ರಾಜ್ಯಸಭಾ ಸಂಸದ ರಾಮಚಂದ್ರ ಜಾಂಗ್ರಾ ವಿರುದ್ದ ರೈತರ ಪ್ರತಿಭಟನೆ; ಪೊಲೀಸ್ ಲಾಠಿಚಾರ್ಜ್; ರೈತರ ಬಂಧನ
ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಂಗ್ರಾ ಅವರು ಹರ್ಯಾಣದ ಹಿಸಾರ್ ಜಿಲ್ಲೆಯ ನಾರ್ನಾಂಡ್ನಲ್ಲಿ ಧರ್ಮಶಾಲೆಯನ್ನು ಉದ್ಘಾಟಿಸಲು ಆಗಮಿಸುತ್ತಿದ್ದ ವೇಳೆ, ಅವರ ವಿರುದ್ದ ರೈತರು ಘೋಷಣೆಗಳನ್ನು ಕೂಗಿದ್ದು, ಕಪ್ಪು ಬಾವುಟವನ್ನು ಪ್ರದರ್ಶಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾರಾಮಾರಿ ನಡೆದಿದ್ದು, ಜಂಗ್ರಾ ಅವರ ಕಾರಿನ ಗಾಜು ಪುಡಿಪುಡಿಯಾಗಿದೆ. ಪೊಲೀಸರು ನಡೆಸಿದ ಲಾಠಿ ಚಾರ್ಜ್ನಲ್ಲಿ ಹಲವಾರು ರೈತರು ಗಾಯಗೊಂಡಿದ್ದಾರೆ. ಪೊಲೀಸರು ಹಲವು ರೈತರನ್ನೂ ವಶಕ್ಕೆ ಪಡೆದಿದ್ದಾರೆ.
ರೈತರು ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸಿ, ಬಿಜೆಪಿ ಸಂಸದರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧವೂ ಘೋಷಣೆ ಕೂಗಿದ್ದಾರೆ. ಕಾರ್ಯಕ್ರಮದ ಭಾಗವಾಗಿ ನಾರ್ನಾಂಡ್ನಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ರೈತರನ್ನು ತಡೆಯಲು ಪೊಲೀಸರು ಭಾರಿ ಬ್ಯಾರಿಕೇಡ್ಗಳನ್ನು ಹಾಕಿದ್ದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿದ್ದ ರೈತರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ರೈತ ಪ್ರತಿಭಟನಾಕಾರರು ಪೊಲೀಸರು ಮತ್ತು ಅರೆಸೈನಿಕ ಪಡೆಗಳೊಂದಿಗೆ ವಾಗ್ವಾದ ನಡೆಸಿದರು. ಇಡೀ ಘಟನೆಯಲ್ಲಿ ಒಬ್ಬ ಅರೆಸೇನಾ ಪಡೆಯ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
“ನನ್ನ ಕಾರ್ಯಕ್ರಮವನ್ನು ಮುಗಿಸಿ, ಮತ್ತೊಂದು ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕೆಲವರು ನನ್ನ ಕಾರಿನ ಮೇಲೆ ಲಾಠಿಗಳನ್ನು ಎಸೆದರು. ಕಾರನ್ನು ಹಾನಿಗೊಳಿಸಿದರು. ಯಾರಿಗೂ ಗಾಯವಾಗಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ನಾನು ಹರಿಯಾಣ ಡಿಜಿಪಿ ಮತ್ತು ಎಸ್ಪಿ ಅವರೊಂದಿಗೆ ಮಾತನಾಡಿದ್ದೇನೆ. ನಾನು ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದೇನೆ. ಇದು ಸ್ಪಷ್ಟವಾಗಿ ಕೊಲೆ ಯತ್ನವಾಗಿದೆ” ಎಂದು ಜಾಂಗ್ರಾ ಹೇಳಿದ್ದಾರೆ.
ಜಾಂಗ್ರಾ ಅವರು ನಿನ್ನೆ ರೋಹ್ಟಕ್ನ ಗೋಶಾಲೆಯಲ್ಲಿ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಆಗಲೂ ಇದೇ ರೀತಿಯ ಪ್ರತಿಭಟನೆಯನ್ನು ಎದುರಿಸಿದ್ದರು. ಕಾರ್ಯಕ್ರಮದ ನಂತರ ಪ್ರತಿಭಟನಾ ನಿರತ ರೈತರ ಬಗ್ಗೆ ಅವರು ನೀಡಿದ ಹೇಳಿಕೆಗಳು ಹಿಸಾರ್ನಲ್ಲಿ ಪ್ರತಿಭಟನೆ ನಡೆಸಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಜಾಂಗ್ರಾ ಅವರು ರೈತರನ್ನು “ಉದ್ಯೋಗವಿಲ್ಲದ ಮದ್ಯವ್ಯಸನಿಗಳು” ಎಂದು ಕರೆದಿದ್ದರು. ಅವರ ಈ ಹೇಳಿಕೆಯ ವಿರುದ್ದ ರೈತರು ಹಿಸಾರ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
“ಕೃಷಿ ಕಾನೂನಿಗೆ ಯಾವುದೇ ವಿರೋಧವಿಲ್ಲ. ಪ್ರತಿಭಟಿಸುವವರು ಹಳ್ಳಿಗಳ ನಿರುದ್ಯೋಗಿ ಮದ್ಯವ್ಯಸನಿಗಳು. ಅವರು ಇಂತಹ ಕೆಲಸಗಳನ್ನು ಮಾಡುತ್ತಲೇ ಇರುವ ಕೆಟ್ಟ ನಿದರ್ಶನಗಳಿವೆ. ಇತ್ತೀಚೆಗೆ ಸಿಂಘು ಗಡಿಯಲ್ಲಿ ಕೆಲವು ನಿಹಾಂಗ್ಗಳು ಅಮಾಯಕನನ್ನು ಕೊಂದಿರುವುದು ಈ ಕೆಟ್ಟ ನಿದರ್ಶನಗಳನ್ನು ಜನರಿಗೆ ಬಹಿರಂಗಪಡಿಸಿದೆ. ಅವರು ರೈತರಲ್ಲ” ಎಂದು ಜಾಂಗ್ರಾ ಅವರು ಹೇಳಿದ್ದರು.
ಹಲವು ರಾಜ್ಯಗಳ ರೈತರು ದೆಹಲಿಯ ಗಡಿಯಲ್ಲಿ ಸುಮಾರು ಒಂದು ವರ್ಷದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ – ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ- 2020; ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ- 2020; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ- 2020 ಎಂಬ ಮೂರು ಕಾಯ್ದೆಗಳ ವಿರುದ್ದ ರೈತರು ಸಿಡಿದೆದ್ದಿದ್ದಾರೆ.
ಇದನ್ನೂ ಓದಿ: “ಕೇಂದ್ರ ಸರ್ಕಾರಕ್ಕೆ ನವೆಂಬರ್ 26ರವರೆಗೆ ಸಮಯವಿದೆ; ಇಲ್ಲದಿದ್ದರೆ…”: ಸರ್ಕಾರಕ್ಕೆ ರೈತ ಮುಖಂಡರ ಎಚ್ಚರಿಕೆ!

