ಭಾರೀ ಮಳೆ : ರಿಷಿಕೇಶ-ಬದರಿನಾಥ ಹೆದ್ದಾರಿಯಲ್ಲಿ ಭೂಕುಸಿತ..!
ಭಾರೀ ಮಳೆಯಿಂದಾಗಿ ರಿಷಿಕೇಶ-ಬದರಿನಾಥ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ. ಉತ್ತರಾಖಂಡದಲ್ಲಿ ಸತತ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭೂಕುಸಿತದ ಭೀತಿಯಿಂದ ಹಲವಾರು ಸ್ಥಳಗಳಲ್ಲಿ ಹೆದ್ದಾರಿಗಳನ್ನು ಮುಚ್ಚಲಾಗಿದೆ.

ಶುಕ್ರವಾರ ಭಾರೀ ಮಳೆಯಿಂದಾಗಿ ರಿಷಿಕೇಶ-ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ. ಕಲ್ಲುಗಳು ರಸ್ತೆಗೆ ಉರುಳಿಬಿದ್ದ ಪರಿಣಾಮ ಹಲವಾರು ವಾಹನಗಳು ಸಿಲುಕಿಕೊಂಡು ಕೆಲ ವಾಹನಗಳು ಹಾನಿಗೊಳಗಾಗಿವೆ. ಹೀಗಾಗಿ ಈ ಪ್ರದೇಶದ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.

ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಉತ್ತರಾಖಂಡದ ಕೆಲವು ಭಾಗಗಳಾದ ರುದ್ರಪ್ರಯಾಗ ಜಿಲ್ಲೆಯ ಸಿರೋಬಗಡ್ ಮತ್ತು ನಾರ್ಕೋಟ ಪ್ರದೇಶಗಳಿಗೆ ಸಂಪರ್ಕ ಕಡಿತಗೊಳಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಈ ವಾರದ ಆರಂಭದಲ್ಲಿ ಉತ್ತರಾಖಂಡದ ಡೆಹ್ರಾಡೂನ್-ರಾಣಿಪೋಖಾರಿ-ರಿಷಿಕೇಶ್ ಹೆದ್ದಾರಿಯಲ್ಲಿ ತೆರೆದಿದ್ದ ಪರ್ಯಾಯ ರಸ್ತೆಯು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೇಗವಾಗಿ ಚಲಿಸುವ ಪ್ರವಾಹಗಳಲ್ಲಿ ಒಂದು ವಾಹನ ರಸ್ತೆಯ ಅಂಚಿನಲ್ಲಿ ನಿಂತಿರುವುದನ್ನು ಕಾಣಬಹುದು.

