ಹಾನಗಲ್ ಬೈ ಎಲೆಕ್ಷನ್: ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ರಾಜಶೇಖರ ಕಟ್ಟೇಗೌಡ ಹೆಸರು ಮುನ್ನೆಲೆಗೆ!

ಹಾವೇರಿ ಜಿಲ್ಲೆಯ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸಿದೆ. ಚುನಾವಣಾ ದಿನ ಘೋಷಣೆಯಾಗುತ್ತಿದ್ದಂತೆಯೇ ಟಿಕೆಟ್‌ ಆಕಾಂಕ್ಷಿಗಳ ಚಟುವಟಿಗಳು ಗರಿಗೆದರಿದ್ದು, ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳು ನಾಮುಂದು ತಾಮುಂದು ಎನ್ನುತ್ತಿದ್ದಾರೆ.

ಇದೇ ವೇಳೆ, ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಂಘಪರಿವಾರದಲ್ಲಿ ಮತ್ತು ಬಿಜೆಪಿಯಲ್ಲಿ ತೊಡಗಿಸಿಕೊಂಡಿರುವ ರಾಜಶೇಖರಗೌಡ ಕಟ್ಟೇಗೌಡ ಅವರು ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್‌ ಕೋರಿ ಪಕ್ಷದ ಹಲವು ನಾಯಕರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಹಾನಗಲ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿ ಶಾಸಕ ಸಿಎಂ ಉದಾಸಿ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 2 ರಂದು ಫಲಿತಾಂಶ ಹೊರಬೀಳಲಿದೆ.

ಮೂರು ಪಕ್ಷಗಳಲ್ಲಿಯೂ ಹಲವು ಟಿಕೆಟ್‌ ಆಕಾಂಕ್ಷಿಗಳಿದ್ದು, ಈ ಪೈಕಿ ರಾಜಶೇಖರಗೌಡ ಕಟ್ಟೇಗೌಡ ಅವರು ಬಿಜೆಪಿಯಿಂದ ಟಿಕೆಟ್‌ ನಿರೀಕ್ಷೆ ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಏನ್‌ಸುದ್ದಿ.ಕಾಂ ಜೊತೆಗೆ ಮಾತನಾಡಿದ ರಾಜಶೇಖರಗೌಡ ಕಟ್ಟೇಗೌಡ, “ನಾನು ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿರುವುದು ಬಿಜೆಪಿ ನಾಯಕರಿಗೆ ಮೊದಲಿನಿಂದಲೂ ತಿಳಿದಿದೆ. ನಾವು ಎಷ್ಟು ದುಡಿದ್ದಿದ್ದೇವೆ ಎಂಬುದು ಅವರಿಗೆ ಗೊತ್ತಿದೆ. ಹೊಸದಾಗಿ ನನ್ನ ಇಚ್ಛೆಯನ್ನು ಅವರ ಮುಂದಿಡುವ ಅಗತ್ಯವಿಲ್ಲ. ಅವರು ತಮಗೆ ಟಿಕೆಟ್‌ ನೀಡದರೆ ಪಕ್ಷದಿಂದ ಸ್ಪರ್ಧಿಸಬೇಕು ಎಂಬ ಬಯಕೆ ಇದೆ” ಎಂದು ಹೇಳಿದ್ದಾರೆ.

ರಾಜಶೇಖರಗೌಡ ಕಟ್ಟೇಗೌಡ
ರಾಜಶೇಖರಗೌಡ ಕಟ್ಟೇಗೌಡ

“ನಮ್ಮ ನಾಯಕರಾಗಿದ್ದ ದಿ. ಸಿಎಂ ಉದಾಸಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಮಾಡಬೇಕೆಂದಿದ್ದ ಹಲವಾರು ಕೆಲಸಗಳು ಅವರ ನಿಧನದಿಂದಾಗಿ ಅರ್ಧಕ್ಕೆ ನಿಂತುಹೋಗಿವೆ. ಅವೆಲ್ಲವನ್ನೂ ಪೂರ್ಣಗೊಳಿಸಬೇಕು. ಮುಖ್ಯವಾಗಿ ಕ್ಷೇತ್ರದ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಪೂರೈಸಬೇಕು. ಇದಕ್ಕಾಗಿ ಬಿಜೆಪಿಯಿಂದ ಸ್ಪರ್ಧಿಸಿ, ಜನ ಆಶೀವಾರ್ದ ಮಾಡಿದರೆ, ಜನರಿಗಾಗಿ ದುಡಿಯಬೇಕು ಎಂಬ ಬಯಕೆ ಇದೆ” ಎಂದು ರಾಜಶೇಖರಗೌಡ ಕಟ್ಟೇಗೌಡ ತಿಳಿಸಿದ್ದಾರೆ.

ನಮ್ಮ ತಂದೆ ವಕೀಲರಾಗಿದ್ದರು. ಆಗಿನಿಂದಲೂ ನಾನು ಜನರ ಕಷ್ಟಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಜನರಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಕ್ಷೇತ್ರದಲ್ಲಿ ಜನಸಾಮಾನ್ಯರ ಏಳಿಗೆಗಾಗಿ ದುಡಿಯುವ ಇಚ್ಛೆಯಿದೆ ಎಂದು ಅವರು ಹೇಳಿದ್ದಾರೆ.

ಹಿಂದೂತ್ವ ಎಂಬುದು ನಾವು ಹುಟ್ಟಿರುವ ಸಮಾಜದ ಭಾಗವಾಗಿದೆ. ಅದು ನಮ್ಮಲ್ಲಿ ಇದ್ದೇ ಇದೆ. ಅದನ್ನು ಬಿಟ್ಟು ನಾವು ಇರೋಕೆ ಆಗಲ್ಲ. ಹಾಗಂತ ಯಾರನ್ನೂ ದೂರ ಮಾಡಬೇಕು ಎಂದಿಲ್ಲ. ಎಲ್ಲರೂ ಜೊತೆಗೆ ಹೋಗಬೇಕು ಎಂಬುದು ನಮ್ಮ ಆಶಾಭಾವನೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಹಾನಗಲ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವೇ ಆಗಿರುವುದರಿಂದ ಮತ್ತು ಅವರು ಸಿಎಂ ಆದ ಬಳಿಕ ಮೊದಲ ಚುನಾವಣೆಯೂ ಆಗಿರುವುದರಿಂದ ಅವರಿಗೆ ಈ ಚುನಾವಣೆ ಪ್ರತಿಷ್ಟೆಯಾಗಿರಲಿದೆ. ಹೀಗಾಗಿ, ಕೇಸರಿ ಪಡೆ ಯಾರಿಗೆ ಮಣೆ ಹಾಕುತ್ತದೆ ಎಂದು ಕಾದುನೋಡುತ್ತಿದೆ.

ಇನ್ನು, ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರು ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಅಕ್ಟೋಬರ್ 30 ರಂದು ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿಯೂ ಉಪಚುನಾವಣೆ ನಡೆಯಲಿದ್ದು, ನ. 3 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಬಿಎಸ್‌ವೈ ಬೆಂಬಲಿಗರಿಗೆ ಬಿಜೆಪಿ ಬ್ರೇಕ್?; ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights