AY 4.2 ರೂಪಾಂತರಿ ವೈರಸ್ ಹೆಚ್ಚು ಅಪಾಯಕಾರಿಯಲ್ಲ; ಆದರೂ ಇರಲಿ ಎಚ್ಚರ: ವೈದ್ಯಕೀಯ ತಜ್ಞರು

ಕೊರೊನಾ 2ನೇ ಅಲೆಯ ನಂತರ ಹೊಸ ರೂಪಾಂತರಿ ವೈರಸ್‌ಗಳು ಜಗತ್ತಿನಾದ್ಯಂತ ಕಾಣಿಸಿಕೊಳ್ಳುತ್ತಿವೆ. ಭಾರತದಲ್ಲಿ ಡೆಲ್ಟಾ ರೂಪಾಂತರಿ ವೈರಸ್‌ ಕಾಣಿಸಿಕೊಂಡಿತ್ತು. ಇದೀಗ, ಅದರ ಉಪ ರೂಪಾಂತರಿ ಡೆಲ್ಟಾ AY 4.2 ಎಂಬ ಹೊಸ ರೂಪಾಂತರಿ ವೈರಸ್‌ ಪತ್ತೆಯಾಗಿದೆ. ಆದರೆ, ಈ ವೈರಸ್‌ನಿಂದ ಭಾರತಕ್ಕೆ ಗಂಭೀರ ಅಪಾಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

AY 4.2 ವೈರಸ್ ಅತ್ಯಂತ ವೇಗವಾಗಿ ಹರಡುವ ಕ್ಷಮತೆ ಇದ್ದರೂ, ಇದು ಹೆಚ್ಚು ಮಾರಣಾಂತಿಕವಾದಂತೆ ಕಾಣುತ್ತಿಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಸದಸ್ಯರನ್ನು ಒಳಗೊಂಡ ತಂಡವು ಈ ವೈರಸ್​ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿದೆ ಎಂದು ಐಸಿಎಂಆರ್‌ನ ವಿಜ್ಞಾನಿ ಡಾ.ಲೋಕೇಶ್ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಈ ಕೋವಿಡ್ ವೇರಿಯಂಟ್ ಕಾಣಿಸಿಕೊಂಡಿದೆ. ಈಗಿನ ವರದಿಗಳನ್ನು ಪರಿಶೀಲಿಸಿದರೆ AY 4.2 ರೂಪಾಂತರ ವೈರಸ್ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು SARS-CoV2-Genomic Consortia (INSACOG) ಹೇಳಿದೆ.

ಇದನ್ನೂ ಓದಿ: ಕರ್ನಾಟಕ ಮತ್ತೆ ಲಾಕ್‌ಡೌನ್‌ ಎಂಬ ವದಂತಿ; ಸ್ಪಷ್ಟನೆ ನೀಡಿದ ತಜ್ಞರು!

ಡೆಲ್ಟಾ ವೈರಸ್​ನ ಮರು ರೂಪಾಂತರವಾದ ವೈರಸ್​ ಅನ್ನು AY 4.2 ಎಂದು ಹೆಸರಿಸಲಾಗಿದೆ. ಈಗಾಗಲೇ ಯುಕೆ, ಚೀನಾ, ರಷ್ಯಾ ಮತ್ತು ಭಾರತದಲ್ಲಿ ಈ ರೂಪಾಂತರಿಗಳು ಪತ್ತೆಯಾಗಿವೆ. ಈಗಾಗಲೇ, ಆಂಧ್ರಪ್ರದೇಶದಲ್ಲಿ 7, ಕೇರಳದಲ್ಲಿ 4, ಕರ್ನಾಟಕದಲ್ಲಿ 2, ತೆಲಂಗಾಣದಲ್ಲಿ 2, ಜಮ್ಮು- ಕಾಶ್ಮೀರ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಡೆಲ್ಟಾ AY 4.2 ಉಪ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ.

ಭಾರತದಲ್ಲಿ ಈ ವೈರಸ್‌ ಮಾರಣಾಂತಿಕವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಈ ವೈರಸ್‌ನಿಂದ ಇಂಗ್ಲೆಂಡ್, ರಷ್ಯಾ ಮತ್ತು ಚೀನಾದಲ್ಲಿ ಸಾಕಷ್ಟು ಸಾವುಗಳಾಗಿವೆ ಎಂದು ಏಷ್ಯನ್ ಸೊಸೈಟಿ ಆಫ್ ಎಮರ್ಜೆನ್ಸಿ ಮೆಡಿಸಿನ್ ಅಧ್ಯಕ್ಷ ಡಾ.ಟಾಮೋರಿಶ್ ಕೋಲೆ ಹೇಳಿದ್ದಾರೆ.

AY 4.2 ವೈರಸ್‌ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟ ಸೂಚನೆ ಇಲ್ಲ. ಹೀಗಾಗಿ, ಈ ಕುರಿತು ಸೂಕ್ತ ಸಂಶೋಧನೆ ನಡೆಯುವವರೆಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಅತ್ಯಂತ ಅನಿವಾರ್ಯ ಎಂದು ಟಾಮೋರಿಶ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಪತ್ತೆಯಾಗಿದ್ದ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಷ್ಟು ಈ ಎವೈ 4.2 ಉಪರೂಪಾಂತರಿ ವೈರಸ್‌ ಅಪಾಯಕಾರಿಯಲ್ಲ ಎಂದು ಭಾರತದ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಯುಟ್ಯೂಬ್‌ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಯುವಕನ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights