ಯೋಗಿ ಸರ್ಕಾರ ಟೀಕೆ; ಉತ್ತರ ಪ್ರದೇಶ ಮಾಜಿ ರಾಜ್ಯಪಾಲರ ವಿರುದ್ದ ದೇಶದ್ರೋಹ ಪ್ರಕರಣ ದಾಖಲು!
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ರಕ್ತ ಹೀರುವ ರಾಕ್ಷಸ ಸರ್ಕಾರ ಎಂದು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ಅವರ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿದ್ದಾರೆ.
ಬಿಜೆಪಿ ನಾಯಕ ಆಕಾಶ್ ಕುಮಾರ್ ಸಕ್ಸೇನಾ ನೀಡಿದ ದೂರಿನ ಆಧಾರದ ಮೇಲೆ ರಾಮಪುರ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಮನೆಗೆ ಭೇಟಿ ನೀಡಿದ್ದ ಖುರೇಷಿ ಅವರು ಯೋಗಿ ಸರ್ಕಾರವನ್ನು ರಕ್ತ ಹೀರುವ ರಾಕ್ಷಸ ಸರ್ಕಾರ ಎಂದು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಇದು ಎರಡು ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಯಾಗಲಿದೆ. ಇದರಿಂದ, ಸಮಾಜದಲ್ಲಿ ಅಶಾಂತಿ ನೆಲೆಸಲಿದೆ ಎಂದು ಬಿಜೆಪಿ ನಾಯಕ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಖುರೇಷಿ ಅವರ ಹೇಳಿಕೆ ಒಳಗೊಂಡಿರುವ ಪೆನ್‌ಡ್ರೈವ್ ಅನ್ನು ಸಹ ಪೊಲೀಸರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ, ಖುರೇಷಿ ಅವರ ವಿರುದ್ಧ ಸೆಕ್ಷನ್ 153ಎ ( ಧರ್ಮಗಳ ಆಧಾರದ ಮೇಲೆ ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುವುದು), 153ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವುದು), 124ಎ (ದೇಶದ್ರೋಹ) ಮತ್ತು 505(1)(ಬಿ) (ಭಯ ಸೃಷ್ಟಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಖುರೇಷಿ ಅವರು, 2014ರಿಂದ 2015ರವರೆಗೆ ಮಿಜೋರಾಂ ರಾಜ್ಯಪಾಲರಾಗಿದ್ದರು. ಕೆಲ ಕಾಲ ಉತ್ತರ ಪ್ರದೇಶದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ: ತರೀಕೆರೆ ಪುರಸಭೆ: ಕಾಂಗ್ರೆಸ್ ಭರ್ಜರಿ ಗೆಲುವು; ಒಂದು ಸ್ಥಾನ ಗೆದ್ದ ಬಿಜೆಪಿಗೆ ಭಾರೀ ಮುಖಭಂಗ!

