‘ಜೆಡಿಎಸ್ ಬಗ್ಗೆ ಮಾತನಾಡದೇ ಇದ್ದರೆ ಸಿದ್ದರಾಮಯ್ಯಗೆ ನಿದ್ದೆ ಬರಲ್ಲ’ – ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ!

ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡಿಲ್ಲ ಅಂದರೆ ನಿದ್ದೆ ಬರಲ್ಲ ಎಂದು ಕಾಣುತ್ತದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬುದ್ಧಿವಂತ ಮತದಾರರು ಜೆಡಿಎಸ್‌ ಪಕ್ಷಕ್ಕೆ ಮತ ಹಾಕಲ್ಲ, ಆ ಪಕ್ಷ ಸಿಂದಗಿಯಲ್ಲಿ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದು ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡಿಲ್ಲ ಅಂದರೆ ನಿದ್ದೆ ಬರೋದಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ಮಾಡಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಅವರ ಪಕ್ಷ 3ನೇ ಸ್ಥಾನದಲ್ಲಿತ್ತು. ಇಲ್ಲಿ ಕಾಂಗ್ರೆಸ್ 2ನೇ ಸ್ಥಾನಕ್ಕೆ ಬಂದ ಇತಿಹಾಸವೇ ಇಲ್ಲ. ಈಗ ನೋಡಿದರೇ ರಾಜಕೀಯ ಬದುಕು ಕೊಟ್ಟ ಪಕ್ಷವನ್ನೇ ನಿಂದಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಮನಗುಳಿ ನಿಧನದ ಅನುಕಂಪದಲ್ಲಿ ತೇಲುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಇದ್ದ ಅವರ ಪುತ್ರನನ್ನು ಹೈಜಾಕ್ ಮಾಡಿ, ಜನರಿಗೆ ತಮ್ಮ ಸಿದ್ಧಕಲೆ ದರ್ಶನ ಆಗುತ್ತಿದ್ದಂತೆಯೇ ಈಗ ಅನುಕಂಪ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬುದ್ಧಿವಂತ ಮತದಾರರು ಜೆಡಿಎಸ್ ಪಕ್ಷಕ್ಕೆ ಮತ ಹಾಕಲ್ಲ ಎಂದು ಸಿದ್ಧಹಸ್ತರು ಫರ್ಮಾನು ಹೊರಡಿಸಿದ್ದಾರೆ. ಜನರು ಇವರ ಜೇಬಿನಲ್ಲಿ ಇದ್ದಾರಾ? ಇದು ಸಿಂದಗಿ ಜನರಿಗೆ ಅಪಮಾನ ಮಾಡುವ ಅಹಂಕಾರದ ಹೇಳಿಕೆ. ಅವರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಂಡಕಾರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights