ನಿಲ್ಲದ ಮಳೆಯ ಅಬ್ಬರ; ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನ. 18 ರವರೆಗೆ ಭಾರೀ ಮಳೆ!

ಕೇರಳ, ದಕ್ಷಿಣ ಕರಾವಳಿ ಕರ್ನಾಟಕ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ನವೆಂಬರ್ 15 ರಿಂದ 18 ರವರೆಗೆ ‘ಧಾರಾಕಾರ ಮಳೆ’ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಕಳೆದ 15 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಎಲ್ಲಾ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಕರ್ನಾಟಕ, ಕೇರಳ, ಅಂಡಮಾನ್ ನಿಕೋಬಾರ್ ದ್ವೀಪಗಳು, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಕರಾವಳಿ ಭಾಗಗಳು ನವೆಂಬರ್ 18 ರವರೆಗೆ ಭಾರೀ ಮಳೆಗೆ ಸಾಕ್ಷಿಯಾಗಲಿವೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ.

ನವೆಂಬರ್ 17 ರ ಸುಮಾರಿಗೆ ದಕ್ಷಿಣ ಮಹಾರಾಷ್ಟ್ರ-ಗೋವಾ ಕರಾವಳಿಯ ಅರೇಬಿಯನ್ ಸಮುದ್ರದ ಮೇಲೆ ಹೊಸತಾಗಿ ವಾಯುಭಾರ ಕುಸಿತ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಇತ್ತೀಚಿನ ಬುಲೆಟಿನ್ ಹೇಳಿದೆ.

ಮಳೆ ಎಚ್ಚರಿಕೆಯ ಹಿನ್ನಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ತಿರುವನಂತಪುರದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಾಜ್ಯದ ಪತ್ತನಂತಿಟ್ಟ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಭಾರೀ ಮಳೆ: ಧರೆಗುರುಳಿದ ಮರಗಳು; ಕಾರುಗಳು ಸಂಪೂರ್ಣ ಖಜಂ

ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾಕಿ ಮತ್ತು ಇಡುಕ್ಕಿ ಅಣೆಕಟ್ಟುಗಳನ್ನು ತೆರೆಯಲಾಗಿದ್ದು, ವಿದ್ಯುತ್ ಮತ್ತು ಜಲ ಇಲಾಖೆಯಿಂದ ನಿರ್ವಹಿಸಲ್ಪಡುವ ವಿವಿಧ ಅಣೆಕಟ್ಟುಗಳಲ್ಲಿ ನಿಗಾವನ್ನು ತೀವ್ರಗೊಳಿಸಲಾಗಿದೆ.

ಕೇರಳದಲ್ಲಿ ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡಗಳಿದ್ದು, ನಾಲ್ಕನೇ ತಂಡ ನಾಳೆ ಬೆಳಗ್ಗೆ ಕೇರಳ ತಲುಪಲಿದೆ. ಅಗತ್ಯ ಬಿದ್ದರೆ ಕಣ್ಣೂರು ಮತ್ತು ವಯನಾಡು ಜಿಲ್ಲೆಗಳಿಗೆ ತೆರಳಲು ರಕ್ಷಣಾ ಸುರಕ್ಷಾ ದಳದ ಎರಡು ತಂಡಗಳು ಸಿದ್ಧವಾಗಿವೆ.

ಈ ಮಧ್ಯೆ, ತಮಿಳುನಾಡು,ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಹಾಗೂ ಕೇರಳದಲ್ಲಿ ನವೆಂಬರ್ 15 ರಿಂದ 17 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 15-16 ರಂದು ಗೋವಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ನವೆಂಬರ್ 16 ಮತ್ತು 17 ರಂದು ಒಡಿಶಾದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ನವೆಂಬರ್ 14 ಮತ್ತು 15 ರಂದು ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿ, ನವೆಂಬರ್ 16-18 ರ ಅವಧಿಯಲ್ಲಿ ಪಶ್ಚಿಮ-ಮಧ್ಯ ಮತ್ತು ಪಕ್ಕದ ಪೂರ್ವ-ಮಧ್ಯ ಬಂಗಾಳ ಕೊಲ್ಲಿ, ನವೆಂಬರ್ 17 ಮತ್ತು 18 ರಂದು ಆಂಧ್ರ ಪ್ರದೇಶ ಮತ್ತು ದಕ್ಷಿಣ ಒಡಿಶಾ ಮತ್ತು ಉತ್ತರ ತಮಿಳುನಾಡು ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರಿಕೆಗೆ ತೆರಳದಂತೆ ಸೂಚಿಸಿದೆ.

ಜೊತೆಗೆ, ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರಗಳಲ್ಲಿ ಮೀನುಗಾರಿಕೆಗೆ ತರಳಿರುವ ಮೀನುಗಾರರಿಗೆ ನವೆಂಬರ್ 15 ರೊಳಗೆ ಕರಾವಳಿಗೆ ಮರಳಲು ಇಲಾಖೆ ಸೂಚಿಸಿದೆ.

ಇದನ್ನೂ ಓದಿ: ಚಳಿಗಾಲದಲ್ಲೂ ಮಳೆಯ ಅಬ್ಬರ; ತುಂಬಿ ತುಳುಕುತ್ತಿವೆ ಡ್ಯಾಂಗಳು; ಜಲಾಶಯಗಳ ಇಂದಿನ‌‌ ನೀರಿನ ಮಟ್ಟ ಹೀಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights