ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ ಏಕಾಏಕಿ 266 ರೂ. ಹೆಚ್ಚಳ; ಸಿಲಿಂಡರ್‌ಗೆ 2000 ರೂ.!

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಏಕಾಏಕಿ 266 ರೂ ಹೆಚ್ಚಳವಾಗಿದೆ. ದೆಹಲಿಯಲ್ಲಿ 1734 ರೂ. ಇದ್ದ 19 ಕೆ.ಜಿ. ತೂಕದ ಸಿಲಿಂಡರ್‌ ಬೆಲೆಯು ಇಂದಿನಿಂದ 2000.50 ರೂಗೆ ಏರಿಕೆಯಾಗಿದೆ.

ಮುಂಬೈನಲ್ಲಿ 1683ರೂ ಇದ್ದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1950ರೂ ತಲುಪಿದೆ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 2073.50 ಆಗಿದೆ. ಚೆನ್ನೈನಲ್ಲಿ ಪ್ರಸ್ತುತ ಸಿಲಿಂಡರ್‌ ಬೆಲೆಯು 2133 ರೂಗೆ ಏರಿಕೆಯಾಗಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯ ಹೊರೆ ಸಹ ಎಲ್ಲಾ ಜನಸಾಮಾನ್ಯರಿಗೂ ಅನ್ವಹಿಸಲಿದೆ. ಇನ್ನು ಮುಂದೆ ಹೋಟೆಲ್ ಆಹಾರದ ಬೆಲೆ ಹೆಚ್ಚಳವಾಗುವ ಸಂಭವವಿದೆ.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಸಹ ಅಧಿಕವಾಗಿದೆ. ಸುಮಾರು 900 ರೂಗಳ ಆಸುಪಾಸಿನಲ್ಲಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ

ಸತತ ಆರನೇ ದಿನವೂ ದೇಶದಲ್ಲಿ ಪ್ರೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ತಲಾ 35 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 113.11 ರೂ ಹಾಗೂ ಡೀಸೆಲ್‌ ಬೆಲೆ 104.05 ರೂ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕ್ರಮವಾಗಿ 115.50 ರೂ ಮತ್ತು 106.62 ರೂ ಆಗಿದ್ದರೆ ಕೋಲ್ಕತ್ತಾದಲ್ಲಿ 110.15ರೂ ಮತ್ತು 101.56 ರೂ ಏರಿಕೆಯಾಗಿದೆ.

ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್‌, ಡೀಸೆಲ್ ಬೆಲೆ ದಾಖಲೆ ಮಟ್ಟಕ್ಕೇರಿದೆ. ಅಲ್ಲಿ ಪೆಟ್ರೋಲ್ 122.32 ಹಾಗೂ ಡೀಸೆಲ್‌ ಬೆಲೆ 113.21 ರೂ ತಲುಪಿದೆ. ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಪೆಟ್ರೊಲ್‌ ಬೆಲೆ ಪ್ರತಿ ಲೀಟರ್‌ಗೆ 120 ರೂ ದಾಟಿದೆ.

ಇನ್ನು ಪೆಟ್ರೊಲ್‌, ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತ್ರ ತಮ್ಮ ಬೊಕ್ಕಸ ತುಂಬಿಸಿಕೊಳ್ಳುವತ್ತ ಗಮನ ಹರಿಸಿರುವುದು ಶೋಚನೀಯ ಸಂಗತಿ. ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರವು ಪ್ರತಿ ಲೀಟರ್‌ಗೆ 32ರೂ ಮತ್ತು ರಾಜ್ಯ ಸರ್ಕಾರವು 27 ರೂ ಸುಂಕ ವಸೂಲಿ ಮಾಡುತ್ತಿದೆ. ಹಾಗೆಯೇ ಡೀಸೆಲ್ ಮೇಲೆ ಕೇಂದ್ರವು 31 ರೂ ಹಾಗೂ ರಾಜ್ಯವೂ 18 ರೂ ತೆರಿಗೆ ವಿಧಿಸುತ್ತಿದೆ.

ತರಕಾರಿ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗುತ್ತಿರುವ ಜನಸಾಮಾನ್ಯರಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂಧನ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರವಾಗಿದ್ದರೆ ಇಂಧನದ ಮೇಲೆ ವಿಧಿಸುತ್ತಿರುವ ತೆರಿಗೆಯನ್ನು ಪೂರ್ಣವಾಗಿ ಹಿಂಪಡೆಯಲಿ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: “ಕೇಂದ್ರ ಸರ್ಕಾರಕ್ಕೆ ನವೆಂಬರ್ 26ರವರೆಗೆ ಸಮಯವಿದೆ; ಇಲ್ಲದಿದ್ದರೆ…”: ಸರ್ಕಾರಕ್ಕೆ ರೈತ ಮುಖಂಡರ ಎಚ್ಚರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights