ನಾವು ಗಾಂಧೀಜಿಯನ್ನೆ ಬಿಟ್ಟಿಲ್ಲ, ನೀವು ಯಾವ ಲೆಕ್ಕ?; ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಪ್ರಚೋದನಾಕಾರಿ ಹೇಳಿಕೆ!
ನಾವು ಗಾಂಧೀಜಿಯನ್ನೆ ಬಿಟ್ಟಿಲ್ಲ ಸ್ವಾಮಿ, ಇನ್ನು ನೀವು ಯಾವ ಲೆಕ್ಕ ನಮಗೆ? ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಗಾಂಧೀಜಿಯನ್ನೇ ಹತ್ಯೆ ಮಾಡಿದವರಿಗೆ ನಿಮ್ಮ ವಿಚಾರದಲ್ಲಿ ಆಲೋಚನೆ ಮಾಡಲ್ಲಿಕ್ಕೆ ಸಾಧ್ಯವಿಲ್ಲ ಎನ್ನುತ್ತೀರಾ? ಬಸವರಾಜ ಬೊಮ್ಮಾಯಿಯವರೆ, ಯಡಿಯೂರಪ್ಪನವರೆ, ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರೆ ನೆನಪಿಟ್ಟುಕೊಳ್ಳಿ ಬಹಳ ಕಠಿಣ ಆದೀತು ನಿಮಗೆ ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಮುಂದುವರಿದು ಮೊಟ್ಟೆ ಕದ್ದಾಯಿತು. ಮೊಟ್ಟೆಯಲ್ಲಿ ದುಡ್ಡು ಮಾಡಿದವರು ಈಗ ದೇವಸ್ಥಾನಗಳಲ್ಲಿ ದುಡ್ಡು ಮಾಡಲು ಯಾಕೆ ಹೋಗುತ್ತಿದ್ದೀರಿ? ನಿಮ್ಮ ಮೇಲೆ ಕೇಸು ದಾಖಲೆ ಮಾಡಿದ್ದೇವೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ಸಲ ಚಿತ್ರದುರ್ಗದಲ್ಲಿ ಬಿಜೆಪಿ ಸರ್ಕಾರದಿಂದ ದೇವಸ್ಥಾನದ ಮೇಲಿನ ದಾಳಿ ಖಂಡಿಸಿ ಹೋರಾಟ ಮಾಡಿದ್ದೆವು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದು ದೇವಸ್ಥಾನ ನೆಲಸಮ ಆಯ್ತು. ಈಗ ಮೈಸೂರಿನಲ್ಲಿ ಪುರಾತನ ದೇವಸ್ಥಾನ ನೆಲಸಮ ಆಯ್ತು. ಅಲ್ಲದೆ ಇನ್ನೂ ಅನೇಕ ಧಾರ್ಮಿಕ ಕೇಂದ್ರಗಳ ಪಟ್ಟಿ ಕೊಟ್ಟಿದೆ. ಆದರೆ ಎಲ್ಲಾದರೂ ಇತಿಹಾಸದಲ್ಲಿ ಒಂದೇ ಒಂದು ಮಸೀದಿ, ಚರ್ಚ್ ಒಡೆದದ್ದನ್ನು ತೋರಿಸಲಿ. ಅದ್ಯಾಕೆ ದೇವಸ್ಥಾನಗಳೇ ಮಾತ್ರ ಟಾರ್ಗೆಟ್ ಆಗುತ್ತಿವೆ? ಎಂದು ಧರ್ಮೇಂದ್ರ ಹೇಳಿದ್ದಾರೆ.
ಇನ್ನು ದೇಗುಲ ಧ್ವಂಸ ವಿರೋಧಿಸಿ ಬಿಜೆಪಿ, ಸಂಘಪರಿವಾರ ಮತ್ತು ಸಹಪರಿವಾರಗಳಾದ ಹಿಂದೂ ಜಾಗರಣ ವೇದಿಕೆ, ಭಜರಂಗದಳ, ವಿಹಿಂಪ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿವೆ. ಸ್ವಾಮಿ ನಾನು ಕೇಳುತ್ತೇನೆ ರಾಜ್ಯದಲ್ಲಿ ಯಾರ ಸರ್ಕಾರ ಇದೆ? ಒಂದು ವೇಳೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದಿದ್ರೆ ಪರಿಸ್ಥಿತಿ ಏನಾಗ್ತಿತ್ತು..? ಕರ್ನಾಟಕ ಹೀಗೆ ಇರುತ್ತಿತ್ತೆ? ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವತ್ತು ಯಾವುದೋ ಒಂದು ವಿಚಾರಕ್ಕೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಜಿಲ್ಲೆಗೆ ಬೆಂಕಿ ಇಡ್ತೇವೆ, ಜಿಲ್ಲೆ ಹೊತ್ತಿ ಉರಿಯುತ್ತೆ ಎಂಬ ಹೇಳಿಕೆ ನೀಡಿದ್ರು. ಇದರರ್ಥ ಏನು? ಇವತ್ತು ಕಾಂಗ್ರೆಸ್ ಆಡಳಿತದಲ್ಲಿ ಇದ್ದಿದ್ರೆ ಮಾತ್ರ ಇವರು ಬೆಂಕಿ ಹಾಕ್ತಿದ್ರು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಸೇವಾ ತೆರಿಗೆ ಹಂಚಿಕೆ ಮಾಡದ ಕೇಂದ್ರ; ಹಣಕಾಸು ಆಯೋಗದ ಶಿಫಾರಸ್ಸಿಗೂ ಕಿಮ್ಮತ್ತಿಲ್ಲ!