ಪೊಲೀಸ್ ಠಾಣೆಯಿಂದ ಮರಳಿದ ಯುವತಿ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಪೊಲೀಸ್ ಅಧಿಕಾರಿ, ಗಂಡ, ಅತ್ತೆಯ ಹೆಸರು ಉಲ್ಲೇಖ
ಕೌಟುಂಬಿಕ ಹಿಂಸಾಚಾರದಿಂದ ಮನನೊಂದ ಯುವತಿಯೊಬ್ಬರು ಸಾವನ್ನಪ್ಪಿದ್ದ ಮತ್ತೊಂದು ಪ್ರಕರಣ ಕೇರಳದಲ್ಲಿ ವರದಿಯಾಗಿದೆ. ಪೋಲೀಸ್ ಠಾಣೆಯಿಂದ ಮನೆಗೆ ಮರಳಿದ 21 ವರ್ಷದ ಯುವತಿ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಪತ್ರದಲ್ಲಿ ಆಕೆಯ ಪತಿ, ಅತ್ತೆ ಮತ್ತು ಆಲುವಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಹೆಚ್ಒ) ಅವರ ಹೆಸರನ್ನು ಉಲ್ಲೇಖಿಸಿದ್ಧಾರೆ.
ಅಲುವಾ ಬಳಿಯ ಎಡಯಪುರಂ ನಿವಾಸಿ ಮೋಫಿಯಾ ಪರ್ವೀನ್ ಅವರು ತನ್ನ ಪತಿ ಸುಹೇಲ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಮಾನಸಿಕ ಹಿಂಸೆಯ ಆರೋಪದ ಮೇಲೆ ಅಲುವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಲು ನಿರಾಕರಿಸಿದ ಪೊಲೀಸರು ಸಂಧಾನ ಮಾಡಿಕೊಳ್ಳುವಂತೆ ಹೇಳಿದ್ದರು.
ಪ್ರಕರಣವನ್ನು ಇತ್ಯರ್ಥಪಡಿಸಲು ಆಲುವಾ ಪೊಲೀಸರು ಮೊಫಿಯಾ ಮತ್ತು ಅವರ ಪತಿ ಸುಹೇಲ್ ಅವರನ್ನು ಸೋಮವಾರ ಠಾಣೆಗೆ ಕರೆಸಿದ್ದಾರೆ. ವಾಗ್ವಾದದ ಸಂದರ್ಭದಲ್ಲಿ ಮೋಫಿಯಾ ಅವರು ಸುಹೇಲ್ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕೋಪಗೊಂಡ ಎಸ್ಎಚ್ಒ ಅವರು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ, ಠಾಣೆಯಲ್ಲಿ ಈ ರೀತಿ ನಡೆದುಕೊಂಡರೆ ತನ್ನ ವಿರುದ್ದವೇ ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದಾರೆ. ಇದರಿಂದ ಮನನೊಂದ ಆಕೆ ಮನೆಗೆ ಮರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ಧಾರೆ.
ಏತನ್ಮಧ್ಯೆ, ಆಕೆ ತಂದೆಗೆ ಆತ್ಮಹತ್ಯಾ ಪತ್ರ ಬರೆದಿದ್ದು, ತನ್ನ ಪತಿಯಿಂದ ಅಪಾರ ಚಿತ್ರಹಿಂಸೆಗೆ ಒಳಗಾಗಿರುವುದಾಗಿ ಬರೆದಿದ್ದಾರೆ. “ಪಪ್ಪಾ, ಕ್ಷಮಿಸಿ, ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ಹೇಳಿದ್ದು ಸರಿ. ಅವನು ಅಸಲಿ ವ್ಯಕ್ತಿಯಲ್ಲ. ಅವನು ನನ್ನನ್ನು ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸಿದ್ದಾನೆ. ಇನ್ನು ಈ ನೋವನ್ನು ನಾನು ಸಹಿಸಲಾರೆ. ಪಪ್ಪಾ, ನನ್ನ ಆತ್ಮವು ಇಲ್ಲೇ ಇರುತ್ತದೆ. ಸಿಐ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ; ಪ್ರಾಂಶುಪಾಲೆ ಮತ್ತು ಶಿಕ್ಷಕನ ಬಂಧನ
ಮೂಲಗಳ ಪ್ರಕಾರ, ಕಾನೂನು ವಿದ್ಯಾರ್ಥಿನಿಯಾಗಿದ್ದ ಮೋಫಿಯಾ ಮತ್ತು ಸುಹೇಲ್ ಫೇಸ್ಬುಕ್ನಲ್ಲಿ ಪರಸ್ಪರ ಪರಿಚಯವಾಗಿದ್ದರು. ನಂತರ, ಇಬ್ಬರು ಮದುವೆ ಮಾಡಿಕೊಂಡಿದ್ದರು.
ಅಧಿಕಾರಿ ವಿರುದ್ಧದ ಆರೋಪದ ತನಿಖೆಗಾಗಿ ಅಲುವಾ ಡಿವೈಎಸ್ಪಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಡಿವೈಎಸ್ಪಿ ಅವರ ವರದಿ ಆಧರಿಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಕಾರ್ತಿಕ್ ಅವರು ತಿಳಿಸಿದ್ದಾರೆ.
ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.
ಇದನ್ನೂ ಓದಿ: ಕಾರಣ ಯಾರು ಎಂದು ಹೇಳಲು ಭಯವಾಗುತ್ತಿದೆ; ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಬಾಲಕಿ ಆತ್ಮಹತ್ಯೆ