ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ದೌರ್ಜನ್ಯ; ಬಿಜೆಪಿ ನಾಯಕರ ಉಚ್ಚಾಟನೆಗೆ ಒತ್ತಾಯ!

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರಸ್ವತಿ ಕಾಮತ್ ಅವರ ಮೇಲೆ ಸುಳ್ಯ ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ ಮತ್ತು 14 ಜನರು ದೌರ್ಜನ್ಯ ಎಸಗಿರುವುದು ಕೋರ್ಟ್‌ನಲ್ಲಿ ಸಾಬೀತಾಗಿದೆ. ಅವರಿಗೆ ಶಿಕ್ಷೆಯೂ ಪ್ರಕಟವಾಗಿದೆ. ಹೀಗಾಗಿ ಬಿಜೆಪಿಯವರು ನಿಜವಾಗಿಯೂ ಮಹಿಳೆಯರಿಗೆ ಮಾತೃ ಸ್ಥಾನದ ಗೌರವ ನೀಡುವುದಾದರೆ ಕೂಡಲೇ ದೌರ್ಜನ್ಯವೆಸಗಿದ ಅಪರಾಧಿಗಳನ್ನು ಪಕ್ಷದಿಂದ ಕಿತ್ತೊಗೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸವಾಲು ಹಾಕಿದ್ದಾರೆ.

2013ರಲ್ಲಿ ಸುಳ್ಯ ತಾಲೂಕಿನಲ್ಲಿ ಕಾಂಗ್ರೆಸ್‌ನ ಸರಸ್ವತಿ ಕಾಮತ್ ಅವರ ಮೇಲೆ ಹರೀಶ್ ಕಂಜಿಪಿಲಿ ಮತ್ತು 14 ಮಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕೇಸು ದಾಖಲಾಗಿ, ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ 2 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬಿಜೆಪಿ ಮಹಿಳೆಯರಿಗೆ ಮಾತೃ ಸ್ಥಾನದ ಗೌರವ ನೀಡುವ ಮಾತನಾಡುತ್ತಿದೆ. ಅದಕ್ಕೆ ಅವರು ಬದ್ದವಾಗಿದ್ದರೆ ಅಪರಾಧಿಗಳನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಒತ್ತಾಯಿಸಿದ್ದಾರೆ.

ಮಾತಿನಲ್ಲಿ ಸಂಸ್ಕೃತಿ ತೋರಿಸುವ ಬಿಜೆಪಿ ನಡತೆಯಲ್ಲಿ ಅದನ್ನು ಸಾಬೀತುಪಡಿಸಲಿ. ಹರೀಶ್ ದೌರ್ಜನ್ಯವೆಸಗಿದ ಬೂತ್ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಬೂತ್ ಆಗಿದೆ. ಸಚಿವರ ಕ್ಷೇತ್ರದಲ್ಲೇ ಈ ದುಂಡಾವರ್ತನೆ ಮಾಡಿರುವುದು ನಾಚಿಕೆಗೇಡು. ಸುಮಾರು 8 ವರ್ಷಗಳ ಸತತ ಹೋರಾಟ ಮೂಲಕ ಸರಸ್ವತಿ ಕಾಮತ್ ಮಹಿಳಾ ಸ್ವಾತಂತ್ರ್ಯ, ಹಕ್ಕನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ಭಾರತೀಯ ಜನತಾ ಪಾರ್ಟಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು 2014ರಲ್ಲಿ ಗ್ಯಾಸ್‌ಗೆ 900ಕ್ಕೂ ಅಧಿಕ ದರವಿತ್ತು ಎಂದು ಹೇಳಿರುವುದು ನಿಜಕ್ಕೂ ಹಾಸ್ಯಾಸ್ಪದ. 2014ರಲ್ಲಿ ಮನೆ ಗ್ಯಾಸ್‌ಗೆ 414ರೂ., ವಾಣಿಜ್ಯ ಗ್ಯಾಸ್‌ಗೆ 841ರೂ. ಇತ್ತು. ಆದರೆ ಈಗ ಗ್ಯಾಸ್ ದರ 900ರೂ. ಆಸುಪಾಸಿನಲ್ಲಿದ್ದು, ವಾಣಿಜ್ಯ ಗ್ಯಾಸ್ 1990ರೂ. ಆಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿ.ಟಿ. ರವಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್ ಮಾತನಾಡಿ, ಎಂಟು ವರ್ಷಗಳ ನನ್ನ ನ್ಯಾಯಾಂಗ ಹೋರಾಟಕ್ಕೆ ಜಯ ಸಿಕ್ಕಿದ ಖುಷಿ ಇದೆ. ನನ್ನ ಮೇಲಿನ ದೌರ್ಜನ್ಯ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ನಾನು ನ್ಯಾಯಕ್ಕಾಗಿ ಕಾನತ್ತೂರು ದೇವರಿಗೆ ಮೊರೆ ಹೋಗಿದ್ದೆ. ಅದರ ಫಲಿತಾಂಶ ಈಗ ಬಂದಿದೆ. ಈ ವಿಚಾರದಲ್ಲಿ ನನ್ನ ಕಾನೂನು ಹೋರಾಟ ಮುಂದುವರಿಯಲಿದೆ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights