ರಮೇಶ್ ರಾಸಲೀಲೆ ಪ್ರಕರಣ: ಮಿತ್ರ ಮಂಡಳಿ ಶಾಸಕರಿಗೆ ಆತಂಕ ಯಾಕೆ?

ಕುಂಬಳ ಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡ ಎನ್ನುವಂತೆ ಮಿತ್ರ ಮಂಡಳಿ ಸಚಿವರ ಕಥೆಯಾಗಿದೆ. ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಕೂತರೂ ನಿಂತರೂ ಸಚಿವರಿಗೆ ಸಿಡಿಯದ್ದೇ ಜ್ಞಾನ ಮಾಡುವಂತಾಗಿದೆ.

ಮಿತ್ರ ಮಂಡಳಿ ಸಚಿವರಿಗೆ ಆತಂಕ ಯಾಕೆ?

ಅಲ್ಲಾ ರೀ ಇದೇನ್ ರಿ ಇದು ಕರ್ಮಾ….? ಯಾರದ್ದೋ ಸಿಡಿ ಬಿಡುಗಡೆಯಾದರೆ ಇನ್ನುಳಿದ ಸಚಿರು ಯಾಕೆ ಕೋರ್ಟ್ ಮೊರೆ ಹೋಗಿ ಮಾದ್ಯಮಗಳಲ್ಲಿ ಮಾನಹಾನಿಕಾರಕ ವೀಡಿಯೋಗಳನ್ನು ಸುದ್ದಿಗಳನ್ನ ಪ್ರಸಾರ ಮಾಡಬಾರದು ಅಂತ ಮನವಿ ಸಲ್ಲಿಸುತ್ತಿದ್ದಾರೆ? ರಮೇಶ್ ಜಾರಕಿಹೊಳಿ  ಮಿತ್ರರು. ಅವರು ತಪ್ಪು ಮಾಡಿಲ್ಲ ಅನ್ನೋದು ಒಂದು ಅರ್ಥ ಇದೆ. ಅಥವಾ ಅವರು ತಪ್ಪು ಮಾಡಿಲ್ಲಾ ಅನ್ನೋದನ್ನ ನಾವು ಪ್ರೂ ಮಾಡ್ತೀವಿ ಅಂತ ಹೇಳಿದ್ರೆ ಒಪ್ಪೋಣ. ಇದ್ಯಾವುದು ಬೇಡ ಮಾರಾಯಾ ಸಿಬಿಐ ತನಿಖೆ ಮಾಡಲಿ ಅಂದ್ರೂ ಓಕೆ. ಇದೆಲ್ಲವನ್ನ ಬಿಟ್ಟು ನನ್ನ ಸಿಡಿ ಬಿಡಗಡೆ ಮಾಡಬೇಡಿ , ನನ್ನ ಸಿಡಿ ಬಿಡುಗಡೆ ಮಾಡಬೇಡಿ ಅಂತ ಮಾಧ್ಯಮದ ಮುಂದೆ ತಾವಾಗೇ ಬಂದು ನಿಂತಾಗಿದೆ ಸಚಿವರ ಪರಿಸ್ಥಿತಿ.

ಇವರೇನಾ ಅವರು..?

ಕೋರ್ಟ್ ಮೊರೆ ಹೋಗಿ ತಮ್ಮ ಹಳ್ಳ ತಾವೇ ತೋಡಿಕೊಂಡಂತಾಗಿದೆ. ಸ್ಪಲ್ಪ ಮರ್ಯಾದಿ ಹೋದ್ರು ಪರವಾಗಿಲ್ಲ. ಸಿಡಿ ಗೀಡಿ ಬಿಡುಗಡೆಯಾಗಿ ರಮೇಶ್ ಜಾರಕಿಹೊಳಿ ತರ ಪೂರ್ತಿ ಮಾನ ಹೋಗಿಬಿಟ್ಟಾತೂ ಅಂತ ಭಯ ಶುರುವಾಗಿದಿಯೋ ಏನೋ..? ಹೀಗಾಗಿ ಬಾಂಬೆ ಫ್ರೆಂಡ್ಸ್ ಒಟ್ಟೊಟ್ಟಿಗೆ ಕೋರ್ಟ್ ಮೊರೆ ಹೋಗಿದ್ದಾರೆ. ಮಾದ್ಯಮದಲ್ಲಿ ತೇಜೋವಧೆ ಮಾಡುವಂತಹ ವೀಡಿಯೋವಾಗಲಿ, ಫೋಟೋಗಳನ್ನಾಗಿ ಬಿಡುಗಡೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ಇನ್ನಷ್ಟು ಸಚಿವರ ರಾಸಲೀಲೆ ಸಿಡಿಗಳು ಇವೆ ಎನ್ನುವ ವಿಚಾರಕ್ಕೆ ಪುಷ್ಠಿ ನೀಡುವುದು ಮಾತ್ರವಲ್ಲ, ಇವರೇನಾ ಅವರು? ಇವರೇನಾ ಅವರು ಎನ್ನುವುದು ಎಲ್ಲರಲ್ಲೂ ಪ್ರಶ್ನೆ ಮೂಡುತ್ತಿದೆ.

ಮೈತ್ರಿ ಸರ್ಕಾರ ಬಿಟ್ಟು ಬಿಜೆಪಿ ಸೇರಿದವರೇ ಈ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಕ್ರೀಡಾ ಸಚಿವ ಕೆ.ಸಿ ನಾರಾಯಣ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್,ಬಿಸಿ ಪಾಟೀಲ್ ಕೃಷಿ ಸಚಿವ, ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಮತ್ತಷ್ಟು ಸಚಿವರು ಈ ಲಿಸ್ಟ್ ಗೆ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಸುಳಿವು ಕೂಡ ಎಸ್ ಟಿ ಸೋಮಶೇಖರ್ ನೀಡಿದ್ದಾರೆ.

ಇನ್ನಷ್ಟು ರಾಸಲೀಲೆ ಸಿಡಿ ಯಾವವು?

ರಾಜ್ಯ ರಾಜಕಾರಣದಲ್ಲಿ ಶಾಸಕ ಸಚಿವರ ನಿದ್ದೆಗೆಡಿಸಿದ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಗಾಢವಾದ ನಿದ್ದೆಲ್ಲೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ದಿನ ಬೆಳಗಾದರೂ ಸಿಡಿಯದ್ದೇ ಮಾತು, ಸಿಡಿಯದ್ದೇ ದೃಶ್ಯ. ಹೀಗಾದರೆ ನನ್ನ ಗತಿ ಏನು ಎನ್ನುವ ಆತಂಕ? ಮಿತ್ರ ಮಂಡಳಿ ಶಾಸಕರಿಗೆ ಸಚಿವರಿಗೆ ಕಾಡುತ್ತಿದೆ.

ರಮೇಶ್ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಇನ್ನಷ್ಟು ಸಿಡಿಗಳು ಬಹಿರಂಗಗೊಳ್ಳುವ ಮಾತುಗಳು ಕೇಳಿ ಬರುತ್ತಿದ್ದಂತೆ ಶಾಸಕರು ಸಚಿರು ತಣ್ಣಗಾಗಿ ಹೋಗಿದ್ದಾರೆ. ರಮೇಶ್ ರಂತೆ ಸಿಡಿ ಬಿಡುಗಡೆಯಾದರೆ ಉಳಿಗಾಲ ಇದಿಯಾ? ಎನ್ನುವ ಭಯ ಕಾಡತೊಡಗಿದೆ. ಹೀಗಾಗಿನೇ ಏನೋ ಮಾದ್ಯಮದಲ್ಲಿ ಮಾನಹಾನಿಕರ ವೀಡಿಯೋಗಳನ್ನು ಬಿಡುಗಡೆ ಮಾಡದಂತೆ ಮುಂಚಿತವಾಗಿಯೇ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆನೋ ಎನ್ನುವ ಶಂಕೆ ಶುರುವಾಗಿದೆ.

ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದರೆ ಇವರಿಗ್ಯಾಕೆ ಆತಂಕ? ಇವರು ಯಾಕೆ ಮಾನಹಾನಿ ವೀಡಿಯೋಗಳನ್ನು ಬಿಡುಗಡೆ ಮಾಡದಂತೆ ಕೋರ್ಟ್ ಮೊರೆ ಹೋಗಬೇಕು? ಇವರು ತಪ್ಪೇ ಮಾಡಿಲ್ಲ ಅಂದರೆ ಕೋರ್ಟ್ ಮೆಟ್ಟಿಲೇರುವ ಅವಶ್ಯಕತೆ ಇದಿಯಾ? ಯಾರೇ ಷಡ್ಯಂತ್ರ ಮಾಡಿದ್ರು ತನಿಖೆಯಿಂದ ಸತ್ಯಾಸತ್ಯತೆ ಬಯಲು ಮಾಡಬಹುದು ಅಲ್ಲವೇ..? ಅದ್ರಲ್ಲೂ ತಮ್ಮದೇ ಆದ ಸರ್ಕಾರ ಆಡಳಿತದಲ್ಲಿರುವಾಗ ಶಾಸಕರು ಹಾಗೂ ಸಚಿವರಿಗೆ ಆತಂಕ ಪಡಬೇಕು ಯಾಕೆ..? ಅಂದ್ರೆ ಏನಾದ್ರು ಇದೇ ತರಹದ ಘಟನೆಗಳು ನಡೆದಿದಿಯಾ..? ಅದನ್ನು ಮುಚ್ಚಿಡಲು ಮಿತ್ರಿ ಮಂಡಳಿ ಶಾಸಕರು ಪ್ರಯತ್ನ ಪಡುತ್ತಿದ್ದಾರಾ..? ಇಂತೆಲ್ಲಾ ಪ್ರಶ್ನೆಗಳು ಜನ ಸಾಮಾನ್ಯರಲ್ಲಿ ಕಾಡ ತೊಡಗಿದೆ. 6 ಸಚಿವರುಗಳು ಕೋರ್ಟ್ ಮೆಟ್ಟಿಲು ಹತ್ತಿರುವುದು ಇನ್ನಷ್ಟು ಸಿಡಿಗಳು ಇವೆಯಾ ಎನ್ನುವ ಗೊಂದಲ ಸೃಷ್ಟಿ ಮಾಡಿದೆ.

ಮಿತ್ರ ಮಂಡಳಿ ಶಾಸಕರಿಗೆ ಟಾರ್ಗೇಟ್ ಭಯ..!

ಯಾವಾಗ 17 ಜನ ಮೈತ್ರಿ ಸರ್ಕಾರದಿಂದ ಹೊರಗಡೆ ಕಾಲಿಟ್ಟರೋ ಆಗಿನಿಂದಲೂ ಒಂದಲ್ಲಾ ಒಂದು ಮಿತ್ರ ಮಂಡಳಿ ಶಾಸಕರಿಗೆ ಟೆನ್ಶನ್ ಶುರುವಾಗಿದೆ. ತಮ್ಮನ್ನ ಟಾರ್ಗೇಟ್ ಮಾಡುತ್ತಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ. ಬಾಂಬೆ ಹೋಗಿ ಕುಳಿತು ಮೈತ್ರಿ ಸರ್ಕಾರ ಬೀಳಲು ಕಾರಣೀಕರ್ತರಾದ ಶಾಸಕರು ಟಾರ್ಗೇಟ್ ಆಗುತ್ತಿದ್ದಾರೆಂದು ಆತಂಕ ಶುರುವಾಗಿದೆ. ಕಾಂಗ್ರೆಸ್ ನವರೇ ನಮ್ಮನ್ನ ಟಾರ್ಗೇಟ್ ಮಾಡುತ್ತಿದ್ದಾರೆಂದು ಅನುಮಾನ ವ್ಯಕ್ತಪಡಿದ್ದಾರೆ.

ಎರಡೂ ಕಡೆ ಫುಟ್ಬಾಲ್ ನಂತಾದ ಶಾಸಕರು…!

ಮೈತ್ರಿ ಸರ್ಕಾರ ಬೀಳಿಸುತ್ತಿದ್ದಂತೆ ಬಾಂಬೆ ಫ್ರೆಂಡ್ಸ್ ಗೆ ಬೆಂಕಿ ಕೆಂಡದ ಮೇಲೆ ಕುಳಿತಂತಾಗಿದೆ. ಒಂದಲ್ಲಾ ಒಂದು ಘಟನೆಯಲ್ಲಿ ಸಿಲುಕಿ ಫುಟ್ಬಾಲ್ ನಂತಾಗಿದ್ದಾರೆ. ಮೈತ್ರಿ ಸರ್ಕಾರ ಬಿಟ್ಟು ಸಚಿವ ಸ್ಥಾನ ಪಡೆಯುವಾಗಲೂ ಮೂಲ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಜೊತೆಗೆ ಮೈತ್ರಿ ಸರ್ಕಾರ ಬೀಳಿಸಿದಕ್ಕೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದಲೂ ಶಪಿಸಲ್ಪಟ್ಟಿದ್ರು. ಇದೇ ಶಾಪವೋ ಏನೋ ಮಿತ್ರ ಮಂಡಳಿ ಶಾಸಕರಿಗೆ ನೆಮ್ಮದಿ ಹಾಳು ಮಾಡಿದೆ. ಹೀಗಾಗಿ ವಲಸೆ ಬಿಜೆಪಿಗರು ಅತ್ತ ಬಿಜೆಪಿಗೂ ಬೇಡವಾಗಿ ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಗೂ ಬೇಡವಾಗಿ ಹೋಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಒಟ್ಟಿನಲ್ಲಿ ಮಿತ್ರ ಮಂಡಳಿ ಶಾಸಕರಿಗೆ ಪೇಚೆಗೆ ಸಿಲುಕಿದಂತಾಗಿದೆ. ಈ ಬೆಳವಣಿಗೆ ಯಾವ ಹಂತಕ್ಕೆ ತಲುಪುತ್ತದೆ? ರಾಜ್ಯದ ಜನ ಇನ್ಯಾವ ಕಾಮ ಕಾಂಡಗಳನ್ನು ನೋಡಬೇಕಾದ ದುಸ್ಥಿತಿಗೆ ಬರಬೇಕಾಗುತ್ತೋ ಗೊತ್ತಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights