ಕೊರೊನಾ ಬಳಿಕ ಡೆಂಗ್ಯೂ ಹಾವಳಿ : ದೆಹಲಿಯಲ್ಲಿ 273 ಪ್ರಕರಣಗಳು ಪತ್ತೆ!

ದೇಶವನ್ನ ಬೆಂಬಿಡದೆ ಕಾಡಿದ ಕೊರೊನಾ ಕಾರ್ಮೋಡದಿಂದ ಬೆಳಕು ಆವರಿಸುತ್ತಿದ್ದಂತೆ ಮತ್ತೊಂದು ಆತಂಕ ಹೆಚ್ಚಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದ್ದು 273 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ.

ಕಳೆದ ಒಂದು ವಾರದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 60 ಕ್ಕೂ ಹೆಚ್ಚು ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ಒಟ್ಟು 270 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು ಸೋಮವಾರ ಬಿಡುಗಡೆ ಮಾಡಿದ ನಾಗರಿಕ ವರದಿಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ 1ರಿಂದ 25 ರಲ್ಲಿ 149 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಮಾತ್ರವಲ್ಲದೆ ಸೆಪ್ಟೆಂಬರ್ 1ರಿಂದ 25 ರಲ್ಲಿ 102 ಮಲೇರಿಯಾ ಮತ್ತು 52 ಚಿಕೂನ್ ಗುನ್ಯಾ ಪ್ರಕರಣಗಳು ದಾಖಲಾಗಿವೆ.

2019 ರ ಜನವರಿ 1-ಸೆಪ್ಟೆಂಬರ್ 25 ರ ಅವಧಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 282 ರಷ್ಟಿತ್ತು. ನಂತರ 2021ರ ಜನವರಿ 1-ಸೆಪ್ಟೆಂಬರ್ 25 ರ ಅವಧಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 273 ರಷ್ಟಿದೆ.

ಕಳೆದ ವರ್ಷ 188 ಡೆಂಗ್ಯೂ ಪ್ರಕರಣಗಳು ಇಡೀ ಸೆಪ್ಟೆಂಬರ್ ತಿಂಗಳಲ್ಲಿ ವರದಿಯಾಗಿವೆ ಮತ್ತು ಅದಕ್ಕಿಂತ ಹಿಂದಿನ ವರ್ಷ 190 ಪ್ರಕರಣಗಳು ಸೆಪ್ಟೆಂಬರ್ ತಿಂಗಳ ಒಂದರಲ್ಲೇ ವರದಿಯಾಗಿವೆ.

ಹಳೆಯ ಅಂಕಿಅಂಶಗಳನ್ನು ನೋಡುವುದಾದರೆ 374 (2018), 1103 (2017), 1,362 (2016) ಮತ್ತು 6,775 (2015) ಇತ್ತೇಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್  ಹಂಚಿಕೊಂಡಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಅನುಗುಣವಾದ ಸಂಖ್ಯೆಗೆ ಹೋಲಿಸಿದರೆ ಈ ವರ್ಷ ನಗರವು ಸೆಪ್ಟೆಂಬರ್‌ನಲ್ಲಿ ಅತಿ ಕಡಿಮೆ ಡೆಂಗ್ಯೂ ಪ್ರಕರಣಗಳನ್ನು ದಾಖಲಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಆದಾಗ್ಯೂ, ಇಲ್ಲಿಯವರೆಗೆ ನಗರದಲ್ಲಿ ಡೆಂಗೆಯಿಂದ ಯಾವುದೇ ಸಾವುಗಳು ವರದಿಯಾಗಿಲ್ಲ.

ಡೆಂಗ್ಯೂ ಸೊಳ್ಳೆ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಇದು ಕೊಳಕು ನೀರಿನಲ್ಲಿಯೂ ಬೆಳೆಯುತ್ತದೆ. ಹೆಚ್ಚಾಗಿ ಮಲೇರಿಯಾ, ಡೆಂಗ್ಯೂ ಮತ್ತು ಚಿಕುನ್‌ಗುನ್ಯಾಗಳು ಅಧಿಕ ಜ್ವರದಿಂದ ಕೂಡಿರುತ್ತದೆ. ಆದ್ದರಿಂದ ಜನರು ಕೋವಿಡ್-19 ಗೆ ತುತ್ತಾಗಿದ್ದಾರೆ ಎಂದು ಅನುಮಾನಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಬಗ್ಗೆ ಅರಿವು ಮೂಡಿಸಿ ಹರಡುವ ರೋಗಗಳನ್ನು ತಡೆಗಟ್ಟಲು ದೆಹಲಿಯ ನಾಗರಿಕ ಸಂಸ್ಥೆಗಳು ಕ್ರಮಗಳನ್ನು ತೀವ್ರಗೊಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಇಲ್ಲಿಯವರೆಗೆ ವರದಿಯಾಗಿರುವ ಡೆಂಗ್ಯೂ ಪ್ರಕರಣಗಳು ನಿಯಂತ್ರಣದಲ್ಲಿದೆ. ದೆಹಲಿ ಸರ್ಕಾರ ಈ ಬಗ್ಗೆ ಎಚ್ಚರವಾಗಿದ್ದು ವೆಕ್ಟರ್-ಹರಡುವ ರೋಗದಿಂದ ಉದ್ಭವಿಸುವ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಕಲ ಸಿದ್ಧವಾಗಿದೆ ಎಂದು ಜೈನ್ ಹೇಳಿದ್ದಾರೆ.

ರಾಜಕೀಯ ಬೆಳವಣಿಗೆ :-

ದೆಹಲಿ ಆರೋಗ್ಯ ಸಚಿವರು ’10 ಹಫ್ತೆ, 10 ಬಾಜೆ, 10 ಮಿನಟ್ ‘ ಎಂಬಾ ಡೆಂಗ್ಯೂ ವಿರೋಧಿ ಅಭಿಯಾನವನ್ನು ಕಳೆದ ಕೆಲವು ವಾರಗಳಿಂದ ನಡೆಸುತ್ತಿದ್ದಾರೆ. ಇದನ್ನು ಮತ್ತಷ್ಟು ತೀವ್ರಗೊಳಿಸಲು ಚಿಂತಿಸಲಾಗುತ್ತಿದೆ.

ಮಾತ್ರವಲ್ಲದೆ ಉತ್ತರ ದೆಹಲಿ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಇತ್ತೀಚೆಗೆ, ‘ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಕ್ಟೋಬರ್ 2-7 ರಿಂದ ವೆಕ್ಟರ್-ಹರಡುವ ರೋಗಗಳನ್ನು ನಿಯಂತ್ರಣದಲ್ಲಿಡಲು ಒಂದು ವಾರದವರೆಗೆ ತೀವ್ರ ಅಭಿಯಾನವನ್ನು ನಡೆಸುತ್ತದೆ’ ಎಂದು ಹೇಳಿದ್ದಾರೆ.

ಪ್ರಚಾರದ ರಾಜಕೀಯ :-

ದಕ್ಷಿಣ ದೆಹಲಿ ಮೇಯರ್ ಮುಖೇಶ್ ಸೂರ್ಯನ್ ಇತ್ತೀಚೆಗೆ ದೆಹಲಿ ಸರ್ಕಾರ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಟಕ್ಕೆ ಬಂದಾಗ “ಪ್ರಚಾರದ ರಾಜಕೀಯ” ಆಡುತ್ತಿದೆ ಎಂದು ಆರೋಪಿಸಿದ್ದಾರೆ.

ಜೊತೆಗೆ ಪಕ್ಷದ ಆಡಳಿತದಲ್ಲಿರುವ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ (ಎಸ್‌ಡಿಎಂಸಿ) ಯ ಹಿರಿಯ ಬಿಜೆಪಿ ನಾಯಕ, ”ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನಗರದಲ್ಲಿ ವೆಕ್ಟರ್-ಹರಡುವ ರೋಗಗಳನ್ನು ನಿಯಂತ್ರಿಸುವಲ್ಲಿ “ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.

ಡೆಂಗ್ಯೂ ತಡೆಗೆ ಸಭೆ :-

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಸ್ಥಾಯಿ ಸಮಿತಿ ಅಧ್ಯಕ್ಷ ಜೋಗಿ ರಾಮ್ ಜೈನ್ ಇತ್ತೀಚೆಗೆ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್ ಗುನ್ಯಾ ತಡೆಗಟ್ಟುವಿಕೆ ಕುರಿತು ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಸಭೆಯಲ್ಲಿ NDMC ಅಡಿಯಲ್ಲಿ ಎಲ್ಲಾ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಜೈನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ಇದರಿಂದ ಗರಿಷ್ಠ ನಾಗರಿಕರಿಗೆ ಅರಿವು ಮೂಡಿಸಬಹುದು ಎಂದಿದ್ದಾರೆ.

ಸರ್ಕಾರಿ ಕಟ್ಟಡಗಳು, ಶಾಲೆಗಳು, ಕಚೇರಿಗಳು, ಸಮುದಾಯ ಭವನಗಳು ಮತ್ತು ಔಷಧಾಲಯಗಳ ಆವರಣದಲ್ಲಿ ಸೊಳ್ಳೆ ಲಾರ್ವಾಗಳ ಸಂತಾನೋತ್ಪತ್ತಿಗಾಗಿ ನಿಯಮಿತವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights