ಹಸುಗಳನ್ನು ಶುಲ್ಕವಾಗಿ ಪಡೆಯುತ್ತಿದ್ದ ಕಾಲೇಜಿಗೆ ಬೀಗ!

ಕಾಲೇಜಿನಲ್ಲಿ ದಾಖಲಾತಿ ಪಡೆಯಲು ನಗದು ಶುಲ್ಕದ ಬದಲಾಗಿ ಹಸುಗಳನ್ನು ಶುಲ್ಕವಾಗಿ ಪಡೆಯುತ್ತಿದ್ದ ಬಿಹಾರದ ಬಕ್ಸಾರ್‌ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜನ್ನು ಬ್ಯಾಂಕ್‌ ಸಾಲವನ್ನು ಮರುಪಾವತಿ ಮಾಡದ ಆರೋಪದಲ್ಲಿ ಸೀಲ್‌ ಮಾಡಲಾಗಿದೆ.

ಬಕ್ಸಾರ್‌ನ ಏರಿಯಾನ್ ಗ್ರಾಮದಲ್ಲಿರುವ ವಿದ್ಯಾದಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (VITM) ಕಾಲೇಜನ್ನು 2010 ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಮಾಜಿ DRDO ವಿಜ್ಞಾನಿಗಳಾದ S.K. ಸಿಂಗ್ ಮತ್ತು ಅರುಣ ಕುಮಾರ್ ವರ್ಮಾ ಸೇರಿದಂತೆ ಕೆಲವು ವೃತ್ತಿಪರರ ಗುಂಪು ಈ ಕಾಲೇಜನ್ನು ಆರಂಭಿಸಿತ್ತು. ಈ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಬಿಟೆಕ್ ಕೋರ್ಸ್‌ಗೆ ಸೇರಲು ಐದು ಹಸುಗಳನ್ನು ಶುಲ್ಕವಾಗಿ ನೀಡಬೇಕಾಗಿತ್ತು.

ಪಾಟ್ನಾದ ಆರ್ಯಭಟ್ಟ ಜ್ಞಾನ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವ ಈ ಸಂಸ್ಥೆಯು ಹಸು-ಪಾವತಿ ಆಯ್ಕೆಯನ್ನು ನೀಡುವ ಮೂಲಕ ಏರಿಯಾನ್ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೊಸ ರೀತಿಯ ಕೋಲಾಹಲವನ್ನು ಉಂಟುಮಾಡಿತ್ತು. ವರ್ಷಕ್ಕೆ 72,000 ರೂಪಾಯಿಗಳ ವಾರ್ಷಿಕ ಶುಲ್ಕವನ್ನು ಪಾವತಿ ಮಾಡಲಾಗದ ವಿದ್ಯಾರ್ಥಿಗಳು ಮೊದಲ ವರ್ಷದಲ್ಲಿ ಎರಡು ಹಸುಗಳು ಮತ್ತು ಮುಂದಿನ ಮೂರು ವರ್ಷಗಳಲ್ಲಿ ತಲಾ ಒಂದು ಹಸುಗಳನ್ನು ನೀಡುವಂತೆ ಸಂಸ್ಥೆ ಅವಕಾಶ ಮಾಡಿಕೊಟ್ಟಿತ್ತು.

ಆದರೆ, 5.9 ಕೋಟಿ ರೂಪಾಯಿ ಸಾಲವನ್ನು ಮರಪಾವತಿ ಮಾಡದ ಕಾರಣಕ್ಕಾಘಿ ಸಂಸ್ಥೆಯನ್ನು ಬ್ಯಾಂಕ್ ಸೀಲ್‌ ಮಾಡಿದೆ. ಈಗ ಅದರ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವು ಅಸ್ಪಷ್ಟವಾಗಿದೆ.

ಇದನ್ನೂ ಓದಿ: ಟಿಎಂಸಿ ಎಂದರೆ ದೇವಾಲಯ, ಮಸೀದಿ, ಚರ್ಚ್; ಗೋವಾದಲ್ಲಿ ಮಮತಾ ಬ್ಯಾನರ್ಜಿ

“ಮಾಜಿ DRDO ವಿಜ್ಞಾನಿಗಳು, ವೈದ್ಯರು ಮತ್ತು ಪದವೀಧರರು ಸೇರಿದಂತೆ ನಮ್ಮಲ್ಲಿ ಹಲವರು ನಮ್ಮ ಹಳ್ಳಿಯಲ್ಲಿ ಶಿಕ್ಷಣ ನೀಡಬೇಕು ಎಂ ಉದ್ದೇಶದಿಂದ ಈ ಸಂಸ್ಥೆಯನ್ನು ತೆರೆದಿದ್ದೇವೆ. ಇದು ಬಕ್ಸರ್ ಮತ್ತು ವಾರಣಾಸಿ ನಡುವಿನ ಏಕೈಕ ಎಂಜಿನಿಯರಿಂಗ್ ಕಾಲೇಜು ಆಗಿದೆ. ನಮ್ಮ ಹಸುವಿನ ಪರಿಕಲ್ಪನೆ ತುಂಬಾ ಚೆನ್ನಾಗಿ ಕೆಲಸ ಮಾಡಿದೆ” ಎಂದು ವಿಐಟಿಎಂ ಪ್ರವರ್ತಕ ಎಸ್.ಕೆ. ಸಿಂಗ್ ತಿಳಿಸಿದ್ಧಾರೆ.

ಕಾಲೇಜು ನಡೆಸುತ್ತಿರುವ ವಿದ್ಯಾದಾನ ಸೊಸೈಟಿಯ ಮುಖ್ಯಸ್ಥರಾಗಿರುವ ಎಸ್.ಕೆ. ಸಿಂಗ್‌ ಪ್ರಕಾರ, ಪಾಟ್ನಾದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಕಾರ್ಪೊರೇಟ್ ಶಾಖೆಯು 2010 ರಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 4.65 ಕೋಟಿ ರೂ.ಗಳ ಆರಂಭಿಕ ಸಾಲವನ್ನು ಕಾಲೇಜಿಗೆ ಒದಗಿಸಿದೆ. ನಂತರ, ಅವರು 2011 ರಲ್ಲಿ 10 ಕೋಟಿ ರೂಪಾಯಿಗಳ ಮತ್ತೊಂದು ಸಾಲವನ್ನು ಮಂಜೂರು ಮಾಡಿದೆ. ಆದರೆ, ನಮಗೆ ಪಾವತಿ ಮಾಡಿಲ್ಲ. ಅಲ್ಲದೆ, ನಾವು 15 ಕೋಟಿ ರೂಪಾಯಿ ವೆಚ್ಚದ ಬಾಂಡ್ ಅನ್ನು ನೀಡಿದ್ದೇವೆ. ಆದರೆ, ನಮ್ಮ ಕಾಲೇಜು ಅಂಡರ್‌ ಫಂಡಿಂಗ್‌ಗೆ ಬಲಿಯಾಗಿದೆ” ಎಂದು ಹೇಳಿದ್ದಾರೆ.

“10 ಕೋಟಿ ರೂ. ಸಾಲವನ್ನು ನಮಗೆ ಪಾವತಿಸಲಾಗಿಲ್ಲ. ನಮ್ಮ ಯೋಜನೆಯು ನಷ್ಟವನ್ನು ಅನುಭವಿಸಿತು. ಆದಾಗ್ಯೂ, ನಾವು 2012 ರವರೆಗೆ EMI (ಆರಂಭಿಕ ಸಾಲದ ಮೊತ್ತ ರೂ 4.65 ಕೋಟಿ) ಮತ್ತು 2013 ರಲ್ಲಿ ಸ್ವಲ್ಪ ಹೆಚ್ಚುವರಿ ಮೊತ್ತವನ್ನು ಪಾವತಿಸಿದ್ದೇವೆ. ಆದರೂ, ಬ್ಯಾಂಕ್ ಸಾಲಗಳನ್ನು ಸಂಗ್ರಹಿಸಲು ಪ್ರಾರಂಭಿಸಿತು ಮತ್ತು ಕಾಲೇಜನ್ನು ಮುಚ್ಚಿತು. ಇದು ನೂರಾರು VITM ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಸವಾಲಾಗಿದೆ” ಸಿಂಗ್ ಹೇಳಿದ್ದಾರೆ.

“ನಾವು ಸಾಲ ಮರುಪಾವತಿಯನ್ನು ನಿರ್ವಹಿಸುತ್ತಿದ್ದೇವೆ. ಸಾಲ ಸಂಗ್ರಹದ ಭಾಗವಾಗಿ ನಾವು VITM ಅನ್ನು ನಿರ್ಬಂಧಿಸಿದ್ದೇವೆ” ಎಂದು ಪಾಟ್ನಾದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಏರಿಯಾ ಮ್ಯಾನೇಜರ್ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.

“ಇದು ಕಡಿಮೆ ಹಣದ ಪ್ರಕರಣವಲ್ಲ. ನಿರೀಕ್ಷಿತ ಮಟ್ಟದಲ್ಲಿ ಯೋಜನೆ ಪ್ರಗತಿಯಾಗದಿರುವುದನ್ನು ಕಂಡುಬಂದಿದೆ. ಅಲ್ಲದೆ, ಹೆಚ್ಚುವರಿ ಸಾಲ ಮರುಪಾವತಿಯಾಗಿಲ್ಲ. ನಾವು ಸಾಲ ನೀಡಲು ಒಪ್ಪಿದ್ದ ಮೊತ್ತ ತೃಪ್ತಿಯಾಗದಿದ್ದರೆ, ಕಾಲೇಜು ಬೇರೆ ಬ್ಯಾಂಕಿಗೆ ಹೋಗಬಹುದಿತ್ತು” ಎಂದು ಬ್ಯಾಂಕ್‌ನ ರವೀಂದ್ರ ಪ್ರಸಾದ್ ತಿಳಿಸಿದ್ದಾರೆ.

ಇಲ್ಲಿಯವರೆಗೆ, 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು VITM ನಿಂದ ಪದವಿ ಪಡೆದಿದ್ದಾರೆ. ಇವರಲ್ಲಿ ಸುಮಾರು 20 ಮಂದಿ ತಮ್ಮ ಶುಲ್ಕದ ಬದಲಾಗಿದೆ ಹಸುಗಳನ್ನು ನೀಡಿದ್ದಾರೆ. ಕಾಲೇಜಿನಲ್ಲಿ ಪದವಿ ಪಡೆದ ಅನೇಕರು ಭಾರತ ಮತ್ತು ವಿದೇಶಗಳಲ್ಲಿನ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮನೆಗೆ ತಲುಪಿದ ಸಾಮಗ್ರಿಗಳಲ್ಲಿ ಬೆಲೆಬಾಳುವ ವಸ್ತುಗಳು ನಾಪತ್ತೆ; ವಿಮಾನಯಾನ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.