ಕೊರೊನಾ: ರಾಜ್ಯದಲ್ಲಿ ಇಬ್ಬರೂ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ 115 ಮಕ್ಕಳು

ಕೊರೊನಾ 2ನೇ ಅಲೆಯ ಆಕ್ರಮಣಕ್ಕೆ ಇಡೀ ದೇಶವೇ ತತ್ತರಿಸಿಹೋಗಿತ್ತು. ಕೊರೊನಾದಿಂದಾಗಿ ಹಲವಾರು ಮಕ್ಕಳು ತಮ್ಮ ಇಬ್ಬರೂ ಪೋಷಕರ(ತಂದೆ-ತಾಯಿ)ನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ 2020ರ ಮಾರ್ಚ್ 1 ರಿಂದ 2021ರ ಆಗಸ್ಟ್‌ವರೆಗೆ 115 ಮಕ್ಕಳು ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ಅಂಕಿ-ಅಂಶಗಳು ಹೇಳಿವೆ.

ಕೊರೊನಾದಿಂದ ಅನಾಥರಾದ ಮಕ್ಕಳಿಗಾಗಿ ಬಾಲ ಸೇವಾ ಯೋಜನೆಯನ್ನು 2021ರ ಮೇ ತಿಂಗಳಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿದೆ. ಈ ಯೋಜನೆಗೆ 115 ಮಕ್ಕಳ ಪೈಕಿ 113 ಮಕ್ಕಳು ಅರ್ಹರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ಈ ಎಲ್ಲಾ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆ ಮಕ್ಕಳ ಕುಟುಂಬ ಸದಸ್ಯರಿಗೆ ಒಪ್ಪಿಸಿದೆ. ಆದರೆ, ಇಬ್ಬರು ಮಕ್ಕಳು ಮಾತ್ರ ಮಕ್ಕಳ ಆರೈಕೆ ಸಂಸ್ಥೆ (ಸಿಸಿಐ)ಯಲ್ಲಿದ್ದಾರೆ.

103 ಮಕ್ಕಳಿಗೆ ಬಾಲ ಸೇವಾ ಯೋಜನೆಯಡಿ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಉಳಿದ 10 ಮಕ್ಕಳಿಗೆ ನೆರವು ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಬಾಲ ಸೇವಾ ಯೋಜನೆಯ ಅಡಿಯಲ್ಲಿ ಈ ಮಕ್ಕಳಿಗೆ ಪದವಿ ಪೂರ್ಣಗೊಳಿಸುವವರೆಗೂ ಮಾಸಿಕ 3,500 ರೂಪಾಯಿ ಆರ್ಥಿಕ ನೆರವು ಹಾಗೂ ಲಾಜಿಸ್ಟಿಕಲ್ ನೆರವು ಸಿಗಲಿದೆ ಎಂದು ಘೋಷಿಸಲಾಗಿದೆ.

ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳ ಪೈಕಿ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಕ್ಕಳು ಅನಾಥರಾಗಿದ್ದಾರೆ. ಈ ಎರಡೂ ಜಿಲ್ಲೆಗಳಲ್ಲಿ ತಲಾ 12 ಮಕ್ಕಳು ಅನಾಥರಾಗಿದ್ದಾರೆ.

ಕೋಲಾರ-7,

ಬೀದರ್, ಯಾದಗಿರಿ, ಹಾಸನದಲ್ಲಿ ತಲಾ 6 ಮಂದಿ,

ಬಾಗಲಕೋಟೆ, ತುಮಕೂರು, ಶಿವಮೊಗ್ಗ, ಗದಗ, ದಕ್ಷಿಣ ಕನ್ನಡಗಳಲ್ಲಿ ತಲಾ 5,

ಧಾರವಾಡ, ಕೊಡಗು, ಮೈಸೂರು, ರಾಮನಗರಗಳಲ್ಲಿ ತಲಾ 4,

ಮಂಡ್ಯ, ಬೆಳಗಾವಿ, ಬಳ್ಳಾರಿಯಲ್ಲಿ ತಲಾ 3,

ವಿಜಯಪುರ, ದಾವಣಗೆರೆ, ಚಿತ್ರದುರ್ಗಗಳಲ್ಲಿ ತಲಾ 2,

ಚಾಮರಾಜನಗರ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರಿನಲ್ಲಿ ತಲಾ 1 ಮಕ್ಕಳು ಅನಾಥರಾಗಿದ್ದಾರೆ.

ಅಲ್ಲದೆ, ದೇಶದಲ್ಲಿ 2020ರ ಮಾರ್ಚ್ 1 ರಿಂದ 2021ರ ಆಗಸ್ಟ್‌ ಕೊನೆಯ ವೇಳೆಗೆ 1,01,032 ಮಕ್ಕಳು ಕೊರೊನಾದಿಂದ ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಬೆಂಗಳೂರು, ಚಂಡೀಘಡದಲ್ಲಿ ರೈಲ್ವೇ ಆರ್ಕೇಡ್‌ ನಿರ್ಮಾಣಕ್ಕೆ ಬಿಡ್‌ ಆಹ್ವಾನ; ಗೋಮಾಂಸ, ಹಂದಿ ಮಾಂಸ ನಿಷೇಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights