ಗೋವಾದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಶೇ.80 ರಷ್ಟು ಉದ್ಯೋಗ ಸ್ಥಳೀಯರಿಗೆ: ಕೇಜ್ರಿವಾಲ್‌

2022ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಖಾಸಗಿ ವಲಯ ಸೇರಿದಂತೆ ಎಲ್ಲಾ ಉದ್ಯೋಗಗಳಲ್ಲಿಯೂ ಸ್ಥಳೀಯರಿಗೆ 80% ಉದ್ಯೋಗ ಮೀಸಲಿಡುವುದಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಗೋವಾದ ಮಾಪುಸಾ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಸಿಎಂ ಕೇಜ್ರಿವಾಲ್, ಗೋವಾದಲ್ಲಿ ಪ್ರತಿ ಕುಟುಂಬದ ಕನಿಷ್ಠ ಒಬ್ಬ ನಿರುದ್ಯೋಗಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಉದ್ಯೋಗವಿಲ್ಲದ ಯುವಕರಿಗೆ ಉದ್ಯೋಗ ದೊರೆಯುವವರೆಗೆ ಮಾಸಿಕ 3,000 ರೂ. ನಿರುದ್ಯೋಗ ಭತ್ಯ ನೀಡಲಾಗುವುದು. ಅಲ್ಲದೆ, ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಉದ್ಯಮಗಳನ್ನು ಅವಲಂಬಿಸಿರುವ ಕಾರ್ಮಿಕ ಕುಟುಂಬಗಳಿಗೆ ಮಾಸಿಕ 5,000 ರೂ ಸಂಭಾವನೆ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಪ್ರಸ್ತುತ ಬಿಜೆಪಿ ಆಡಳಿತದಲ್ಲಿರುವ ಗೋವಾದಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಕಳೆದ ಎರಡು ತಿಂಗಳಲ್ಲಿ ಕೇಜ್ರಿವಾಲ್ ಅವರು ಗೋವಾಗೆ ಎರಡು ಭಾರಿ ಭೇಟಿ ನೀಡಿದ್ದಾರೆ. ಕಳೆದ ಭೇಟಿಯಲ್ಲಿ ಅವರು, ಗೋವಾದಲ್ಲಿ ಚುನಾವಣೆಯ ನಂತರ ಸರ್ಕಾರವನ್ನು ರಚಿಸಿದರೆ ಜನರಿಗೆ ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದರು.

ಇದನ್ನೂ ಓದಿ: ಆಂಧ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಗನ್‌‌ ನಾಯಕತ್ವದ ವೈಎಸ್‌‌ಆರ್‌ ಅಚ್ಚರಿ ಗೆಲುವು!

ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಖಾಸಗಿ ವಲಯ ಸೇರಿದಂತೆ ಶೇ.80 ರಷ್ಟು ಉದ್ಯೋಗಗಳನ್ನು ಗೋವಾ ಯುವಕರಿಗೆ ಮೀಸಲಿಡಲಾಗುವುದು. ಖಾಸಗಿ ಕೈಗಾರಿಕೆಗಳಿಗೆ ಇದನ್ನು ಕಡ್ಡಾಯಗೊಳಿಸುವ ಕಾನೂನನ್ನು ನಾವು ಜಾರಿಗೊಳಿಸುತ್ತೇವೆ” ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಿಷೇಧದ ನಂತರ ಗಣಿಗಾರಿಕೆ ಸ್ಥಗಿತಗೊಂಡಿತು. ಲಾಕ್‌ಡೌನ್ ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಹೀಗಾಗಿ”ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಉದ್ಯಮಗಳನ್ನು ಅವಲಂಬಿಸಿರುವ ಕುಟುಂಬಗಳು ಸಾಕಷ್ಟು ಪೆಟ್ಟು ತಿಂದಿವೆ. ಈ ವಲಯಗಳನ್ನು ಪುನರಾರಂಭಿಸುವವರೆಗೆ ಆ ಕುಟುಂಬಗಳಿಗೆ ಮಾಸಿಕ 5,000 ರೂ. ಸಂಭಾವನೆ ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ.

“ದೆಹಲಿಯಂತೆಯೇ ಗೋವಾದಲ್ಲಿ ಸ್ಕಿಲ್ಸ್ ಯೂನಿವರ್ಸಿಟಿಯನ್ನು ಸ್ಥಾಪಿಸಲಾಗುವುದು. ಅಲ್ಲಿ ಯುವಜನರ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲಾಗುವುದು ಮತ್ತು ಉದ್ಯೋಗಕ್ಕೆ ಸಿದ್ಧಪಡಿಸಲಾಗುವುದು” ಎಂದು ಕೇಜ್ರಿವಾಲ್ ಹೇಳಿದ್ದಾರೆ.

“ಶಾಸಕರು ಅಥವಾ ರಾಜಕಾರಣಿಗಳ ಪ್ರಭಾವದಿಂದ ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಲಾಗುವುದು. ಸರ್ಕಾರಿ ವಲಯದಲ್ಲಿ ಉದ್ಯೋಗ ನೇಮಕಾತಿ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿ ಮಾಡಲಾಗುವುದು” ಎಂದು ಅವರು ಹೇಳಿದ್ದಾರೆ.

2017 ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಎಎಪಿ ಶೂನ್ಯ ಸಾಧನೆ ಮಾಡಿತ್ತು. ಗೋವಾದ 40 ಸದಸ್ಯರ ಸದನದಲ್ಲಿ ಕಾಂಗ್ರೆಸ್ ಅತಿ ಹೆಚ್ಚು 17 ಸ್ಥಾನಗಳನ್ನು ಗೆದ್ದಿತ್ತು, ಬಿಜೆಪಿ 13 ಕ್ಕೆ ಸೀಮಿತಗೊಳಿಸಿತು. ಆದರೂ, ಅಚ್ಚರಿ ಎಂಬಂತೆ, ಬಿಜೆಪಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತು, ಮನೋಹರ್ ಪರಿಕ್ಕರ್ ಅವರ ನೇತೃತ್ವದಲ್ಲಿ ಅಧಿಕಾರ ರಚಿಸಿತು.

ಇದನ್ನೂ ಓದಿ: ಅಧಿಕಾರಿಗಳು ನಮ್ಮ ಚಪ್ಪಲಿ ಎತ್ತಿಕೊಳ್ಳಲು ಮಾತ್ರ ಇರುವುದು: ಬಿಜೆಪಿ ನಾಯಕಿ ವಿವಾದಾತ್ಮಕ ಹೇಳಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights