ಡ್ರಗ್ಸ್ ಪ್ರಕಣದ ಚಾರ್ಜ್ಶೀಟ್ನಲ್ಲಿ ನಿರೂಪಕಿ ಅನುಶ್ರೀ ಹೆಸರು ಮಾಯ : ಗೃಹಸಚಿವರು ಹೇಳಿದ್ದೇನು?
ಸ್ಯಾಂಡಲ್ ವುಡ್ ಮಾದಕ ಲೋಕದಲ್ಲಿ ತಳುಕು ಹಾಕಿಕೊಂಡ ನಟ ನಟಿಯರಿಗೆ ಕಂಟಕ ಎದುರಾಗುತ್ತಲೇ ಇದೆ. ಡ್ರಗ್ಸ್ ಸೇವನೆ ಹಾಗೂ ಮಾರಾಟದಲ್ಲಿ ನಟಿ ರಾಗಿಣಿ ಹಾಗೂ ಸಂಜನ ಬಳಿಕ ಕೇಳಿಬಂದಿದ್ದ ನಿರೂಪಕಿ ಅನುಶ್ರೀ ಹೆಸರು ಸದ್ಯ ಮತ್ತೆ ಸದ್ದು ಮಾಡಿದೆ. ಈ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಹೆಸರು ಚಾರ್ಜ್ಶೀಟ್ನಲ್ಲಿ ಕೈಬಿಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ ಅವರು, “ಡ್ರಗ್ಸ್ ಪ್ರಕಣದ ಚಾರ್ಜ್ಶೀಟ್ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟಿರುವ ವಿಚಾರ ನಂಗೆ ಗೊತ್ತಿಲ್ಲ. ಕೇಳಿ ಹೇಳುತ್ತೇನೆ. ಡ್ರಗ್ಸ್ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅನುಶ್ರೀಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಯಾವ ರಾಜಕೀಯ ನಾಯಕರೂ ನಮ್ಮ ಮೇಲೆ ಒತ್ತಡ ತರುತ್ತಿಲ್ಲ. ಡ್ರಗ್ಸ್ ಪ್ರಕರಣದಲ್ಲಿ ರಾಜಕೀಯ ನಾಯಕರು ಆರೋಪಿಗಳ ಬಚಾವ್ ಮಾಡಲು ಒತ್ತಡ ಹಾಕಲ್ಲ” ಎಂದರು.
ಡ್ರಗ್ಸ್ ಪೂರೈಕೆ, ಸೇವನೆ ಪ್ರಕರಣ ಗಂಭೀರವಾದದ್ದು. ಎಂಥ ಪ್ರಭಾವಿಗಳಾಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಖಚಿತ. ನಿರೂಪಕಿ ಅನುಶ್ರೀ ಕೇಸ್ನಲ್ಲಿ ನಮಗೆ ರಾಜಕೀಯ ಒತ್ತಡಗಳಿಲ್ಲ. ನಮ್ಮ ಪೊಲೀಸರು ಇಂತಹ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಅನುಶ್ರೀ ಹೆಸರನ್ನು ಕೈಬಿಟ್ಟಿದ್ದರೆ, ಆ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದರು.