ಚಿಕ್ಕಮಗಳೂರಿನ ಗುಡಿಸಲು ವಾಸಿಗಳ ಜೀವನ ಪಾಡು ಚಿಂತಾಜನಕ
ಕೊರೋನಾ ವೈರಸ್ ಹರಡುವಿಕೆಯ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯನ್ನು ಬಡಜನರು ಎದುರಿಸುತ್ತಿದ್ದಾರೆ. ಗುಡಿಸಲು ನಿವಾಸಿಗಳ ಗೋಳನ್ನಂತೂ ಕೇಳುವವರೇ ಇಲ್ಲದಂತಾಗಿದೆ. ಚಿಕ್ಕಮಗಳೂರಿನಲ್ಲಿ ವಾಸುತ್ತಿರುವ ವಲಸೆ ಕಾರ್ಮಿಕರು ಗುಡಿಸಲುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದು, ಅವರ ಕತೆ ಚಿಂತಾಜನಕವಾಗಿದೆ.
ಚಿಕ್ಕಮಗಳೂರು ನಗರದ ದಂಟರಮಕ್ಕಿ ಬಡಾವಣೆಯ ಬಯಲಲ್ಲಿ ಗುಡಿಸಲು ಹಾಕಿಕೊಂಡು ಕುಟುಂಬವೊಂದು ವಾಸವಾಗಿದೆ. ಅವರು 24 ದಿನಗಳಿಂದ ಗುಡಿಸಲಿನಿಂದ ಹೊರಬಂದಿಲ್ಲ. ಇವರಿಗೆ ಯಾರಾದರೂ ಊಟ ತಂದುಕೊಟ್ಟರೆ ಆಹಾರ, ಇಲ್ಲವಾದರೆ ಉಪವಾಸವೇ ಗತಿ. ಇವರು ಯಲ್ಲಮ್ಮ ದೇವರನ್ನು ಹೊತ್ತು ಬೀದಿ ಬೀದಿ ಸುತ್ತಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್ ಡೌನ್ ಆಗಿರುವುದರಿಂದ ಗುಡಿಸಲಿನಿಂದ ಹೊರಬಂದಿಲ್ಲ. ಗುಡಿಸಲಿನಲ್ಲೇ ವಾಸ ಮಾಡುತ್ತಿರುವುದರಿಂದ ಚಿಕ್ಕ ಮಕ್ಕಳು ಸೇರಿದಂತೆ ದೊಡ್ಡವರೂ ಹಸಿವಿನಿಂದ ಬಳಲುವಂತಾಗಿದೆ.
ಇಲ್ಲಿನವರಿಗೆ ಮೂರು ಹೊತ್ತು ಅನ್ನ ಸಿಗುತ್ತಿಲ್ಲ. ತರಕಾರಿ ಖರೀದಿಸೋ ಶಕ್ತಿಯೂ ಇಲ್ಲ. ಇಲ್ಲಿನ ಗುಡಿಸಲುಗಳಲ್ಲಿ ಇರುವವರು ಒಪ್ಪೊತ್ತಿನ ಊಟಕ್ಕೂ ಕಣ್ಣೀರು ಹಾಕುತ್ತಿದ್ದಾರೆ. ಲಾಕ್ ಡೌನ್ ಇಲ್ಲದಿದ್ದರೆ ನಾವು ಯಾರ ಬಳಿಯೂ ಸಹಾಯ ಕೇಳುತ್ತಿರಲಿಲ್ಲ. ಆದರೀಗ ನಮ್ಮ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ, ಯಾರಾದರೂ ಬದುಕೋಕೆ ಸ್ವಲ್ಪ ಸಹಾಯ ಮಾಡಿ ಅಂತ ನ್ಯೂಸ್ 18 ಕನ್ನಡದ ಬಳಿ ಗುಡಿಸಲಿನ ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಯಾರಾದರೂ ಕೊಟ್ಟರೆ ಊಟ ಮಾಡಿಕೊಂಡಿದ್ದ ಚಿಕ್ಕಮಗಳೂರಿನ ಹೆಳವ ಸಮುದಾಯದ ಕುಟುಂಬಗಳಿಗೆ ದಾನಿಗಳೂ ನೂರು ದಿನಕ್ಕೆ ಆಗುವಷ್ಟು ಆಹಾರದ ಸಾಮಾಗ್ರಿಗಳನ್ನು ನೀಡಿದ್ದಾರೆ. ಇಲ್ಲಿ ಸುಮಾರು 20 ಮಕ್ಕಳು ಸೇರಿದಂತೆ 14 ಕುಟುಂಬದ 54 ಜನ ವಾಸವಿದ್ದಾರೆ. ಬೀದಿ ಬದಿ ನಾನಾ ರೀತಿಯ ವ್ಯಾಪಾರ ಮಾಡಿಕೊಂಡು ಅಂದೇ ದುಡಿದು ಅಂದೇ ತಿನ್ನುವ ಇವರು ತಿಂಗಳಿಂದ ಹೊತ್ತಿನ ಊಟಕ್ಕೂ ಪರದಾಟ ನಡೆಸಿದ್ದರು. ಎಷ್ಟೋ ದಿನ ದಿನಕ್ಕೆ ಒಂದೇ ಹೊತ್ತು ಊಟ ಸಿಗುತ್ತಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ತಾಲೂಕು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಹಾರ ಸಾಮಗ್ರಿ ವಿತರಿಸಿದ್ದರು.
ಸೋಮವಾರ ಬೆಂಗಳೂರಿನಿಂದ ಬಂದ ದಾನಿಗಳು ಈ ನಿರಾಶ್ರಿತ ಹೆಳವ ಕುಟುಂಬಗಳಿಗೆ 100 ದಿನಕ್ಕೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡಿದ್ದಾರೆ. ಇದೇ ಶೆಡ್ನಲ್ಲಿನ ಮಹಿಳೆಯೊಬ್ಬರು 4 ತಿಂಗಳ ಹಿಂದೆ ಗಂಡುಮಗುವಿಗೆ ಜನ್ಮ ನೀಡಿದ್ದರು. ಲಾಕ್ ಡೌನ್ ಇದ್ದುದರಿಂದ ಅವರಿಗೆ ಹಣವಿಲ್ಲದೆ, ಹೊಟ್ಟೆ ತುಂಬ ಊಟ ಸಿಗದೆ, ತಾಯಿ ತನ್ನ ಮಗುವಿಗೆ ಹೊಟ್ಟೆ ತುಂಬ ಹಾಲು ಕುಡಿಸುವುದಕ್ಕೂ ಕೂಡ ಸಾಧ್ಯವಾಗಿರಲಿಲ್ಲ. ಇದೀಗ, ದಾನಿಗಳು ರೇಷನ್ ಕೊಟ್ಟಿರುವುದರಿಂದ ನಿರಾಶ್ರಿತರ ಮುಖದಲ್ಲಿ ಮಂದಹಾಸ ಮನೆಮಾಡಿದೆ.

