ಇಬ್ಬರು ಅವಳಿ ಮಕ್ಕಳನ್ನು ಬಾವಿಗೆ ಎಸೆದು ಆತ್ಮಹತ್ಯೆಗೆ ಯತ್ನಿಸಿದ ತಾಯಿ..!
ಇಬ್ಬರು ಅವಳಿ ಮಕ್ಕಳನ್ನು ಬಾವಿಗೆ ಎಸೆದ ಮಹಿಳೆಯೊಬ್ಬಳು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕೋಝಿಕೋಡೆಯ ನದಾಪುರದ ಬಳಿಯ ಬಾವಿಯಲ್ಲಿ ಭಾನುವಾರ ರಾತ್ರಿ 11 ಗಂಟೆಗೆ 31 ವರ್ಷದ ಮಹಿಳೆ ಸುಬೀನಾ ತನ್ನ 3.5 ವರ್ಷದ ಅವಳಿ ಮಕ್ಕಳಾದ ಫಾತಿಮಾ ರೌಹಾ ಮತ್ತು ಮುಹಮ್ಮದ್ ರಿಜ್ವಿನ್ ಅವರನ್ನು ಬಾವಿಗೆ ಎಸೆದಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಸ್ಥಳೀಯರ ಸಮಯಪ್ರಜ್ಞೆಯಿಂದ ಆಕೆಯನ್ನು ರಕ್ಷಿಸಲಾಗಿದೆ.
ಸ್ಥಳೀಯರು ಮತ್ತು ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ನೋಡಿದಾಗ ಬಾವಿಯಲ್ಲಿದ್ದ ಆಕೆಯನ್ನು ಮೋಟಾರ್ ಪಂಪ್ ಪೈಪ್ ಮೂಲಕ ಮೇಲತ್ತಲಾಗಿದೆ. ಆದರೆ ಅಷ್ಟರಲ್ಲಾಗಲೆ ಮಕ್ಕಳ ಪ್ರಾಣಪಕ್ಷ ಮಾತ್ರ ಹಾರಿಹೋಗಿತ್ತು. ಬಳಿಕ ಸುಬೀನಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಕೊಲೆ ಆರೋಪದ ಮೇಲೆ ಪೊಲೀಸರು ಆಕೆಯನ್ನು ಬಂಧಿಸಿದರು.
ಪ್ರಾಥಮಿಕ ತನಿಖೆಯಿಂದ ಮಹಿಳೆ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. ಅಪರಾಧದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ವಿಚಾರಣೆ ನಡೆಯುತ್ತಿದೆ.
ಅವಳಿ ಮಕ್ಕಳ ಮೃತದೇಹಗಳನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ರವಾನಿಸಲಾಗಿದೆ.