ಟೈಮ್ಸ್‌ ನೌ ಪಕ್ಷಪಾತ: ದೆಹಲಿ ಗಲಭೆ ಕುರಿತ 2 ಸುದ್ದಿಗಳನ್ನು ಡಿಲೀಟ್‌ ಮಾಡುವಂತೆ NBDSA ಆದೇಶ!

ಫೆಬ್ರವರಿ 2020ರಲ್ಲಿ ನಡೆದ ದೆಹಲಿ ಗಲಭೆಯ ವಿಚಾರವಾಗಿ ಸುದ್ದಿ ಪ್ರಸಾರ ಮಾಡಿದ್ದ ಟೈಮ್ಸ್‌ ನೌ ಸುದ್ದಿ ವಾಹಿನಿಯು ಎಡಪಂಥೀಯರ ಕೈವಾಡವಿದೆ ಎಂದು ಎರಡು ಸುಳ್ಳು ಸುದ್ದಿ ಬಿತ್ತರಿಸಿತ್ತು. ಇದನ್ನು ಗಮನಿಸಿರುವ ನ್ಯಾಷನಲ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA)ಯು ಆ ಎರಡು ವಿವಾದಾತ್ಮಕ ಚರ್ಚೆಗಳನ್ನು ತಮ್ಮ ಚಾನಲ್ ಮತ್ತು ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ಟೈಮ್ಸ್‌ ನೌಗೆ ಸೂಚನೆ ನೀಡಿದೆ. ಆ ಸುದ್ದಿಗಳನ್ನು “ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ರೀತಿಯಲ್ಲಿ” ವರದಿ ಮಾಡಲಾಗಿಲ್ಲ ಎಂದು ಪ್ರಧಿಕಾರ ಹೇಳಿದೆ.

‘ಇಂಡಿಯಾ ಅಪ್‌ಫ್ರಂಟ್’ ಕಾರ್ಯಕ್ರಮವನ್ನು ಆಯೋಜಿಸಿದ್ದ ಟೈಮ್ಸ್‌ ನೌನ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್ ಅವರು, ಸೆಪ್ಟೆಂಬರ್ 14ರಂದು “ಎಡಪಂಥೀಯರ ರಹಸ್ಯ ಸಭೆ” ಎಂದು ಸುದ್ದಿ ಕಾರ್ಯಕ್ರಮ ಮಾಡಿದ್ದರು. ಈ ಬಗ್ಗೆ NBDSA ದೂರು ನೀಡಿದ್ದ ಉತ್ಕರ್ಷ್ ಮಿಶ್ರಾ ಅವರು ಟೈಮ್ಸ್‌ ನೌನಲ್ಲಿ ಹೇಳಲಾದ ಎಡಪಂತೀಯ ಸಭೆಯು ವಾಸ್ತವವಾಗಿ ಜೂಮ್‌ ವೆಬ್‌ನಾರ್ ಆಗಿತ್ತು. ಆ ವೆಬಿನಾರ್‌ಅನ್ನು ಫೇಸ್‌ಬುಕ್‌ನಲ್ಲಿ ಲೈವ್ ಮಾಡಿ, ವೀಡಿಯೊ ಅಪ್‌ಲೋಡ್ ಮಾಡಲಾಗಿದೆ. ಆದರೆ, “ಟೈಮ್ಸ್‌ ನೌ ಪ್ರಸಾರಕರು ವೀಕ್ಷಕರನ್ನು ದಾರಿತಪ್ಪಿಸಲು, ಸಮುದಾಯಗಳ ನಡುವೆ ದ್ವೇಷವನ್ನು ಬೆಳೆಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ” ಎಂದು ತಿಳಿಸಿದ್ದರು.

ಈ ಚರ್ಚೆಗಳನ್ನು ನಿರೂಪಕರಾದ ರಾಹುಲ್ ಶಿವಶಂಕರ್ ಮತ್ತು ಪದ್ಮಜಾ ಜೋಶಿಯವರು ನಡೆಸುತ್ತಿದ್ದರು. ಆಂಕರ್‌ಗಳು “ನೈತಿಕ ಸಂಹಿತೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಾನದಂಡಗಳು ಮತ್ತು NBDSA ಹೊರಡಿಸಿದ ವಿವಿಧ ಮಾರ್ಗಸೂಚಿಗಳಲ್ಲಿ ನಮೂದಿಸಲಾದ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದ್ದಾರೆ” ಎಂದು NBDSA ಘೋಷಿಸಿದೆ.

ಇದನ್ನೂ ಓದಿ: ಗೋಸ್ವಾಮಿಯನ್ನು ಸಮರ್ಥಿಸಿಕೊಳ್ಳಲು ಸುಳ್ಳು ಸುದ್ದಿ ಪ್ರಕಟಿಸಿದ OpIndia ಸುದ್ದಿಸೈಟ್!‌

ಸೆಪ್ಟೆಂಬರ್ 14, 2020 ಮತ್ತು ಸೆಪ್ಟೆಂಬರ್ 23, 2020 ರಂದು ಟೌಮ್ಸ್‌ ನೌನ ಇಂಡಿಯಾ ಅಪ್‌ಫ್ರಂಟ್‌ನ ಎರಡು ಸಂಚಿಕೆಗಳನ್ನು ತೆಗೆದು ಹಾಕಬೇಕು. ಈ ಬಗ್ಗೆ, ಏಳು ದಿನಗಳೊಳಗೆ ಲಿಖಿತವಾಗಿ ದೃಢೀಕರಣವನ್ನು ಕಳುಹಿಸಬೇಕು” ಎಂದು NBDSA ಆದೇಶ ನೀಡಿದೆ.

ಶಿವಶಂಕರ್ ಅವರು “ರಹಸ್ಯ ಎಡಪಂಥೀಯರ ಸಭೆ” ಎಂದು ಸುಳ್ಳು ಹೇಳಿಕೆಗಳನ್ನು ನೀಡಿದ್ದು ಮಾತ್ರವಲ್ಲದೆ, ಗಲಭೆಯ ಸಮಯದಲ್ಲಿ ನ್ಯಾಯಾಂಗ ದೆಹಲಿ ಪೊಲೀಸರ ಕ್ರಮ ಮತ್ತು ಉದ್ದೇಶವನ್ನು ಪ್ರಶ್ನಿಸಿದ್ದು ಸೇರಿದಂತೆ, ಇತರ ಚಾನೆಲ್‌ಗಳಲ್ಲಿ ವರದಿಯಾದ ಸತ್ಯಗಳನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ  ಎಂದು ದೂರುದಾರರು ಆರೋಪಿಸಿದ್ದಾರೆ.

ಮಿಶ್ರಾ ಅವರು, “ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ದೆಹಲಿ ಪೊಲೀಸರು ಪರಿಶೀಲಿಸದೇ ಮಾಡಿದ್ದ ಆರೋಪಗಳನ್ನು ಮಾತ್ರ ಚಾನೆಲ್ ವರದಿ ಮಾಡಿದೆ. ಚಾನೆಲ್‌ನ ಆಂತರಿಕ ಭದ್ರತಾ ಸಂಪಾದಕರು ಇಡೀ ವಿಷಯದಲ್ಲಿ ದೆಹಲಿ ಪೊಲೀಸರ ಪಾತ್ರವನ್ನು ನ್ಯಾಯಾಂಗವು ಪ್ರಶ್ನಿಸಿದ್ದರೂ ಸಹ, ಪೊಲೀಸರ ನಡೆಯನ್ನು ಮೌಲ್ಯೀಕರಿಸಲು ಮುಂದಾಗಿದ್ದಾರೆ.

“ಈ ವಿಷಯದ ಬಗ್ಗೆ ವೀಕ್ಷಕರು ಸತ್ಯಾಧಾರಿತ ದೃಷ್ಟಿಕೋನವನ್ನು ಪಡೆದುಕೊಳ್ಳಲು “ವಾಹಿನಿಯು ಅಡ್ಡಿಪಡಿಸಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಇದಲ್ಲದೆ, ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಅಪಖ್ಯಾತಿಗೊಳಿಸಲು ಜೋಶಿ ಪ್ರಯತ್ನಿಸಿದ್ದಾರೆ ಮತ್ತು “ವಿವಾದಾತ್ಮಕ ವಿಷಯದ ಒಂದು ಬದಿಯ ಪರವಾಗಿ ಮತ್ತು ಮತ್ತೊಂದು ಬದಿಗೆ ಅಡ್ಡಿಪಡಿಸಲು ಮಾಧ್ಯಮ ಪ್ರಯೋಗ ನಡೆದಿದೆ” ಎಂದು ಆದೇಶ ಹೇಳಿದೆ.

ಆದರೆ ಟೈಮ್ಸ್ ನೌ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ…. “ದೂರುದಾರರು ಅದೇ ಆ್ಯಂಕರ್‌ಗಳು/ಪತ್ರಕರ್ತರ ವಿರುದ್ಧ ಪದೇ ಪದೇ ಅನಗತ್ಯ ಮತ್ತು ಕ್ಷುಲ್ಲಕ ದೂರುಗಳನ್ನು ಮಾಡುತ್ತಿದ್ದಾರೆ…” ಎಂದು ಚಾನೆಲ್ ಹೇಳಿದೆ. ಆದರೆ, ಎನ್‌ಬಿಡಿಎಸ್‌ಎ ಚಾನೆಲ್‌ನ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ನೋಟಿಸ್ ನೀಡಿದೆ.

ಇದನ್ನೂ ಓದಿ: ‘ಯೋಗಿ ಸರ್ಕಾರವನ್ನು ಟೈಮ್ಸ್‌ ಮ್ಯಾಗಜಿನ್ ಹೊಗಳಿದೆ’; ಸುಳ್ಳು ಸುದ್ದಿ ಪ್ರಸಾರ ಮಾಡಿದ ಭಾರತೀಯ ಮಾಧ್ಯಮಗಳು

Spread the love

Leave a Reply

Your email address will not be published. Required fields are marked *