FACT CHECK | ಅದಾನಿ ಸಂಸ್ಥೆ ಕೀನ್ಯಾದ ಅಧಿಕಾರಿಗಳಿಗೆ ಲಂಚ ನೀಡಿದೆ ಎಂದು ಸಂಸ್ಥೆಯೇ ಒಪ್ಪಿಕೊಂಡಿದೆಯೇ?
ಭ್ರಷ್ಟಾಚಾರ ಎಂಬುದು ಕೇವಲ ಭಾರತವನ್ನಲ್ಲ ಇಡೀ ಜಗತ್ತನ್ನೆ ಆವರಿಸಿದೆ. ಇಲ್ಲಿ ಹಣ ಉಳ್ಳವರು ತಮ್ಮ ಕೆಲಸಗಳು ತ್ವರಿತವಾಗಿ ಮಾಡಿಕೊಳ್ಳುವ ಸಲುವಾಗಿ ಅಧಿಕಾರಿಗಳಿಗೆ ಆಮಿಷ ಅಥವಾ ಲಂಚದ ರೂಪದಲ್ಲಿ ಹಣ ನೀಡುವುದನ್ನು ನೋಡಿದ್ದೇವೆ. ಅದೇ ರೀತಿ ಭಾರತದ ಅದಾನಿ ಗ್ರೂಪ್ ಕೀನ್ಯಾದಲ್ಲಿ ವಿಮಾನ ನಿಲ್ದಾಣ ನವೀಕರಣ ಮತ್ತು ವಿದ್ಯುತ್ ಸರಬರಾಜು ಮಾಡುವ ಯೋಜನೆಗಳು ಕೈ ತಪ್ಪದಂತೆ ನೋಡಿಕೊಳ್ಳಲ್ಲು ಲಂಚ ನೀಡಿರುವುದಾಗಿ ಹೇಳಿಕೊಂಡಿದೆ ಎಂದು ಪ್ರತಿಪಾದಿಸಿ ಪತ್ರಿಕಾ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ತಾವು ಯಾವೆಲ್ಲ ಅಧಿಕಾರಿಗಳಿಗೆ ಲಂಚದ ಹಣ ನೀಡಿದ್ದೇವೆ ಎಂಬುದನ್ನು ಅತೀ ಶೀಘ್ರದಲ್ಲಿ ಬಯಲು ಮಾಡಲಿದ್ದೇವೆ ಎಂದು ಹೇಳಿಕೊಂಡಿದೆ. ಇದು ಒಂದು ಕಡೆ ಕೀನ್ಯಾದಲ್ಲಿ ರಾಜಕೀಯ ತಿರುವನ್ನು ಪಡೆದುಕೊಂಡರೆ. ಮತ್ತೊಂದು ಕಡೆ ಭಾರತದಲ್ಲೂ ಅದಾನಿ ಸಮೂಹ ಎಷ್ಟು ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡಿರಬೇಡ ಎಂದು ನೀವೆ ಊಹಿಸಿ” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಅದಾನಿ ಸಮೂಹದ ಅಧಿಕೃತ ತಲೆ ಬರಹ ಹೊಂದಿರುವ ಪತ್ರಿಕಾ ಪ್ರಕಟಣೆಯ ಪತ್ರವೇ ಇದ್ದು, ಈ ಪತ್ರ ಅದಾನಿ ಸಮೂಹದ ನೈಜ ಪತ್ರಿಕಾ ಹೇಳಿಕೆಯಂತೆ ಕಂಡು ಬಂದಿರುವುದರಿಂದ ಹಲವರು ಈ ಪೋಸ್ಟ್ ಅನ್ನು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ. ಹಲವರು ಅದಾನಿ ಸಮೂಹದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹಾಗಿದ್ದರೆ ಅದಾನಿ ಗ್ರೂಪ್ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರಿಕಾ ಹೇಳಿಕೆಯ ಸತ್ಯಾಸತ್ಯೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಅದಾನಿ ಗ್ರೂಪ್ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರಿಕಾ ಹೇಳಿಕೆಯ ಸತ್ಯಾಸತ್ಯೆಯನ್ನು ಪರಿಶೀಲಿಸಲು ಅದಾನಿ ಗ್ರೂಪ್‌ನ ಅಧಿಕೃತ ವೆಬ್‌ಸೈಟ್ ಅನ್ನು ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ನಲ್ಲಿ ಕಂಡು ಬಂದ ಪತ್ರಿಕಾ ಪ್ರಕಟಣೆಯ ಕುರಿತು ಯಾವುದೇ ಮಾಹಿತಿಯನ್ನು ಅದಾನಿ ಗ್ರೂಪ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರಲಿಲ್ಲ.
ಈ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಕೀ ವರ್ಡ್‌ಗಳನ್ನು ಬಳಸಿಕೊಂಡು ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಸರ್ಚ್ ಮಾಡಿದಾಗ. 16 ಸೆಪ್ಟೆಂಬರ್ 2024ರಂದು ಅದಾನಿ ಸಮೂಹ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದು ” ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪತ್ರಿಕಾ ಹೇಳಿಕೆಗೂ ಅದಾನಿ ಸಮೂಹಕ್ಕೂ ಯಾವುದೇ ಸಂಬಂಧಿವಿಲ್ಲ. ಹಾಗಾಗಿ ಈ ವೈರಲ್ ಪೋಸ್ಟ್ ಅನ್ನು ನಂಬಬೇಡಿ” ಎಂದು ಮನವಿಯನ್ನು ಮಾಡಿಕೊಂಡಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಅದಾನಿ ಗ್ರೂಪ್ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ಪತ್ರಿಕಾ ಪ್ರಕಟಣೆ ನಕಲಿ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅದಾನಿ ಸಮೂಹ ಸಂಸ್ಥೆ ಕೀನ್ಯಾದಲ್ಲಿ ಕೈಗೊಳ್ಳಲಿರುವ ಯೋಜನೆಗಳು ಕೈತಪ್ಪದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಲಂಚವನ್ನು ನೀಡಿರುವುದನ್ನು ಒಪ್ಪಿಕೊಂಡಿದೆ ಎಂಬ ಪತ್ರಿಕಾ ಪ್ರಕಟಣೆ ನಕಲಿಯಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಗಡ್ಡಧಾರಿ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುವ ವಿಡಿಯೋದಲ್ಲಿರುವ ದೃಶ್ಯ ನೈಜ ಘಟನೆಯಲ್ಲ! ಮತ್ತೇನು?