ನಟ ಸಾರ್ವಭೌಮ, ಕನ್ನಡಿಗರ ಯುವರತ್ನ ಪುನೀತ್ ರಾಜಕುಮಾರ್ ನಡೆದು ಬಂದ ಹಾದಿ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನಗಲಿದ್ದಾರೆ. ನಟರಾಗಿಯಷ್ಟೇ ಅಲ್ಲದೆ ಹಿನ್ನೆಲೆ ಗಾಯಕ, ನಿರ್ಮಾಪಕ, ದೂರದರ್ಶನ ನಿರೂಪಕರೂ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿರುವ ಚಿತ್ರರಂಗ ಅನಾಥವಾಗಿದೆ.
1976 ರಲ್ಲಿ ತೆರೆಕಂಡ ಡಾ.ರಾಜ್‌ಕುಮಾರ್ ಅಭಿನಯದ `ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಆಗ ಪುನೀತ್ ಆರು ತಿಂಗಳು ಮಗು. ನಂತರ ವಸಂತ ಗೀತ (1980) ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ ರಾಜ್‌ಕುಮಾರ್, ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಚಿತ್ರಗಳು ಮತ್ತು ನಾಯಕ ನಟನಾಗಿ 28 ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಅಣ್ಣಾವ್ರ ಕುಟುಂಬದ ಕುಡಿ ಪುನೀತ್ ರಾಜ್‌ಕುಮಾರ್. 1975 ರ ಮಾರ್ಚ್ 17 ರಂದು ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಪುನೀತ್ ರಾಜ್‌ಕುಮಾರ್ ಜನಿಸಿದರು. ಇವರ ಹಿರಿಯ ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕನ್ನಡ ಚಿತ್ರರಂಗದ ಯಶಸ್ವಿ ನಾಯಕನಟರು.
ತಂದೆ ರಾಜ್‌ಕುಮಾರ್ ಅವರ ಚಿತ್ರಗಳನ್ನು ನೋಡುತ್ತಾ, ಅವರ ಶೂಟಿಂಗ್ ಸೆಟ್‌ಗಳಿಗೆ ಭೇಟಿ ಕೊಡುತ್ತಿದ್ದ ಅಪ್ಪುಗೆ ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿಯಿತ್ತು. ಈ ಕಾರಣದಿಂದಲೇ ಬಾಲ ನಟನಾಗಿ ಚಿತ್ರರಂಗದಲ್ಲಿ ಅಳಿಸದ ಹೆಜ್ಜೆಗುರುತು ಮೂಡಿಸಿದ್ದಾರೆ.

ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಪ್ರೇಮದ ಕಾಣಿಕೆ, ಬೆಟ್ಟದ ಹೂವು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಭಕ್ತ ಪ್ರಹ್ಲಾದ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ ಸೇರಿದಂತೆ ಹಲವು ಚಿತ್ರಗಳ ಮೂಲಕ ಜನರ ಮನಗೆದ್ದಿದ್ದಾರೆ. ಪುನೀತ್ ಅವರ ಮೊದಲು ಹೆಸರು ಮಾ.ಲೋಹಿತ್.
ಪುನೀತ್ ನಟನೆಯ 1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರದ ರಾಮು ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಚಲಿಸುವ ಮೋಡಗಳು’ ಹಾಗೂ ‘ಎರಡು ಕನಸು’ ಚಿತ್ರಗಳಿಗಾಗಿ ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
![]()
ನಂತರ ಪುನೀತ್ 2002ರ ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಕಾಲಿಟ್ಟರು. ಅವರ ಅಭಿ, ಆಕಾಶ್, ಅರಸು, ಮಿಲನ, ಜಾಕಿ, ಹುಡುಗರು , ಅಣ್ಣಾ ಬಾಂಡ್, ಪವರ್, ಮೌರ್ಯ, ನಮ್ಮ ಬಸವ, ಪೃಥ್ವಿ, ವಂಶಿ, ರಾಜ್, ಪರಮಾತ್ಮ, ಯಾರೇ ಕೂಗಾಡಲಿ, ನಟ ಸಾರ್ವಭೌಮ, ರಾಜಕುಮಾರ, ಅಂಜನಿಪುತ್ರ, ರಣವಿಕ್ರಮ, ದೊಡ್ಮನೆ ಹುಡುಗ, ರಾಮ್, ನಿನ್ನಿಂದಲೇ, ಮೈತ್ರಿ, ಚಕ್ರವ್ಯೂಹ, ಯುವರತ್ನ ಸೇರಿದಂತೆ ಹಲವು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಚಿತ್ರ ನಿರ್ಮಾಪಕರಾಗಿ`ಕವಲುದಾರಿ’, ಮಾಯಾಬಜಾರ್’, ಫ್ರೆಂಚ್ ಬಿರಿಯಾನಿ, ಲಾ, ಫ್ಯಾಮಿಲಿ ಪ್ಯಾಕ್ ಎಂಬ ಚಿತ್ರಗಳನ್ನು ಪಿಆರ್‌ಕೆ ಪ್ರೊಡಕ್ಷನ್ ಎಂಬ ತಮ್ಮ ಹೋಮ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಜೊತೆಗೆ ಪ್ರೊಡಕ್ಷನ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿಗಳನ್ನು ಕೂಡ ನಿರ್ಮಿಸಿದ್ದಾರೆ. ತಾಯಿಯ ನೆನಪಿನಲ್ಲಿ`ಪಿ.ಆರ್.ಕೆ ‘ ಆಡಿಯೋ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.
ಇದರ ಜೊತೆಗೆ ಪ್ರಸಿದ್ಧ ಟಿವಿ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ, ಫ್ಯಾಮಿಲಿ ಪವರ್ ಶೋ ಗಳನ್ನು ನಿರೂಪಣೆ ಮಾಡಿದ್ದಾರೆ.
ಡಿಸೆಂಬರ್ 1 ,1999 ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್‌ರನ್ನು ವಿವಾಹವಾದರು. ಈ ದಂಪತಿಗೆ ಧೃತಿ ಮತ್ತು ವಂದಿತಾ ಎಂಬ ಪುತ್ರಿಯರಿದ್ದಾರೆ.

