ಭೋಪಾಲ್‌ ಅನಿಲ ದುರಂತ ಸಂತ್ರಸ್ಥರ ಮೇಲೆ ಕೊವ್ಯಾಕ್ಸಿನ್‌ ಲಸಿಕೆ ಪ್ರಯೋಗ ದಾಳಿ!

ದೇಶದ ಏಕೈಕ ಕೊರೊನಾ ಲಸಿಕೆ ಎಂದು ಹೆಸರು ಪಡೆದಿರುವ ಕೊವ್ಯಾಕ್ಸಿನ್‌ ಲಸಿಕೆಯನ್ನು ಭೋಪಾಲ್‌ ಅನಿಲ ದುರಂತಕ್ಕೆ ತುತ್ತಾಗಿದ್ದ ಸಂತ್ರಸ್ತ ಕುಟುಂಬದ ವ್ಯಕ್ತಿಯೊಬ್ಬರಿಗೆ ನೀಡಲಾಗಿತ್ತು. ಆ ನಂತರ, ಅವರು ಸಾವನ್ನಪಿದ್ದರು. ಈ ಹಿನ್ನಲೆಯಲ್ಲಿ ಭೋಪಾಲ್‌ನಲ್ಲಿ ನಡೆಯುತ್ತಿರುವ ಕೊವ್ಯಾಕ್ಸಿನ್ ಮೂರನೆ ಹಂತದ ಪ್ರಯೋಗವನ್ನು ರದ್ದು ಮಾಡಬೇಕು. ಮೂರನೇ ಹಂತದಲ್ಲಿ ಲಸಿಕೆ ಸ್ವೀಕರಿಸಿ ಮೃತರಾದ ವ್ಯಕ್ತಿಗೆ ಸೂಕ್ತ ಪರಿಹಾರ ನೀಡಬೇಕು. ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಧಾನಿ ಮೋದಿಯವರಿಗೆ ಭೋಪಾಲ್ ಅನಿಲ ದುರಂತದ ಸಂತ್ರಸ್ತರ ಪರ ಕೆಲಸ ಮಾಡುತ್ತಿರುವ ನಾಲ್ಕು ಸಂಘಟನೆಗಳು ಪತ್ರ ಬರೆದಿವೆ.

ಕೊವ್ಯಾಕ್ಸಿನ್‌ ಅನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ. ಭೋಪಾಲ್‌ನ ಪೀಪಲ್ಸ್ ಕಾಲೇಜ್ ಆಫ್ ಮೆಡಿಸಿನ್ & ರಿಸರ್ಚ್ ಸಂಸ್ಥೆಯು ಭೋಪಾಲ್‌ನಲ್ಲಿ ಲಸಿಕೆಯ ಪ್ರಯೋಗ ನಡೆಸುತ್ತಿದೆ.

ಸಾವಿಗೀಡಾದ ವ್ಯಕ್ತಿಗೆ ಲಸಿಕೆಯ ಡೋಸ್‌ನಿಂದ ಸಾವು ಸಂಭವಿಸಿಲ್ಲ  ಎಂದು ಪೀಪಲ್ಸ್ ಕಾಲೇಜ್ ಆಫ್ ಮೆಡಿಸಿನ್ & ರಿಸರ್ಚ್ ಸಂಸ್ಥೆ ಹೇಳಿಕೆ ನೀಡಿದ್ದು, ಮಧ್ಯಪ್ರದೇಶ ಸರ್ಕಾರ ಕೂಡ ಕಾಲೇಜಿಗೆ ಕ್ಲೀನ್‌ಚಿಟ್ ನೀಡಿದೆ.

ಇದನ್ನೂ ಓದಿ: ಜನರನ್ನು ಪ್ರಯೋಗಾಲಯದ ಇಲಿಗಳನ್ನಾಗಿಸಬೇಡಿ; ಲಸಿಕೆಯ ಸತ್ಯಾಸತ್ಯತೆ ತಿಳಿಸಿ: ಜಾರ್ಖಂಡ್‌ ಆರೋಗ್ಯ ಸಚಿವ

ಸಾವಿಗೀಡಾದ ಸ್ವಯಂಸೇವಕ ಲಸಿಕೆಯ ಡೋಸ್ ನೀಡಿದ ಹಿಂದಿನ 7 ದಿನ ಕಾಲ ಆರೋಗ್ಯವಂತ ಸ್ಥಿತಿಯಲ್ಲೇ ಇದ್ದ, ಯಾವುದೇ ಅಡ್ಡ ಪರಿಣಾಮ ಕೂಡ ಸಂಭವಿಸಿರಲಿಲ್ಲ ಎಂದು ಹಲವು ಮಾಧ್ಯಮಗಳ ವರದಿಗಳು ಹೇಳುತ್ತಿವೆ.

ಭೋಪಾಲ್‌ನ ಗಾಂಧಿ ಮೆಡಿಕಲ್ ಕಾಲೇಜ್ ನೀಡಿರುವ ಮರಣೋತ್ತರ ವರದಿ ಉಲ್ಲೇಖಿಸಿರುವ ಭಾರತ್ ಬಯೋಟೆಕ್, ‘ಕಾರ್ಡಿಯೋ-ರೆಸ್ಪಿರೆಟರಿ ಸಮಸ್ಯೆಯಿಂದ ಸಾವು ಸಂಭವಿಸಿದೆ, ಬಹುಷಃ ವಿಷಪ್ರಾಸನ ನಡೆದಿರಬಹುದು’ ಎಂದು ಹೇಳುತ್ತಿದೆ.

ಮೃತಪಟ್ಟ ವ್ಯಕ್ತಿಯ ಕುಟುಂಬ
ಮೃತಪಟ್ಟ ವ್ಯಕ್ತಿಯ ಕುಟುಂಬ

ಆದರೆ, ಈ ಲಸಿಕೆಯ ಟ್ರಯಲ್ಸ್ ಅನ್ನು ಕೂಡಲೇ ನಿಲ್ಲಿಸಬೇಕೆಂದು ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಸಂಘ, ಭೋಪಾಲ್ ಗ್ಯಾಸ್ ಪೀಡಿತ್ ಪುರುಷ್ ಸಂಘ, ಭೋಪಾಲ್ ಗ್ರೂಪ್ ಫಾರ್ ಇನ್ಫಾರ್ಮೆಷನ್ & ಆಕ್ಚನ್ ಮತ್ತು ಚಿಲ್ಡ್ರನ್ ಅಗೇನಸ್ಟ್ ಡೌ ಕಾರ್ಬೈಡ್- ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿವೆ.

ಇದನ್ನೂ ಓದಿ: 12 ವರ್ಷ ಮೇಲ್ಪಟ್ಟ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮತಿ!

‘ಲಸಿಕೆ ಪ್ರಯೋಗಗೊಂಡ 1,700 ಜನರ ಪೈಕಿ ಕನಿಷ್ಠ 700 ಜನರು ಭೋಪಾಲ್ ಅನಿಲ ದುರಂತದಿಂದ ಸಂಭವಿಸಿದ ಕಾಯಿಲೆಗಳಿಂದ ನರಳುತ್ತಿದ್ದಾರೆ. ಲಸಿಕೆ ಪಡೆದ 10 ದಿನದಲ್ಲೇ ಒಬ್ಬ ಅನಿಲ ದುರಂತ ಸಂತ್ರಸ್ತ ತೀರಿಕೊಂಡಿದ್ದು, ಲಸಿಕೆ ಪಡೆದ ಇತರ ಸಂತ್ರಸ್ತರು ಗಂಭೀರ ಆರೋಗ್ಯ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಇಂತಹ ಅಸಮರ್ಪಕ ಟ್ರಯಲ್ಸ್ ಕಾರಣದಿಂದ 12 ವರ್ಷದ ಹಿಂದೆ 13 ಅನಿಲ ದುರಂತ ಸಂತ್ರಸ್ತರು ಸಾವೀಗೀಡಾಗಿದ್ದರು. ಈಗಲೂ ಆ ಘಟನೆಗೆ ಕಾರಣಾದವರ ಮೇಲೆ ಕ್ರಮ ಜರುಗಿಸಿಲ್ಲ’ ಎಂದು ಮಾಧ್ಯಮಗಳಿಗೆ ಹೇಳಿರುವ ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಸಂಘದ ರಷೀದಾ ಬೀ, ಇಂಥದ್ದು ಮತ್ತೆ ಸಂಭವಿಸಲಾರದು ಎಂದು ಪ್ರಧಾನಿ ಭರವಸೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

‘ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಅವರ ಸಮ್ಮತಿಯಿಲ್ಲದೇ ಕೊವ್ಯಾಕ್ಸಿನ್ ಲಸಿಕೆಯ ಟ್ರಯಲ್ ಶಾಟ್ಸ್/ಡೋಸ್ ನೀಡಲಾಗಿದೆ. ಟ್ರಯಲ್ಸ್ ನಂತರ ಅವರ ಆರೋಗ್ಯ ಕುರಿತ ಅಪ್ಡೇಟ್‌ಗಳನ್ನು ಕೂಡ ಮೆಂಟೇನ್ ಮಾಡಿಲ್ಲ. ಕೆಲವರು ಟ್ರಯಲ್‌ನಿಂದ ಹೊರಬಂದರು. ಅವರಿಗೆ ನಂತರದಲ್ಲಿ ಸೂಕ್ತ ಆರೋಗ್ಯ ಚಿಕಿತ್ಸೆಯ ಏರ್ಪಾಟನ್ನೂ ಮಾಡಿಲ್ಲ’ ಎಂದು ಭೋಪಾಲ್ ಗ್ರೂಪ್ ಫಾರ್ ಇನ್ಫಾರ್ಮೆಷನ್ & ಆಕ್ಚನ್ ಸಂಘಟನೆಯ ರೀಚಾ ಧಿಂಗ್ರಾ ಕಿಡಿ ಕಾರಿದ್ದಾರೆ.

‘ಕಂಪನಿಯೊಂದನ್ನು ರಕ್ಷಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಆರೋಗ್ಯವನ್ನೇ ಹಾಳು ಮಾಡುತ್ತಿದೆ’ ಎಂದು ಸಂಘಟನೆಗಳು ದೂಷಿಸಿವೆ. ಮಧ್ಯಪ್ರದೇಶದ ಆರೋಗ್ಯ ಸಚಿವ ವಿಶ್ವಾಸ್ ಸಾರಂಗ್ ‘ಭಾರತ್ ಬಯೋಟೆಕ್ ತಪ್ಪು ಮಾಡಿಲ್ಲ’ ಎಂದು ಪ್ರತಿಪಾದಿಸುತ್ತಿದ್ದಾರೆ.

ಇದನ್ನೂ ಓದಿ: ಚಾಲ್ತಿಗೆ ಬಂದಿರುವುದು ‘BJPಯ ಲಸಿಕೆ’; ಅದನ್ನು ನಂಬಲು ಸಾಧ್ಯವಿಲ್ಲ: ಅಖಿಲೇಶ್ ಯಾದವ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights