ಲಖಿಂಪುರ್ ಹಿಂಸಾಚಾರದ ಆರೋಪಿ ಆಶಿಶ್ ಬಂಧನಕ್ಕೆ ಆಗ್ರಹ : ಅ.18ರಂದು ‘ರೈಲು ತಡೆ’ ಪ್ರತಿಭಟನೆ!

ಲಖಿಂಪುರ್ ಹಿಂಸಾಚಾರದ ಆರೋಪಿ ಆಶಿಶ್ ಮಿಶ್ರಾರನ್ನು ಬಂಧಿಸಲು ಆಗ್ರಹಿ ಅಕ್ಟೋಬರ್ 18 ರಂದು ‘ರೈಲು ತಡೆ’ ಮತ್ತು 26 ರಂದು ಲಖನೌದಲ್ಲಿ ಮಹಾಪಂಚಾಯತ್ ನಡೆಸಲು ರೈತ ಸಂಘಗಳು ತೀರ್ಮಾನಿಸಿವೆ.

ಉತ್ತರಪ್ರದೇಶ ಲಖಿಂಪುರ್ ಖೇರಿಯಲ್ಲಿ ಭಾನುವಾರ ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವಿಗೆ ವಿರೋಧವಾಗಿ ಅಕ್ಟೋಬರ್ 18 ರಂದು ರೈತ ಗುಂಪುಗಳು ‘ರೈಲು ರೋಕೋ’ ಮತ್ತು 26 ರಂದು ಲಖನೌದಲ್ಲಿ ಮಹಾಪಂಚಾಯತ್ ನಡೆಸಲಿವೆ.

ಕಿರಿಯ ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಮತ್ತು ಎಫ್‌ಐಆರ್‌ನಲ್ಲಿ ಕೊಲೆ ಆರೋಪಿ ಎಂದು ಹೆಸರಿಸಲಾಗಿದ್ದರೂ ಆತನ ಮಗ ಆಶಿಶ್ ನನ್ನು ಬಂಧಿಸಲಾಗಿಲ್ಲ. ಕೂಡಲೆ ಆತನನ್ನು ಬಂಧಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

“ದೇಶದಾದ್ಯಂತದ ರೈತರು ಅಕ್ಟೋಬರ್ 12 ರಂದು ಲಖಿಂಪುರ್ ಖೇರಿಯನ್ನು ತಲುಪುತ್ತಾರೆ. ನಗರಗಳಲ್ಲಿ ರಾತ್ರಿ 8 ಗಂಟೆಗೆ (ಅಕ್ಟೋಬರ್ 12 ರಂದು) ಕ್ಯಾಂಡಲ್ ಮೆರವಣಿಗೆಗಳನ್ನು ಕೈಗೊಳ್ಳುವಂತೆ ನಾವು ವಿನಂತಿಸುತ್ತೇವೆ” ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಇಂದು ಮನವಿ ಮಾಡಿದ್ದಾರೆ.

“ಲಖಿಂಪುರ್ ಖೇರಿಯಲ್ಲಿ ಮೃತಪಟ್ಟ ರೈತರ ಚಿತಾಭಸ್ಮದೊಂದಿಗೆ ರೈತರು ಪ್ರತಿ ರಾಜ್ಯಕ್ಕೆ ಹೋಗುತ್ತಾರೆ. ನಂತರ ಅಕ್ಟೋಬರ್ 18 ರಂದು ನಾವು ‘ರೈಲು ರೋಕೋ’ ನಡೆಸುತ್ತೇವೆ. 26 ರಂದು ಲಕ್ನೋದಲ್ಲಿ ಬೃಹತ್ ಮಹಾಪಂಚಾಯತ್ ನಡೆಯಲಿದೆ” ಎಂದಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರೀಯ ಆಂದೋಲನದ ಭಾಗವಾಗಿ ನಡೆಯುತ್ತಿದ್ದ ಶಾಂತಿಯುತ ರೈತರ ಪ್ರತಿಭಟನೆಯಲ್ಲಿ ನುಗ್ಗಿದ ಕಾರು ನಾಲ್ವರು ರೈತರನ್ನು ಬಲಿ ತೆಗೆದುಕೊಂಡಿದೆ. ನಂತರ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಆಶಿಶ್ ಮಿಶ್ರಾ ಪ್ರತಿಭಟನೆಯ ವೇಳೆ ಹರಿದು ಬಂದ ಕಾರಿನಲ್ಲಿದ್ದರು ಎಂದು ರೈತರು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕೆಲ ವಿಡಿಯೋಗಳು ವೈರಲ್ ಆದ ಬಳಿಕ ವಿರೋಧ ಪಕ್ಷಗಳು, ರೈತರು ಕೂಡಲೆ ಆಶಿಶ್ ಮಿಶ್ರಾ ರನ್ನು ಬಂಧಿಸಲು ಒತ್ತಾಯ ಹೇರಲಾಯಿತು.

ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಆಶಿಶ್ ಮನೆಗೆ ನೋಟೀಸ್ ಅಂಟಿಸಲಾಗಿತ್ತು. ಆದರೆ ನಿನ್ನೆ ಆಶಿಶ್ ವಿಚಾರಣೆಗೆ ಹಾಜರಾಗಲಿಲ್ಲ. ಪೊಲೀಸ್ ಹಾಗೂ ಸರ್ಕಾರಕ್ಕೆ  ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಇಂದು ಆಶಿಶ್ ವಿಚಾರಣೆಗೆ ಹಾಜರಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights