ಆಶಿಶ್ ಮಿಶ್ರಾಗಾಗಿ ಪೊಲೀಸರು ಶೋಧ : ಶೀಘ್ರವೇ ಬಂಧಿಸುವ ಭರವಸೆ ನೀಡಿದ ಲಕ್ಷ್ಮಿ ಸಿಂಗ್!
ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಜೊತೆಗೆ ಶೀಘ್ರವೇ ಆಶಿಶ್ ಬಂಧನವಾಗಲಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಐಜಿ ಲಕ್ಷ್ಮಿ ಸಿಂಗ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಐಜಿ ಲಕ್ನೋ ರೇಂಜ್, ಲಕ್ಷ್ಮಿ ಸಿಂಗ್ “ಲಖಿಂಪುರ್ ಖೇರಿ ಎಫ್ಐಆರ್ನಲ್ಲಿ ಕೊಲೆ ಆರೋಪದ ಮೇಲೆ ಆಶಿಶ್ ಮಿಶ್ರಾರನ್ನು ಹುಡುಕಲು ಶೋಧ ನಡೆಸಲಾಗುತ್ತಿದೆ. ಜೊತೆಗೆ ಅವರನ್ನು ಕೂಡಲೇ ಬಂಧಿಸಲಾಗುವುದು” ಎಂದಿದ್ದಾರೆ.
ಆಶಿಶ್ ಮಿಶ್ರಾ ಅವರು ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ರೈತರ ಮೇಲೆ ಕಾರು ಚಲಾಯಿಸಿದ್ದಾರೆ ಎಂದು ಎಫ್ಐಆರ್ ಪ್ರತಿ ಉಲ್ಲೇಖಿಸಲಾಗಿದೆ.
“ಮಧ್ಯಾಹ್ನ 3 ಗಂಟೆ ಸುಮಾರಿಗೆ, ಆಶಿಶ್ ಮಿಶ್ರಾ ಜೊತೆಗೆ 15-20 ಶಸ್ತ್ರಧಾರಿಗಳೊಂದಿಗೆ ಮೂರು ವಾಹನಗಳಲ್ಲಿ ಬನ್ಬೀರ್ಪುರದ ಪ್ರತಿಭಟನಾ ಸ್ಥಳವನ್ನು ತಲುಪಿದರು. ಮೋನು ಮಿಶ್ರಾ ತನ್ನ ಮಹೀಂದ್ರ ಥಾರ್ನ ಎಡಭಾಗದಲ್ಲಿ ಕುಳಿತಿದ್ದಾಗ ಗುಂಡಿನ ದಾಳಿ ನಡೆಸಿದರು “ಎಂದು ಎಫ್ಐಆರ್ ಹೇಳಿದೆ.
ಐಜಿ ಲಕ್ಷ್ಮಿ ಸಿಂಗ್ ಈಗ ಆಶಿಶ್ ಮಿಶ್ರಾರನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. “ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳು ಮತ್ತು ಮಾಹಿತಿಯ ಬಗ್ಗೆ ತನಿಖೆ ಮುಂದುವರಿಸಲು ಪ್ರಯತ್ನಿಸಲಾಗಿದೆ” ಎಂದು ಸಿಂಗ್ ಹೇಳಿದರು.
“ನಾನು ಬೆಳಿಗ್ಗೆ 9 ರಿಂದ ಕಾರ್ಯಕ್ರಮ ಮುಗಿಯುವವರೆಗೆ ಬನ್ವಾರಿಪುರದಲ್ಲಿದ್ದೆ. ನನ್ನ ವಿರುದ್ಧದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಈ ವಿಷಯದ ಕುರಿತು ನ್ಯಾಯಾಂಗ ತನಿಖೆಗೆ ನಾನು ಒತ್ತಾಯಿಸುತ್ತೇನೆ. ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಈ ಹಿಂದೆ ಸುದ್ದಿ ಸಂಸ್ಥೆಗೆ ಮಾತನಾಡುತ್ತಾ ಆಶೀಶ್ ಮಿಶ್ರಾ ಹೇಳಿದ್ದರು.
ಭಾನುವಾರ, ಮಹಾರಾಜ ಅಗ್ರಾಸೇನ್ ಇಂಟರ್ ಕಾಲೇಜಿನ ಕ್ರೀಡಾ ಮೈದಾನದಲ್ಲಿ ರೈತರು ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಅವರು ಯೋಜಿಸಿದ್ದರು.
ಈ ವೇಳೆ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದಾಗ ಆಶಿಶ್ ಮಿಶ್ರಾ ಅವರ ಕಾರು ಪ್ರತಿಭಟನಾನಿರತ ರೈತರ ಮೇಲೆ ಅತಿವೇಗವಾಗಿ ಚಲಾಯಿಸಿದ್ದಾರೆ. ಘಟನೆಯಲ್ಲಿ ನಾಲ್ವರು ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಲಖಿಂಪುರ್ ಖೇರಿಯ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದು, ಇನ್ನೂ ನಾಲ್ಕು ಸಾವುಗಳಿಗೆ ಕಾರಣವಾಯಿತು.

