿಳೆಯನ್ನು ಬಂಧಿಸಲಾಗಿದೆ. ಅಪರಾಧದ ಹಲವು ಹಂತಗಳಲ್ಲಿ ಆರೋಪಿಯ ಕುಟುಂಬ ಸಹಾಯ ಮಾಡಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights