ಉತ್ತರ ಪ್ರದೇಶ ಚುನಾವಣೆ: ನಿರುದ್ಯೋಗ ವಿರೋಧಿ ವಿದ್ಯಾರ್ಥಿ ಆಂದೋಲನ ಆರಂಭ!

2022ರ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಸಮಯದಲ್ಲಿ ವಿಷಯಾಧಾರಿತ ಚರ್ಚೆಯನ್ನು ಮುನ್ನಲೆಗೆ ತರುವ ನಿಟ್ಟಿನಲ್ಲಿ ನಿರುದ್ಯೋಗ ವಿರೋಧಿ ವಿದ್ಯಾರ್ಥಿ ಆಂದೋಲನ ಆರಂಭವಾಗಿದೆ.

ಖಾಲಿ ಇರುವ 25 ಲಕ್ಷ ಉದ್ಯೋಗಗಳನ್ನು ಯೋಗಿ ಆದಿತ್ಯನಾಥ ಸರ್ಕಾರ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ನಿರುದ್ಯೋಗ ವಿರೋಧಿ ವಿದ್ಯಾರ್ಥಿ ಆಂದೋಲನ ಆರಂಭವಾಗಿದೆ. ‘ಛಾತ್ರ್ ಯುವ ರೋಜ್‌‌ಗಾರ್‌ ಅಧಿಕಾರ್‌ ಮೋರ್ಚಾ’ ಸಂಘಟನೆಯ ನೇತೃತ್ವದಲ್ಲಿ ಚಳವಳಿ ನಡೆಯಲಿದೆ.

ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿ ಸರ್ಕಾರವನ್ನು ಎಚ್ಚರಿಸಲು ಪ್ರಭಾವ ಬೀರಲು ಸಂಘಟಕರು ಮುಂದಾಗಿದ್ದಾರೆ. ಲಕ್ನೋದಲ್ಲಿ ಸೆ. 24ರಂದು ‘ರೋಜ್‌ಗಾರ್‌ ಅಧಿಕಾರ್‌ ಸಮ್ಮೇಳನ’ ನಡೆದಿದೆ. ಈ ಸಮ್ಮೇಳನದಲ್ಲಿ ವಿರೋಧ ಪಕ್ಷಗಳ ಹಲವು ನಾಯಕರೂ ಪಾಲ್ಗೊಂಡಿದ್ದು, “ಘನತೆಯ ಜೊತೆಗೆ ಉದ್ಯೋಗ”, ಪ್ರತಿಯೊಬ್ಬ ಯುವಜನರಿಗೂ ಶಿಕ್ಷಣವೆಂಬುದು “ಮೂಲಭೂತ ಹಕ್ಕು” ಎಂದು ಬಿಜೆಪಿ ನೇತೃತ್ವದ ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಇಬ್ಬರು ಬಿಜೆಪಿ ನಾಯಕರ ನಡುವೆ ವಾಕ್ಸಮರ; ವಿಡಿಯೋಗಳು ವೈರಲ್

ಬಿಹಾರದ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದ ನಾಯಕ ಮನೋಜ್‌ ಮನ್ಜಿಲ್‌, ಸಾಮಾಜಿಕ ಚಳವಳಿಗಳನ್ನು ದಮನ ಮಾಡುವ ಉತ್ತರ ಪ್ರದೇಶದ ಸರ್ಕಾರದ ಪ್ರವೃತ್ತಿಯನ್ನು ಖಂಡಿಸಿದ್ದಾರೆ. “ದೇಶದ ಯುವಜನರ ನಿರುದ್ಯೋಗಕ್ಕೆ ಶೇ. 10ರಷ್ಟು ಕೊಡುಗೆ ಉತ್ತರ ಪ್ರದೇಶದ್ದಾಗಿದೆ. ಲಾಕ್‌ಡೌನ್‌ ಜಾರಿಯಿಂದಾಗಿ ದೊಡ್ಡ ಮಟ್ಟದ ಉದ್ಯೋಗ ನಷ್ಟ ಉಂಟಾಗಿದೆ” ಎಂದಿದ್ದಾರೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ರಾಷ್ಟ್ರೀಯ ಸಂಯೋಜಕಿ ಸದಫ್‌ ಜಫಾರ್‌ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದು, “ಯುವಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು” ಎಂದಿದ್ದಾರೆ.

UP: Youth Organisations Protest Against Unemployment, Demand CM Fill Up Vacant Posts

ಮುಂದುವರಿದು, “ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಮಾರಿ ಹಣವನ್ನು ಹೊಂದಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಸೆಂಟ್ರಲ್‌ ವಿಸ್ತಾ ಥರದ ಅಪ್ರಯೋಜಕ ಯೋಜನೆಗಳಿಗೆ ಹಣವನ್ನು ವಿನಿಯೋಗಿಸುತ್ತಿದೆ” ಎಂದು ಕುಟುಕಿದ್ದಾರೆ.ಆಮ್‌ ಆದ್ಮಿ ಪಾರ್ಟಿಯ ಪ್ರೊ.ಡಿ.ಎನ್‌.ಎಸ್‌.ಯಾದವ್‌ ಅವರು, ಪ್ರಜೆಗಳ ಮೂಲಭೂತ ಹಕ್ಕುಗಳ ಕುರಿತು ಬೆಳಕು ಚೆಲ್ಲಿದ್ದಾರೆ. “ಜನರಿಂದ ಆಯ್ಕೆಯಾದ ಸರ್ಕಾರವನ್ನು ನಿರುದ್ಯೋಗದ ಕುರಿತು ಪ್ರಶ್ನಿಸುವುದು ದೇಶದ ಪ್ರತಿಯೊಬ್ಬ ಯುವಜನರ ಕರ್ತವ್ಯ” ಎಂದಿದ್ದಾರೆ. “ನಿರುದ್ಯೋಗ ಕುರಿತ ಅಂಕಿ-ಅಂಶಗಳನ್ನು ಸರ್ಕಾರ ಮುಚ್ಚಿಡುತ್ತಿದೆ. ಉದ್ಯೋಗ ಸರ್ವೇ ನಡೆಸುವುದನ್ನು ಕಾರ್ಮಿಕ ಸಚಿವಾಲಯ ನಿಲ್ಲಿಸಿದೆ. ದೇಶದಲ್ಲಿ ಉದ್ಯೋಗನಾಶದ ಕುರಿತು ಕುರುಹುಗಳನ್ನು ನಾಶಪಡಿಸಲು ಸರ್ಕಾರ ಮುಂದಾಗಿದೆ” ಎಂದು ಕಟುವಾಗಿ ಟೀಕಿಸಿದ್ದಾರೆ.

ರಾಷ್ಟ್ರೀಯ ಲೋಕ ದಳ ನಾಯಕರಾದ ಅಂಬುಜ್ ಪಟೇಲ್‌ ಮಾತನಾಡಿ, “ಹಿಂದೂ, ಮುಸ್ಲಿಂ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ನಿರುದ್ಯೋಗ ವಿರೋಧಿ ಚಳವಳಿಯ ದಿಕ್ಕು ಬದಲಿಸಲು ಬಿಜೆಪಿ ಯತ್ನಿಸುತ್ತಿದೆ. ಯುವಜನರು ಯಾವುದೇ ಧಾರ್ಮಿಕ ಹಾಗೂ ಜಾತಿ ಸಂಬಂಧಿತ ವಿಷಯಗಳಲ್ಲಿ ಭಾಗಿಯಾಗಬಾರದು. ಉದ್ಯೋಗ ಹಾಗೂ ಶಿಕ್ಷಣ ವಿದ್ಯಾರ್ಥಿಗಳ ಆದ್ಯತೆಯಾಗಬೇಕು” ಎಂದು ಎಚ್ಚರಿಸಿದ್ದಾರೆ.

ಪ್ರಸಿದ್ಧ ವಿಮರ್ಶಕ ವೀರೇಂದ್ರ ಯಾದವ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು, “ನಿರುದ್ಯೋಗ ವಿರುದ್ಧದ ಚಳವಳಿ ದೇಶವನ್ನು ಕಾಪಾಡುವ ಹೋರಾಟವಾಗಿದೆ” ಎಂದು ಬಣ್ಣಿಸಿದ್ದಾರೆ.

ಮಾಜಿ ಐಎಎಸ್‌ ಅಧಿಕಾರಿ ಸೂರ್ಯ ಪ್ರತಾಪ್‌ ಮಾತನಾಡಿ, “ಈ ಚಳವಳಿ ಸರ್ಕಾರವನ್ನು ಬದಲಿಸುವುದಕ್ಕೆ ಸಂಬಂಧಿಸಿದ್ದಲ್ಲ. ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ್ದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ವರದಿ ಕೃಪೆ: ದಿ ವೈರ್‌

ಇದನ್ನೂ ಓದಿ: ಬರ್ತಡೇ ಪಾರ್ಟಿಗೆ ಕರೆದು ಮಹಿಳಾ ಪೇದೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights