ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ : ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರ ತಂದೆ ಅರೆಸ್ಟ್!
ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರ ತಂದೆಯನ್ನು ಬ್ರಾಹ್ಮಣರ ಬಗ್ಗೆ ಟೀಕಿಸಿದ್ದಕ್ಕಾಗಿ ಬಂಧಿಸಲಾಗಿದೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ್ ಕುಮಾರ್ ಬಘೇಲ್ ಅವರನ್ನು ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಂಗಳವಾರ ಬಂಧಿಸಲಾಗಿದೆ.
ರಾಯಪುರ ಪೊಲೀಸರು ನಂದ್ ಕುಮಾರ್ ಬಘೇಲ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ದು ಅಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹಿಂದೆ, ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ 86 ವರ್ಷದ ನಂದ್ ಕುಮಾರ್ ಬಘೇಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಬ್ರಾಹ್ಮಣ ಸಮುದಾಯ ಆತನ ವಿರುದ್ಧ ರಾಯಪುರದ ಡಿಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ ನಂದ ಕುಮಾರ್ ಬಘೇಲ್ ಬ್ರಾಹ್ಮಣರನ್ನು “ಹೊರಗಿನವರು (ವಿದೇಶಿಯರು) ಎಂದು ಕರೆದಿದ್ದಾರೆ, ಅವರನ್ನು ಸುಧಾರಣೆ ಮಾಡಬೇಕು” ಎಂದು ಆರೋಪಿಸಿದ್ದಾರೆಂದು ಹೇಳಲಾಗಿದೆ.
ಡಿಡಿ ನಗರ ಪೊಲೀಸ್ ಠಾಣೆಯ ಉಸ್ತುವಾರಿ ಯೋಗಿತಾ ಖಪರ್ಡೆ, “ನಂದ ಕುಮಾರ್ ಬಘೇಲ್ ನೀಡಿದ ಹೇಳಿಕೆಗೆ ಬ್ರಾಹ್ಮಣ ಸಮುದಾಯವು ಆಕ್ಷೇಪವನ್ನು ವ್ಯಕ್ತಪಡಿಸಿದೆ. ಬ್ರಾಹ್ಮಣ ಸಮುದಾಯದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದರು. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ತಮ್ಮ ತಂದೆಯನ್ನು ಗೌರವಿಸುತ್ತಾರೆ. ಆದರೆ ನಮ್ಮ ಸರ್ಕಾರದಲ್ಲಿ ಯಾರೂ ಕಾನೂನಿಗಿಂತ ಮೀರಿದವರಿಲ್ಲ” ಎಂದು ಹೇಳಿದರು.
“ನಾನು ನನ್ನ ತಂದೆಯನ್ನು ಮಗನಂತೆ ಗೌರವಿಸುತ್ತೇನೆ. ಆದರೆ ಒಬ್ಬ ಮುಖ್ಯಮಂತ್ರಿಯಾಗಿ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಅವರ ಯಾವುದೇ ತಪ್ಪುಗಳನ್ನು ನಿರ್ಲಕ್ಷಿಸಲಾಗದು ” ಎಂದು ಭೂಪೇಶ್ ಬಘೇಲ್ ಹೇಳಿದರು.