ಬಂಗಾಳ: ಮಾಜಿ ಕಾಂಗ್ರೆಸ್ ಅಧ್ಯಕ್ಷ ಸೋಮೆನ್ ಮಿತ್ರಾ ಅವರ ಪತ್ನಿ ಟಿಎಂಸಿಗೆ ಮರಳುವ ಸಾಧ್ಯತೆ!
ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಸೋಮೆನ್ ಮಿತ್ರಾ ಅವರ ಪತ್ನಿ, ಮಾಜಿ ಶಾಸಕಿ ಶಿಖಾ ಮಿತ್ರಾ ಅವರು ಟಿಎಂಸಿ ವರಿಷ್ಠೆ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಶನಿವಾರ ಹೊಗಳಿದ್ದಾರೆ. ಇದು ಅವರು ಟಿಎಂಸಿಗೆ ಮರಳುವ ಸುಳಿವು ಎಂದು ಹೇಳಲಾಗಿದೆ.
ಪಕ್ಷದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ 2014 ರಲ್ಲಿ ಚೌರಿಂಗ್‌ಹೀ ಕ್ಷೇತ್ರದ ಟಿಎಂಸಿ ಶಾಸಕಿಯಾಗಿದ್ದ ಅವರು ಎಂಎಲ್‌ಎ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರು ತಾವು ಅಧಿಕೃತವಾಗಿ ಟಿಎಂಸಿಯನ್ನು ತೊರೆದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನಾನು ಇತ್ತೀಚೆಗೆ ಟಿಎಂಸಿಯೊಂದಿಗೆ ಸಂಪರ್ಕದಲ್ಲಿದ್ದೇನೆ. ನಾನು ಮಮತಾ ಬ್ಯಾನರ್ಜಿಯೊಂದಿಗೆ ಮಾತನಾಡಿದ್ದೇನೆ. ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ಸೈದ್ಧಾಂತಿಕವಾಗಿ ಹೆಚ್ಚು ವ್ಯತ್ಯಾಸವಿಲ್ಲ ಎಂದು ನಾನು ಭಾವಿಸುತ್ತೇನೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಾನು ನನ್ನ ಹೋರಾಟವನ್ನು ಟಿಎಂಸಿಯಲ್ಲಿ ಹೆಚ್ಚು ಅರ್ಥಪೂರ್ಣವಾಗಿ ಮುಂದುವರಿಸಬಹುದು” ಎಂದು ಅವರು ಹೇಳಿದ್ದಾರೆ.
ಬ್ಯಾನರ್ಜಿಗೆ ವಿಶಾಲ ಮನೋಭಾವವಿದೆ. ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಕೂಡ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಿತ್ರಾ ಹೇಳಿದ್ದಾರೆ.
ಅವರು ಶೀಘ್ರದಲ್ಲೇ ಪಕ್ಷಕ್ಕೆ ಸೇರಲಿದ್ದಾರೆ ಎಂದು ಟಿಎಂಸಿಯ ಮೂಲಗಳು ತಿಳಿಸಿವೆ.
ಮಿತ್ರಾ ಅವರ ಪತಿ ಸೊಮೆನ್ ಮಿತ್ರಾ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ ನಂತರ ಟಿಎಂಸಿಯೊಂದಿಗಿನ ಸಂಪರ್ಕವನ್ನು ಕಡಿದುಕೊಂಡಿದ್ದರು.
ಕಳೆದ ವರ್ಷ ಸೋಮೆನ್ ಮಿತ್ರಾ ಸಾವನ್ನಪ್ಪಿದರು. ನಂತರ ಅಧೀರ್ ಚೌಧರಿ ಕಾಂಗ್ರಸ್ ನಾಯಕತ್ವ ವಹಿಸಿಕೊಂಡರು. ಅವರೊಂದಿಗೆ ಮಿತ್ರಾ ಮತ್ತು ಆಕೆಯ ಪುತ್ರ ರೋಹನ್ ಭಿನ್ನಾಭಿಪ್ರಾಯಗಳನ್ನು ಹೊರಹಾಕಿದ್ದರು. ಆ ವೇಳೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಸಂಪರ್ಕಿಸಿದ್ದರು.
ಮಾತ್ರವಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಿತ್ರಾ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಆದರೆ, ನನ್ನ ಒಪ್ಪಿಗೆ ಇಲ್ಲದೆ, ನನ್ನ ಹೆಸರನ್ನು ಬಿಜೆಪಿ ಘೋಷಿಸಿದೆ ಎಂದು ಹೇಳಿದ ಮಿತ್ರ, ಚುನಾವಣೆಯಿಂದ ದೂರ ಉಳಿದಿದ್ದರು.
ಇದನ್ನೂ ಓದಿ: ಜನಾಶೀರ್ವಾದ ಯಾತ್ರೆಯಲ್ಲಿ ಕುದುರೆಯ ಮೇಲೆ ಬಿಜೆಪಿ ಧ್ವಜದ ಚಿತ್ರಣ : ಮೇನಕಾ ಗಾಂಧಿ ಎನ್‌ಜಿಒದಿಂದ ದೂರು!

