ಏಷ್ಯಾದ ಯೆಮೆನ್‌ನ ಕುಖ್ಯಾತ ‘ವೆಲ್ ಆಫ್ ಹೆಲ್’ಗೆ ಪ್ರವೇಶಿಸಿದ ಮೊದಲ ಪರಿಶೋಧನಾ ತಂಡ..!

ಪ್ರಾಚೀನ ಕಾಲದಿಂದಲೂ ವಿಶ್ವದಾದ್ಯಂತ ಇರುವ ಗುಹೆಗಳಿಗೆ ಐತಿಹಾಸಿಕ ಮಹತ್ವವಿದೆ. ಅವುಗಳಲ್ಲಿ ಕೆಲವು ಪ್ರಪಂಚಕ್ಕೆ ರೋಮಾಂಚನಕಾರಿ ಅನುಭವವನ್ನು ನೀಡುತ್ತವೆ. ಕೆಲವು ಗುಹೆಗಳಲ್ಲಿ ಋಷಿ ಮುನಿಗಳು ಕುಳಿತು ಧ್ಯಾನ ಮಾಡುತ್ತಾ ವಾಸವಿರುವುದನ್ನ ಕಾಣಬಹುದು. ಇನ್ನು ಕೆಲ ಗುಹೆಗಳಿಗೆ ಪಾತಾಳಲೋಕದ ಸಂಬಂಧವಿದೆ ಎಂದು ನಂಬಲಾಗುತ್ತದೆ. ಹೀಗೆ ಪಾತಾಳಕ್ಕೆ ಸಂಬಂಧವಿದೆ ಎಂದು ನಂಬಲಾದ ಏಷ್ಯಾದ ಯೆಮೆನ್ ನ ಬೃಹತ್ ಸಿಕ್ ಹೋಲ್ ಯೊಂದಕ್ಕೆ ಸಂಶೋಧನಾ ತಂಡವೊಂದು ಭೇಟಿ ನೀಡಿದೆ.

ಭೂಗತ ಜಗತ್ತಿಗೆ ಪ್ರವೇಶಿಸುವ ಗೇಟ್ವೇ ಅಥವಾ ನರಕದ ಬಾಗಿಲು ಎಂದು ನಂಬುವ ಪಶ್ಚಿಮ ಏಷ್ಯಾದ ಯೆಮೆನ್‌ನ ಕುಖ್ಯಾತ ‘ವೆಲ್ ಆಫ್ ಹೆಲ್’ ಎಂಬ ಬೃಹತ್ ಪಾತಾಳದ ಗುಹೆ ಒಳಗೆ ಸಂಶೋಧನಾ ತಂಡವೊಂದು ಪ್ರವೇಶಿಸಿದೆ. ಇದನ್ನು ನೈಸರ್ಗಿಕ ಸಿಂಕ್ಹೋಲ್ ಅಥವಾ ಅಧಿಕೃತವಾಗಿ ವೆಲ್ ಆಫ್ ಬಾರ್ಹೌಟ್ ಎಂದು ಕರೆಲಯಾಗುತ್ತದೆ. ಇದು 98 ಅಡಿ (30 ಮೀ) ವ್ಯಾಸವನ್ನು ವ್ಯಾಪಿಸಿರುವ ವಿಲಕ್ಷಣವಾದ ವೃತ್ತಾಕಾರದ ಪ್ರವೇಶದ್ವಾರವನ್ನು ಹೊಂದಿದೆ.  ಜೊತೆಗೆ 367 ಅಡಿ (112 ಮೀಟರ್) ಆಳದ ಸಿಂಕ್‌ಹೋಲ್‌ ನ್ನು ಹೊಂದಿದೆ.

ಓಮನ್ ಮೂಲದ ಗುಹೆ ಪರಿಶೋಧಕರು ಯೆಮನ್‌ನಲ್ಲಿನ “ವೆಲ್ ಆಫ್ ಹೆಲ್” ಸಿಂಕ್‌ಹೋಲ್‌ನ ಕೆಳಭಾಗಕ್ಕೆ ಇಳಿದ ಮೊದಲ ವ್ಯಕ್ತಿಗಳಾಗಿದ್ದಾರೆ. ಪೂರ್ವ ಯೆಮೆನ್‌ನ ಅಲ್-ಮಹ್ರಾ ಪ್ರಾಂತ್ಯದ ಮರುಭೂಮಿಯ ಮಧ್ಯದಲ್ಲಿರುವ ಈ ಬೃಹತ್ ಸಿಂಕ್ ಹೋಲ್ ನಿಜಕ್ಕೂ ಭಯಾನಕವಾಗಿದೆ. ಸಾಮಾನ್ಯವಾಗಿ ಈ ಪ್ರದೇಶಕ್ಕೆ ಯಾರೂ ಕೂಡ ಪ್ರವೇಶ ನೀಡುವುದಿಲ್ಲ. ಒಂದು ವೇಳೆ ನೀಡಿದರೂ ಭಯ ಭೀತಿ ಹುಟ್ಟಿಸುವಂತಹ ಶಬ್ದ ಕೇಳಿಬರುತ್ತದೆ. ಸತ್ತ ವಾಸನೇ ಆವರಿಸುತ್ತದೆ. ಒಂದು ವೇಳೆ ಇದರ ಬಳಿ ಪ್ರವೇಶ ಮಾಡಿದರೆ ಒಳಗೆ ಎಳೆದುಕೊಳ್ಳುತ್ತದೆ ಎನ್ನುವ ಅಂಜಿಕೆ ಸ್ಥಳೀಯರಲ್ಲಿದೆ.

ಈ ಹಿಂದೆ ಓಮನ್ ಹವ್ಯಾಸಿ ಗುಹೆ ಪರಿಶೋಧಕರು ಮೊದಲು ಸಿಂಕ್‌ಹೋಲ್‌ಗೆ ಪ್ರವೇಶಿಸಿದ್ದರು. ಆದರೆ ಇಲ್ಲಿಯವರೆಗೆ ಯಾರೂ ಕೂಡ ಈ ಸಿಂಕ್ ಹೋಲ್ ಕೆಳಭಾಗದವರೆಗೂ ಪ್ರವೇಶ ಮಾಡಿಲ್ಲ. ಆದರೆ ಕಳೆದ ವಾರ ಓಮನ್ ಗುಹೆಗಳ ಪರಿಶೋಧನಾ ತಂಡ (ಒಸಿಇಟಿ) 10 ಜನ ಸದಸ್ಯರೊಂದಿಗೆ ಬಾರ್‌ಹೌಟ್‌ನ ಬಾವಿಯನ್ನು ಅನ್ವೇಷಿಸಿದೆ. ಸ್ಥಳೀಯ ಭಯದ ಹೊರತಾಗಿಯೂ ಎಂಟು ಸದಸ್ಯರು ಬಾವಿಯ ಆಳಕ್ಕೆ ಇಳಿದು ಪರಿಶೀಲಿಸಿದ್ದಾರೆ. ಈ ಪರಿಶೋಧಕರು ಗುಹೆಗೆ ಇಳಿಯುವ ವೀಡಿಯೊವನ್ನು ಬಿಬಿಸಿ ಹಂಚಿಕೊಂಡಿದೆ.

Well of Barhout

ಒಸಿಇಟಿ ತಂಡದ ಭಾಗವಾಗಿದ್ದ ಒಮಾನ್‌ನ ಜರ್ಮನ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಭೂವಿಜ್ಞಾನ ಪ್ರಾಧ್ಯಾಪಕ ಮೊಹಮ್ಮದ್ ಅಲ್-ಕಿಂಡಿ ಫ್ರೆಂಚ್, “ಇದು ಹೊಸ ಅದ್ಭುತ ಮತ್ತು ಯೆಮೆನ್ ಇತಿಹಾಸದ ಭಾಗವನ್ನು ಬಹಿರಂಗಪಡಿಸುತ್ತದೆ” ಎಂದು ಹೇಳಿದ್ದಾರೆ.

ಪರಿಶೋಧಕರು ಬೃಹತ್ ಸಿಂಕ್ ಹೋಲ್ ನಲ್ಲಿ ಜಲಪಾತಗಳು, ಹಾವುಗಳು, ಸತ್ತ ಪ್ರಾಣಿಗಳು, ಸ್ಟಾಲಾಗ್ಮಿಟ್ಸ್ ಮತ್ತು ಗುಹೆ ಮುತ್ತುಗಳನ್ನು ಕಂಡುಕೊಂಡಿದ್ದಾರೆ. ಆದರೆ ಆಶ್ಚರ್ಯಕರವಾಗಿ ಅವರು ಯಾವುದೇ ಜಿನಗಳನ್ನು ಅಥವಾ ನರಕದ ಬಾಗಿಲನ್ನು ಕಾಣಲಿಲ್ಲ.

ಸ್ಥಳೀಯ ಪುರಾಣಗಳು :-
ಎಎಫ್‌ಪಿ ಪ್ರಕಾರ, ಬಾರ್ಹೌಟ್ನ ನಿಖರವಾದ ವಯಸ್ಸು ಪ್ರಸ್ತುತ ತಿಳಿದಿಲ್ಲ. ಆದರೆ ಇದು ಲಕ್ಷಾಂತರ ವರ್ಷಗಳಷ್ಟು ಹಳೆಯದು. ಸ್ಥಳೀಯ ಪುರಾಣಗಳು ಈ ಸಿಂಕ್ ಹೋಲ್ ನನ್ನು ಜಿನ್ ಅಥವಾ ಜೀನ್ಗಳಿಗೆ (jinn or genies) ಜೈಲುವಾಸವಾಗಿದೆ ಎನ್ನುತ್ತವೆ. ಹೀಗಾಗಿ ಇದು ಭಯವನ್ನುಂಟು ಮಾಡುತ್ತದೆ. ಸಿಂಕ್ಹೋಲ್ ಬಳಿ ಹೋದರೆ ಒಳಗೆ ಎಳೆದುಕೊಳ್ಳುತ್ತದೆ ಎನ್ನುವ ನಂಬಿಕೆಗಳಿವೆ. ಮಾತ್ರವಲ್ಲದೆ ಈ ಬೃಹತ್ ರಂಧ್ರವು ಭೂಮಿಯನ್ನು ನಾಶಮಾಡುವ ಸಾಮರ್ಥ್ಯವಿರುವ ಸೂಪರ್‌ವಾಲ್ಕಾನೊ ಎಂದು ಹೇಳಲಾಗುತ್ತದೆ. ಆದರೆ ಇದನ್ನು ನಂಬಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದರಿಂದ ಬರುವ ಕೆಟ್ಟ ವಾಸನೆಯಿಂದಾಗಿ ಇದನ್ನು ನರಕದ ಪ್ರವೇಶದ್ವಾರ ಎಂಬ ಕಥೆಗಳನ್ನು ಹೆಣಿಯಲಾಗಿದೆ.

ಆದರೂ ವಾಸ್ತವಾಗಿ ಈ ವೆಲ್ ಆಫ್ ಬಾರ್‌ಹೌಟ್ ಸಾಕಷ್ಟು ವಿಶಿಷ್ಟವಾದ ಸಿಂಕ್‌ಹೋಲ್ ಆಗಿದೆ.

ಸಿಂಕ್‌ಹೋಲ್‌ಗಳು ಹೇಗೆ ರೂಪುಗೊಳ್ಳುತ್ತವೆ?
“ವಿಶ್ವದಾದ್ಯಂತ ವಿವಿಧ ರೀತಿಯ ಸಿಂಕ್‌ಹೋಲ್‌ಗಳಿವೆ. ಅದರಲ್ಲಿ ಕೆಲವು ಅತ್ಯಂತ ಸಾಮಾನ್ಯವಾದವುಗಳಾಗಿದ್ದರೆ ಇನ್ನು ಕೆಲವು ಕುಸಿತವಾಗಿವೆ. ಆದರೆ ಇದು ಅತ್ಯಂತ ವಿಶಿಷ್ಟವಾದ ಸಿಂಕ್ ಹೋಲ್ ಆಗಿದೆ” ಎಂದು ಅನ್ವೇಷಣೆಯಲ್ಲಿ ಭಾಗಿಯಾಗದ ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದ ಸಿಂಕ್‌ಹೋಲ್ ತಜ್ಞ ಫಿಲಿಪ್ ವ್ಯಾನ್ ಬೇನೆನ್ ಹೇಳುತ್ತಾರೆ.

ಸಿಂಕ್ಹೋಲ್ಗಳಿಗೆ ಮುಖ್ಯ ಕಾರಣ ಹವಾ ಮತ್ತು ಸವೆತ. ಭೂಮಿಯ ಮೇಲ್ಮೈಯಿಂದ ಹರಿಯುವ ನೀರಿನ ಮೂಲಕ ಸುಣ್ಣದ ಕಲ್ಲುಗಳಂತಹ ನೀರಿನ್ನು ಹೀರಿಕೊಳ್ಳುವ ಬಂಡೆ ಕ್ರಮೇಣವಾಗಿ ಕರಗಿ ಸಿಂಕ್ ಹೋಲ್ ನಿರ್ಮಾಣಗೊಳ್ಳುತ್ತದೆ. ಇದರಿಂದ ಬಂಡೆಯನ್ನು ತೆಗೆದುಹಾಕಿರುವಂತೆ, ಗುಹೆಗಳು ಮತ್ತು ತೆರೆದ ಸ್ಥಳಗಳು ಭೂಗರ್ಭದಲ್ಲಿ ಬೆಳೆಯುತ್ತವೆ. ಮೇಲ್ಭಾಗದ ಮಣ್ಣು ಕುಸಿತಗೊಂಡು ಒಂದು ಸಿಂಕೋಲ್ ಅನ್ನು ಸೃಷ್ಟಿಸುತ್ತದೆ.

ವಿಶಿಷ್ಟವಾಗಿ, ನೈಸರ್ಗಿಕವಾಗಿ ಸಿಂಕ್ಹೋಲ್ಗಳು ಸುಣ್ಣದ ಕಲ್ಲಿನ ಮತ್ತು ಉಪ್ಪು ಹಾಸಿಗೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ, ಇವುಗಳು ನೀರಿನ ಮೂಲಕ ಸುಲಭವಾಗಿ ಕರಗುತ್ತವೆ. ಸಿಂಕ್ಹೋಲ್ಗಳು ಸಾಮಾನ್ಯವಾಗಿ ಮೇಲ್ಮೈಯಿಂದ ಗೋಚರಿಸುವುದಿಲ್ಲ, ಏಕೆಂದರೆ ಅವುಗಳು ಭೂಗತವಾಗಿರುತ್ತದೆ. ಅವುಗಳ ಮೂಲಕ ನದಿಗಳು ಹರಿಯುತ್ತವೆ ಎಂದು ತಿಳಿದುಬಂದಿದೆ. ಆದರೆ ಕೆಲವು ವೇಳೆ ದೊಡ್ಡ ಗಾತ್ರದ ಸಿಂಕ್ಹೋಲ್ಗಳು ಮೇಲ್ಬಾಗದಲ್ಲಿ ಕಾಣಿಸಿಕೊಳ್ಳುತ್ತವೆ. ದುರದೃಷ್ಟವಶಾತ್, ಸಿಂಕ್‌ಹೋಲ್‌ಗಳು ಹೇಗೆ ಅಥವಾ ಯಾವಾಗ ರೂಪುಗೊಳ್ಳುತ್ತವೆ ಎಂದು ನಿಖರವಾಗಿ ಹೇಳುವುದು ಕಷ್ಟ ಎಂದು ಬೇನೆನ್ ಹೇಳುತ್ತಾರೆ.

ಗುಹೆಯ ಅನ್ವೇಷಣೆ :-
ಒಸಿಇಟಿ ತಂಡವು ಸಿಂಕ್‌ಹೋಲ್‌ಗೆ ಇಳಿಯುತ್ತಿದ್ದಂತೆ ಅವರಿಗೆ ಅಸಮಾನ್ಯ ಮತ್ತು ಮೊನಚಾದ ಸ್ಟಾಲಾಗ್‌ಮಿಟ್‌ಗಳು(stalagmites) ನೆಲದ ಮೇಲೆ ಇರುವುದು ಕಂಡುಬಂತು. ಅವುಗಳಲ್ಲಿ ಕೆಲವು 30 ಅಡಿ (9 ಮೀ) ಎತ್ತರದಲ್ಲಿದ್ದವು ಎಂದು ಓಮನ್ ಪತ್ರಿಕೆ ಮಸ್ಕತ್ ಡೈಲಿ ಹೇಳಿದೆ. ನೆಲದ ಕೆಲವು ಭಾಗಗಳು ಗುಹೆ ಮುತ್ತುಗಳಿಂದ ಕೂಡಿದ್ದು, ಅವುಗಳು ಒಂದು ರೀತಿಯ ಸ್ಪೆಲಿಯೋಥೆಮ್‌(speleothems)ಗಳಾಗಿವೆ. ಸಾಮಾನ್ಯವಾಗಿ ಗುಹೆಗಳಲ್ಲಿ ರಚನೆಯಾಗುವ ಸ್ಟಾಲಾಗ್‌ಮಿಟ್‌ಗಳು ಮತ್ತು ಸ್ಟಾಲಾಕ್ಟೈಟ್‌ಗಳು ಖನಿಜಾಂಶಗಳಾದ ಕ್ಯಾಲ್ಸಿಯಂ ಕಾರ್ಬೋನೇಟ್‌ನಂತಹ ತೊಟ್ಟಿಕ್ಕುವ ನೀರಿನಿಂದ ರೂಪುಗೊಳ್ಳುತ್ತವೆ.

“ಅವುಗಳು [ಗುಹೆ ಮುತ್ತುಗಳು] ಹನಿ ಅಥವಾ ಹರಿಯುವ ನೀರಿನಿಂದ ಖನಿಜದ ಕೇಂದ್ರೀಕೃತ ಪದರಗಳಾಗಿ ರೂಪುಗೊಳ್ಳುತ್ತವೆ. ಸಾಮಾನ್ಯವಾಗಿ ಒಂದು ರೀತಿಯ ನ್ಯೂಕ್ಲಿಯಸ್‌ನ ಸುತ್ತಲೂ ಇರುತ್ತದೆ” ಎಂದು ಗುಹೆ ಮುತ್ತುಗಳಲ್ಲಿ ಪರಿಣತಿ ಹೊಂದಿರುವ ಪಶ್ಚಿಮ ಇಲಿನಾಯ್ಸ್ ವಿಶ್ವವಿದ್ಯಾಲಯದ ಭೂವಿಜ್ಞಾನಿ ಲೆಸ್ಲಿ ಮೆಲಿಮ್ ಹೇಳುತ್ತಾರೆ.

ಈ ಸಿಂಕ್ ಹೋಲ್ ನಲ್ಲಿ ಗುಹೆ ಮುತ್ತುಗಳು ಅಸಾಮಾನ್ಯವಾಗಿವೆ. ಬಾವಿಯ ನೆಲದ ಭಾಗಗಳಲ್ಲಿ ಸಂಪೂರ್ಣವಾಗಿ ಬೆಳೆದಿರುವುದರಿಂದ ಬಾವಿಯ ಸುತ್ತಲೂ ಚಲಿಸಲು ಸಾಧ್ಯವಾಗಿಲ್ಲ ಎಂದು ಮೆಲಿಮ್ ಹೇಳುತ್ತಾರೆ.

ಮಾತ್ರವಲ್ಲದೆ ಈ ಸಿಂಕ್‌ಹೋಲ್‌ನ ಒಳಗಿನಿಂದ ಸುಮಾರು 213 ಅಡಿ (65 ಮೀ) ಕೆಳಗಿರುವ ಹಲವಾರು ರಂಧ್ರಗಳಿಂದ ನೀರು ಹೊರಹೊಮ್ಮುತ್ತದೆ. ಇದು ಸಣ್ಣ ಜಲಪಾತಗಳನ್ನು ಸೃಷ್ಟಿಸುತ್ತದೆ ಎಂದು ತಂಡವು ಕಂಡುಹಿಡಿದಿದೆ. ಇದು ಸ್ಪೀಲಿಯೋಥೆಮ್ಸ್, ಸ್ಟಾಲಾಗ್ಮಿಟ್ಸ್ ಮತ್ತು ಗುಹೆ ಮುತ್ತುಗಳಿಗೆ ಅಗತ್ಯವಾದ ಹನಿ ನೀರನ್ನು ಒದಗಿಸುತ್ತದೆ ಎಂದು ಮೆಲಿಮ್ ಹೇಳುತ್ತಾರೆ.

ಗುಹೆ ವ್ಯವಸ್ಥೆಯೊಳಗೆ ಹಾವುಗಳು, ಕಪ್ಪೆಗಳು ಮತ್ತು ಜೀರುಂಡೆಗಳು, ಹಲವಾರು ಪ್ರಾಣಿಗಳು, ಮುಖ್ಯವಾಗಿ ಪಕ್ಷಿಗಳು ಹಳ್ಳದೊಳಗೆ ಬಿದ್ದಿರುವಂತೆ ಕಾಣುತ್ತವೆ ಎಂದು ಪರಿಶೋಧಕರು ವರದಿ ಮಾಡಿದ್ದಾರೆ. ಈ ಕೊಳೆಯುತ್ತಿರುವ ಶವಗಳು ವಾಸನೆಯನ್ನು ಸ್ಥಳೀಯರು ವರದಿ ಮಾಡಿದ ದುರ್ವಾಸನೆಯಾಗಿರಬಹುದು ಎನ್ನಲಾಗುತ್ತದೆ. ಆದರೆ ಸಿಂಕ್ ಹೋಲ್ ಒಳಗೆ “ಯಾವುದೇ ಅತಿಯಾದ ಕೆಟ್ಟ ವಾಸನೆ ಇರಲಿಲ್ಲ” ಎಂದು ಸಂಶೋಧಕರು ಹೇಳುತ್ತಾರೆ.

ತಂಡವು ಸಿಂಕ್ ಹಫಲ್ ಪರಿಶೀಲನೆ ವೇಳೆ ಮಾದರಿಗಳನ್ನು ತೆಗೆದುಕೊಂಡಿದೆ. ಜೊತೆಗೆ ಅದು ಸಿಂಕ್‌ಹೋಲ್ ಮತ್ತು ಅದು ಹೇಗೆ ರೂಪುಗೊಂಡಿತು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸು ನಿರೀಕ್ಷೆ ಇದೆ. “ನಾವು ನೀರು, ಬಂಡೆಗಳು, ಮಣ್ಣು ಮತ್ತು ಕೆಲವು ಸತ್ತ ಪ್ರಾಣಿಗಳ ಮಾದರಿಗಳನ್ನು ಸಂಗ್ರಹಿಸಿದ್ದೇವೆ ಆದರೆ ಅವುಗಳನ್ನು ಇನ್ನೂ ವಿಶ್ಲೇಷಿಸಿಲ್ಲ” ಎಂದು ಸಂಶೋಧನೆ ತಂಡ ಹೇಳಿಕೊಂಡಿದೆ.

ಮುಂಬರುವ ವಾರಗಳಲ್ಲಿ ವೆಲ್ ಆಫ್ ಬಾರ್‌ಹೌಟ್‌ನ ಪರಿಶೋಧನೆಯ ಅಂತಿಮ ವರದಿಯನ್ನು ನಿರೀಕ್ಷಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights