ಅಫ್ಘಾನಿಸ್ತಾನದಲ್ಲಿ ತುತ್ತು ಅನ್ನಕ್ಕಾಗಿ ಹಾಹಾಕಾರ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸ್ಥಳೀಯರು!

ಹಿಂಸಾಚಾರ, ಕ್ರೂರತೆ, ದಾಳಿ, ಹಲ್ಲೆ, ಉಸಿರುಗಟ್ಟಿಸುವ ವಾತಾವರಣ. ಇದೆಲ್ಲವೂ ಆಫ್ಘಾನಿಸ್ತಾನಿಗಳಿಗೆ 20 ವರ್ಷಗಳ ಹಿಂದಿನ ಕರಾಳ ದಿನಗಳನ್ನು ನೆನಪು ಮಾಡುತ್ತಿವೆ. ತಾಲಿಬಾನಿಗಳು ಅಫ್ಘಾನಿಸ್ತಾನಕ್ಕೆ ಒಕ್ಕರಿಸಿದ್ದೇ ತಡ ಸ್ಥಳೀಯರ ಸ್ಥಿತಿ ಶೋಚನೀಯವಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತ ದುಸ್ಥಿತಿ ಬಂದೊದಗಿದೆ. ತಮ್ಮ ಮತ್ತು ಕುಟುಂಬಸ್ಥರ ಹೊಟ್ಟೆ ತುಂಬಿಸಲು ಪುಟ್ಟಪುಟ್ಟ ಮಕ್ಕಳು ಜೀವನದ ಹಂಗು ತೊರೆದಿದ್ದಾರೆ.

ಹೌದು… ತಾಲಿಬಾನ್ ಅದ್ಯಾವ ಗಳಿಗೆಯಲ್ಲಿ ಆಫ್ಘಾನಿಸ್ತಾನಕ್ಕೆ ಕಾಲಿಟ್ಟಿತೋ ಆಗಿನಿಂದಲೂ ಭಯದ ವಾತಾವಣ ಸೃಷ್ಟಿಯಾಗಿದೆ. ಉಸಿರು ಬಿಗಿ ಹಿಡಿದುಕೊಂಡು ಜೀವನ ಸಾಗಿಸುವ ಹಂತಕ್ಕೆ ಆಫ್ಘಾನಿಸ್ತಾನ್ ಪ್ರಜೆಗಳು ಬಂದು ತಲುಪಿದ್ದಾರೆ. ದಿನಗಳೆದಂತೆ ತಾಲಿಬಾನಿಗಳು ತಮ್ಮ ಹಳೆ ವರಸೆ ಶುರು ಮಾಡಿದ್ದು ಮಹಿಳೆಯರು ಮತ್ತು ಮಾಧ್ಯಮ ಹಕ್ಕು ಕಿತ್ತಿಕೊಳ್ಳುತ್ತಿದ್ದಾರೆ. ಅಷ್ಟೇ ಯಾಕೆ ತಿನ್ನಲೂ ಒಂದು ಹೊತ್ತಿನ ಊಟಕ್ಕೂ ಆಫ್ಘಾನಿಸ್ತಾನಿಗಳು ಪರದಾಡುವಂತ ಹೀನಾಯ ಬದುಕಿಗೆ ತಾಲಿಬಾನ್ ತಂದೊಡ್ಡಿದೆ.

ಅನ್ನಕ್ಕಾಗಿ ಆಫ್ಘಾನ್ ಜನರ ಆರ್ತನಾದ :

ಈ ಹಿಂದೆ ವೀಡಿಯೋಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮುಳ್ಳು ತಂತಿಯ ಮೇಲೆ ಎಸೆದು ಅಮೇರಿಕ ಸೈನಿಕರಿಗೆ ಕಾಪಾಡುವಂತೆ ಬೇಡಿಕೊಳ್ಳುವುದನ್ನು ನೋಡಿದ್ದೇವೆ. ಆದರೀಗ ಇದಕ್ಕಿಂತಲೂ ಆಫ್ಘಾನಿಸ್ತಾನದಲ್ಲಿ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಹಿಂದೆಂದು ಕಾಣದ ಮಕ್ಕಳ ಭೀಕರ ದೃಶ್ಯಗಳು ಹರದಾಡುತ್ತಿವೆ. ತುತ್ತು ಅನ್ನಕ್ಕಾಗಿ ಮಕ್ಕಳು ಜೀವದ ಹಂಗು ತೊರೆದು ಬೀದಿಗಿಳಿದಿದ್ದಾರೆ. ಇದಕ್ಕೆ ಕಾರಣ ಹಸಿವು…

The Economic Disaster Behind Afghanistan's Mounting Human Crisis | Crisis Group

ಹೌದು… ತುತ್ತು ಅನ್ನಕ್ಕಾಗಿ ಮಕ್ಕಳು ತಮ್ಮ ಪೋಷಕರು ತಯಾರಿಸಿದ ವಸ್ತುಗಳನ್ನ ತೋರ್ಕಾಮ್ ಮಾರುಕಟ್ಟೆಯಲ್ಲಿ ಮಾರಲು ತೋರ್ಕಾಮ್ ಗಡಿ ಮಾರ್ಗದಲ್ಲಿ ಲಾರಿಗಳ ಅಡಿಯಲ್ಲಿ ಓಡಾಡುತ್ತಾರೆ. ಉಗ್ರರ ಕಣ್ಣು ತಪ್ಪಿಸಿ ಮಕ್ಕಳು ಮಾರುಕಟ್ಟೆಗಳಿಗೆ ಹೋಗಿ ತಮ್ಮ ಪೋಷಕರು ತಯಾರಿಸಿದ ವಸ್ತುಗಳನ್ನು ಹೊತ್ತು ಮಾರಾಟ ಮಾಡುತ್ತಾರೆ. ಮಾರ್ಗ ಮಧ್ಯೆ ಪಾಕಿಸ್ತಾನದ ಸೈನಕರಿಗೆ ಸಿಕ್ಕಿ ಬೀಳುವ ಭಯದಿಂದ ಮಕ್ಕಳು ಆಹಾರ ಹೊತ್ತು ಬರುವ ಲಾರಿ ಅಡಿಯಲ್ಲಿ ನುಸುಳಿ ಹೋಗುವುದು ನಿಜಕ್ಕೂ ಘನಘೋರ ದೃಶ್ಯವೇ ಸರಿ. ಇದರಿಂದಾಗುವ ಅಪಾಯದ ಅರಿವಿದ್ದರೂ ಮಕ್ಕಳು ಸಾವಿನೊಂದಿಗೆ ಸರಸವಾಡಿ ಗಡಿ ದಾಟುವ ಪ್ರಯತ್ನ ಮಾಡುತ್ತಾರೆ.

ತಾಲಿಬಾನ್ ಒಕ್ಕರಿಸಿದ ಬಳಿಕ ಆಫ್ಘಾನ್ ಬಡತನ ಹೆಚ್ಚಳ :

ತಾಲಿಬಾನಿಗಳು ಒಕ್ಕರಿಸಿದ ಬಳಿಕ ಆಫ್ಘಾನಿಸ್ತಾನದಲ್ಲಿ ವಿದೇಶದಿಂದ ಬರುವ ಆಹಾರ, ಹಣ , ಔಷಧಿ ಸಂಪೂರ್ಣವಾಗಿ ಬಂದ್ ಆಗಿದೆ. ಸಾವಿರಾರು ಜನ ತುತ್ತು ಅನ್ನವಿಲ್ಲದೇ ಜೀವನ ಸಾಗಿಸುವಂತ ದುಸ್ಥಿತಿ ಎದುರಾಗಿದೆ.

The Civil Challenges to Peace in Afghanistan | Center for Strategic and International Studies

ಅದೆಷ್ಟೋ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. ಅದೆಷ್ಟೋ ಜನ ಮನೆ ಬಿಟ್ಟು ಬೀದಿ ಪಾಲಾಗಿದ್ದಾರೆ. ಇನ್ನೂ ಕೆಲವರು ದೇಶದಿಂದಲೇ ಪಲಾಯನ ಮಾಡಿದರೆ, ಹಲವರು ಆಫ್ಘಾನ್ ನಿಂದ ಹೊರಬಂದು ನಿರ್ಜನಿತ ಪ್ರದೇಶದಲ್ಲಿ ಜೀವನ ಮಾಡುತ್ತಿದ್ದಾರೆ. ಈ ಹಿಂದೆ ಅದೆಷ್ಟೋ ಸ್ಥಳೀಯ ನಿರಾಶ್ರಿತರಿಗೆ ಆಫ್ಘಾನ್ ಸರ್ಕಾರ ಕೊಂಚ ಸಹಾಯ ಮಾಡುತ್ತಿತ್ತು. ಆದರೀಗ ಅದು ಸಿಗುತ್ತಿಲ್ಲ. ಜೀವನಕ್ಕೆ ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ದುಬಾರಿ ಹಣ ಖರ್ಚು ಮಾಡಲು ಕೈಯಲ್ಲಿ ಹಣವಿಲ್ಲ. ಕೆಲಸವಿಲ್ಲ. ಪಲಾಯನ ಮಾಡಲು ಆಗುತ್ತಿಲ್ಲ. ಹೀಗೆ ಒಂದಾ ಎರಡಾ ಆಪ್ಘಾನಿಸ್ತಾನದ ಸ್ಥಳೀಯರ ಸಮಸ್ಯೆಗಳು ಹೇಳತೀರದ್ದು.

ವರದಿಗಳ ಪ್ರಕಾರ, ಆಫ್ಘಾನಿಸ್ತಾನದಲ್ಲಿ 40 ಲಕ್ಷ ಜನರಿಗೆ ಆಹಾರ ಸಿಗುವುದು ಕಷ್ಟವಾಗಿದೆ. ಇನ್ನೂ ಆಫ್ಘಾನಿಸ್ತಾನದ ಒಟ್ಟು ಜನರಲ್ಲಿ ಶೇ 97 ಜನ ಬಡತನದ ರೇಖೆಗಿಂತ ಕೆಳಗಿಳಿಯುವ ಸಾಧ್ಯತೆ ಇದೆ. ಈ ಮಧ್ಯೆ ಸೆಪ್ಟೆಂಬರ್ ಆಹಾರ ದಾಸ್ತಾನು ಖಾಲಿ ಆಗುವ ಸಾಧ್ಯತೆ ಇದ್ದು ಮುಂದೇನು ಎಂದು ಚಿಂತಿಸುವಂತಾಗಿದೆ.

ತಾಲಿಬಾನ್ ಉಗ್ರರಿಗೆ ಊಟವಿಲ್ಲ:

ತಾಲಿಬಾನ್ ಕಾಲಾಳುಗಳ ಸ್ಥಿತಿ ಆ ದೇವರೇ ಕಾಯಬೇಕು. ಯಾಕಂದ್ರೆ ತಾಲಿಬಾನ್ ಆಗಸ್ಟ್ 15ರಂದು ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡು ತನ್ನದೇ ಆದ ಸರ್ಕಾರ ನಿರ್ಮಿಸಿದೆ. ಆದರೇ ಕಾಬೂಲ ಅರಮನೆ ಒಳಗೆ ಅಧಿಕಾರ ಪಡೆದವರು ತಣ್ಣಗಿದ್ದರೆ ಇತ್ತ ತಾಲಿಬಾನ್ ಕೈ ಕೆಳಗಿರುವ ಉಗ್ರರನ್ನ ಕೇಳೋರೇ ಧಿಕ್ಕಿಲ್ಲದಂತಾಗಿದೆ. ತಾಲಿಬಾನ್ ಸರ್ಕಾರ ತಮ್ಮದೇ ಉಗ್ರರಿಗೆ ಊಟ ಹಾಕಲು ಸಾಧ್ಯವಾಗುತ್ತಿಲ್ಲ.

Taliban Took Afghanistan But Now Face Cash Squeeze | Omaha Daily Record

ಹಲವಾರು ಉಗ್ರರಿಗೆ ಸಂಬಳವಿಲ್ಲ. ಮಲಗಿಕೊಳ್ಳೋಕೆ ಒಂದೊಳ್ಳೆ ಸ್ಥಳ ಇಲ್ಲ. ತಾವಿದ್ದ ವಾಹನದಲ್ಲೇ ಅವರು ಮಲಗಿಕೊಳ್ಳುತ್ತಾರೆ. ಸಂಘ- ಸಂಸ್ಥೆಗಳು ಕೊಟ್ಟ ಊಟ ತಿಂದು ಬದುಕುತ್ತಿದ್ದಾರೆ. ಹೀಗಾಗಿ ತಾಲಿಬಾನ್ ಸರ್ಕಾರ ವಿದೇಶಗಳ ನೆರವಿನತ್ತ ಮುಖ ಮಾಡಿ ಕುಳಿತಿದೆ.

ಖಾತೆಯಲ್ಲಿರುವ ಹಣ ಕೈಗೆ ಬಾರದೆ ನೌಕರರ ಪರದಾಟ :

ಇನ್ನೂ ನೌಕರಿಯಲ್ಲಿ ಇರುವ ಜನರ ಸ್ಥಿತಿ ಅಂತೂ ಹೇಳುವಂತಿಲ್ಲ. ತಮ್ಮದೇ ಹಣವನ್ನು ಪಡೆಯಲು ಬ್ಯಾಂಕ್ ಗಳ ಮುಂದೆ ಗಂಟೆಗಟ್ಟಲೆ ಕಾದರೂ ಹಣ ಸಿಗುವ ಗ್ಯಾರೆಂಟಿ ಇಲ್ಲ. ದಿನ ಬೆಳಗಾದರೆ ಹಣ ಸಿಗದೇ ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತುಕೊಳ್ಳಬೇಕು.

Former Afghan central banker predicts economic hardship for the Taliban regime

 

ತಾಲಿಬಾನ್ ಆಡಳಿತಕ್ಕೆ ಬೆದರಿ ಅದೆಷ್ಟೋ ಬ್ಯಾಂಕುಗಳು ಬಾಗಿಲು ಮುಚ್ಚಿವೆ. ಇರೋ ಬ್ಯಾಂಕುಗಳಲ್ಲಿ ಹಣ ಇಲ್ಲ. ಒಂದು ವೇಳೆ ಇದ್ದರೂ ಇಂತಿಷ್ಟೇ ಹಣವನ್ನು ಪಡೆಯಬೇಕು ಎನ್ನುವ ನಿಯಮ ತಾಲಿಬಾನಿಗಳದ್ದು. ಪ್ರತಿಯೊಬ್ಬರೂ ಬ್ಯಾಂಕ್ ನಲ್ಲಿ 17,000 ರೂ. ಪಾತ್ರ ಹಣ (ಆಫ್ಘಾನಿಸ್ತಾನದ ಕರೆನ್ಸಿ ಹೆಸರು) ಡ್ರಾ ಮಾಡಬೇಕು. ಅದರೆ ಭಾರತದಲ್ಲಿ ಇದರ ಮೊತ್ತ 14600 ಮಾತ್ರ. ಇದಕ್ಕೂ ಗಂಟೆಗಟ್ಟಲೆ ನಿಂತರೂ ಹಣ ಸಿಗುವ ಗ್ಯಾರೆಂಟಿ ಇಲ್ಲ. ಹೀಗಾಗಿ ಖಾತೆಯಲ್ಲಿ ಹಣವಿದ್ದರೂ ನೌಕರ ಕೈಗೆ ಹಣ ಸಿಗದೆ ಬ್ಯಾಂಕುಗಳ ಮುಂದೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ :

ಕಾಬೂಲ್ ನಲ್ಲಿ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ವಿದೇಶಿ ನೆರವಿನಿಂದ ನಡೆಯುತ್ತಿದ್ದ ಆಸ್ಪತ್ರೆಗಳು ಅಳಿವಿನ ಅಂಚಿನಲ್ಲಿವೆ. ವಿದೇಶದಿಂದ ಬರುತ್ತಿದ್ದ ಆಹಾರ, ಹಣ, ಔಷಧಿ ಎಲ್ಲವೂ ಬಂದ್ ಆಗಿದ್ದು ಆಸ್ಪತ್ರೆಗಳು ಮುಚ್ಚುವ ಸ್ಥಿತಿಗೆ ಬಂದೊದಗಿವೆ. ಮುಂದಿನ ದಿನಗಳಲ್ಲಿ ವಿದೇಶದಿಂದ ಹಣ ಬರದೇ ಇದ್ದರೆ 31 ಪ್ರಾಂತ್ಯಗಳಲ್ಲಿ 31 ಆಸ್ಪತ್ರೆಗೆ ಬೀಗ ಬೀಳುವ ಸಾಧ್ಯತೆ ಇದೆ.

Unicef expresses concern over malnourished Afghan children | Health News | Zee News

ಕಾಬೂಲ್ ನ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಅಪೌಷ್ಠಿಕ ಮಕ್ಕಳ ಅರ್ತನಾದ ಕೇಳಿಬರುತ್ತಿದ್ದು ದಿನಕ್ಕೆ 1300 ರೋಗಿಗಳು ದಾಖಲಾಗುತ್ತಿದ್ದಾರೆ. ಒಂದು ಬೆಡ್  ನಲ್ಲಿ 2 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಒಂದೊಳ್ಳೆ ಆಕ್ಸಿಜನ್ ವ್ಯವಸ್ಥೆ ಇಲ್ಲ. ದಿನಕಳೆದಂತೆ ಔಷಧಿಗಳು ಕೂಡ ಖಾಲಿ ಆಗುತ್ತಿವೆ. ಮಾತ್ರವಲ್ಲದೇ ಚಳಿಗಾಲದಲ್ಲಿ ನಿಮೋನಿಯ ಹೆಚ್ಚಾಗುವ ಸಾಧ್ಯತೆ ಇದ್ದು ಮಕ್ಕಳ ಆರೋಗ್ಯದಲ್ಲಿ ಭಾರೀ ಪರಿಣಾಮ ಬೀಳುವ ಸಾಧ್ಯತೆ ಇದೆ. ಹೀಗಾಗಿ ಅಮೇರಿಕಾ ಹಣಕಾಸಿನ ನೆರವು ನೀಡದೇ ಹೋದಲ್ಲಿ ಮಕ್ಕಳು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ತಾಲಿಬಾನ್ ಗೆ ಅಮೇರಿಕಾ ಪೆಟ್ಟು :

ಇನ್ನೂ ಅಮೇರಿಕಾ ಸೇನೆ ಆಫ್ಘಾನ್ ನಿಂದ ಕಾಲ್ಕಿತ್ತುತ್ತಿದ್ದಂತೆ ತಾಲಿಬಾಣನಿಗಳು ಕಾಬೂಲ್ ನನ್ನು ವಶಕ್ಕೆ ಪಡೆದು ಹಣಕಾಸಿನ ವ್ಯವಹಾರಗಳನ್ನೆಲ್ಲ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಬ್ಯಾಂಕುಗಳಲ್ಲಿ ಯಾವುದೇ ವ್ಯವಹಾರಗಳು ನಡೆಯುತ್ತಿಲ್ಲ. ಬ್ಯಾಂಕುಗಳಿಗೆ ವಿದೇಶಗಳಿಂದ ಸಾಲ ಕೂಡ ನೀಡಲಾಗುತ್ತಿಲ್ಲ. ಈ ಮಧ್ಯೆ ಆಫ್ಘಾನಿಸ್ತಾನಕ್ಕೆ ಬಹುತೇಕ ಹಣದ ಸಹಾಯ ಮಾಡುತ್ತಿದ್ದ ವಿಶ್ವದ ದೊಡ್ಡಣ್ಣ ಅಮೇರಿಕಾ ಕೂಡ ತಾಲಿಬಾನಿಗಳಿಗೆ ಭಾರೀ ಪೆಟ್ಟು ಕೊಟ್ಟಿದೆ.

ತಾಲಿಬಾನ್ ಗೆ ಕೈತಪ್ಪಿದ ವಿಶ್ವಬ್ಯಾಂಕ್ ಹಣಕಾಸು ನೆರವು!

2002 ರಿಂದ 5.3 ಬಿಲಿಯನ್ ಡಾಲರ್ ಹಣವನ್ನು ಅಫ್ಘಾನಿಸ್ತಾನಕ್ಕೆ ನೀಡಿದ್ದ ವಿಶ್ವಬ್ಯಾಂಕ್ ಇದೀಗ ದೇಶ ತಾಲಿಬಾನಿಗಳ ಹಿಡಿತಕ್ಕೆ ಸಿಲುಕುತ್ತಿದ್ದಂತೆಯೇ ಎಲ್ಲಾ ಬಗೆಯ ಹಣಕಾಸು ನೆರವು ಸ್ಥಗಿತಗೊಳಿಸಿದೆ. ಕಳೆದ ವಾರವಷ್ಟೇ ಅಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ (International Monetary Fund- IMF) ನಿರ್ಧಾರ ಮಾಡಿತ್ತು. ಆಫ್ಘನ್‌ಗೆ 650 ಮಿಲಿಯನ್ ಡಾಲರ್ ಹಣ ನೀಡಲು ಈ ಹಿಂದೆ ಅನುಮೋದನೆ ಕೊಟ್ಟಿದ್ದ ಐಎಂಎಫ್ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು. ಹಾಗಾಗಿ ಆಗಸ್ಟ್ 23ರಂದು ಅಫ್ಘಾನಿಸ್ತಾನಕ್ಕೆ ಬರಬೇಕಿದ್ದ 340 ಮಿಲಿಯನ್ ಡಾಲರ್ ಕೈ ತಪ್ಪಿ ಹೋಗಿತ್ತು. ಇದೀಗ ವಿಶ್ವ ಬ್ಯಾಂಕ್​ ಕೂಡಾ ಹಣ ನೀಡದಿರಲು ನಿರ್ಧರಿಸಿರುವುದರಿಂದ ಸಂಕಷ್ಟ ಹೆಚ್ಚಲಿದೆ.

ಆಫ್ಘನ್‌ನಲ್ಲಿರುವ ತಾಲಿಬಾನಿಗಳಿಗೆ (Taliban) ಹಣ ಸಿಗದೆ ಕಂಗಾಲಾಗಿದ್ದಾರೆ. ದಿ ಅಪ್ಘಾನಿಸ್ತಾನ ಬ್ಯಾಂಕ್‌ನ ಹಣವನ್ನು ಅಮೆರಿಕ ಜಪ್ತಿ ಮಾಡಿದೆ. ಹೀಗಾಗಿ ಹಣ ಸಿಗದೆ ತಾಲಿಬಾನ್ ಉಗ್ರರು ಕಂಗಾಲಾಗಿದ್ದಾರೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಭಾರತ ಸೇರಿದಂತೆ ಪ್ರಮುಖ ದೇಶಗಳಿಂದ ತಾಲಿಬಾನಿಗಳಿಗೆ ಹಣ ಸಿಗುತ್ತಿಲ್ಲ. ಪಾಕ್ ಈಗಾಗಲೇ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಹೀಗಾಗಿ ಸದ್ಯ ಹಣ ಸಿಗದೆ ತಾಲಿಬಾನಿಗಳು ಕಂಗಾಲಾಗಿದ್ದಾರೆ.

ಇದೇ ರೀತಿ ಆರ್ಥಿಕ ಸಂಕಷ್ಟ ಆಫ್ಘಾನಿಸ್ತಾನದಲ್ಲಿ ಮುಂದುವರೆದರೆ ನಿರಾಶ್ರಿತರು, ಮಕ್ಕಳು, ಜನ ಸಾಮಾನ್ಯ ಬೀದಿ ಬೀದಿಗಳಲ್ಲಿ ಊಟವಿಲ್ಲದೇ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.

 

Published by: Sunita Bhandari

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights